ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯಂದು ಅದ್ಧೂರಿ ಬ್ರಹ್ಮರಥೋತ್ಸವ ನಡೆಯಿತು, ಹೂವಿನಿಂದ ಅಲಂಕೃತಗೊಂಡ ಬ್ರಹ್ಮರಥೋತ್ಸವದ ಸೌಂದರ್ಯವನ್ನ ಭಕ್ತರು ಕಣ್ತುಂಬಿ ಕೊಂಡರು. ಬ್ರಹ್ಮರಥೋತ್ಸವನ್ನ ಹೂವಿನಿಂದ ಸಿಂಗಾರಿಸಿದ್ದು ದೊಡ್ಡಬಳ್ಳಾಪುರದ ಯುವಕರ ತಂಡ.
ದೊಡ್ಡಬಳ್ಳಾಪುರ ತಾಲೂಕು ಕಸವನಹಳ್ಳಿಯ ಅಂಬರೀಷ್ ಅವರು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವನ್ನ ಹೂವಿನಿಂದ ಅಲಂಕಾರ ಮಾಡುವ ಅವಕಾಶವನ್ನ ಪಡೆದಿದ್ದಾರೆ. ಮದುವೆ ಸಮಾರಂಭಗಳಿಗೆ ಮಾತ್ರ ಹೂವಿನ ಅಲಂಕಾರ ಮಾಡಿದ ಅನುಭವ ಅಂಬರೀಷ್ ತಂಡಕ್ಕೆ ಇತ್ತು, ಧಾರ್ಮಿಕ ಕಾರ್ಯಗಳಿಗೆ ಯಾವತ್ತು ಹೂವಿನ ಅಲಂಕಾರ ಮಾಡಿರಲಿಲ್ಲ. ಆದರೂ, ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಮತ್ತು ಬ್ರಹ್ಮರಥೋತ್ಸವವನ್ನು ಹೂವಿನ ಅಲಂಕಾರ ಮಾಡುವ ತೀರ್ಮಾನ ಮಾಡಿ, ಹೂವಿನ ಅಲಂಕಾರದ ಆಸೆಯನ್ನು ದೇವಸ್ಥಾನ ಆಡಳಿತ ಮಂಡಳಿಯ ಮುಂದಿಟ್ಟರು, ಕಳೆದ ವರ್ಷ ಅಂಬರೀಷ್ ರವರಿಗೆ ಬ್ರಹ್ಮರಥೋತ್ಸವದ ಅರ್ಧ ಭಾಗದ ಅಲಂಕಾರ ಮಾಡುವ ಅವಕಾಶವನ್ನ ಆಡಳಿತ ನೀಡಿತ್ತು, ಸಿಕ್ಕ ಅವಕಾಶವನ್ನ ಸಮರ್ಥವಾಗಿ ನಿರ್ವಹಿಸಿದ ಅಂಬರೀಶ್ ಮತ್ತು ಅವರ ತಂಡ ಸೈ ಎನಿಸಿಕೊಂಡಿದೆ.
ನವೆಂಬರ್ 29, ಚಂಪಾಷಷ್ಠಿಯಂದು ನಡೆದ ಬ್ರಹ್ಮರಥೋತ್ಸವನ್ನ ಹೂವಿನಿಂದ ಸಿಂಗಾರಿಸುವ ಸಂಪೂರ್ಣ ಜವಾಬ್ದಾರಿ ಅಂಬರೀಷ್ ಪಾಲಿಗೆ ಬಂದಿತು, 50 ಯುವಕ ತಂಡದೊಂದಿಗೆ ಹೂವಿನ ಅಲಂಕಾರ ಪ್ರಾರಂಭಿಸಿದರು. ಚಿಕ್ಕಬಳ್ಳಾಪುರ ಭಾಗದಲ್ಲಿ ಬೆಳೆಯಲಾದ ಸೇವಂತಿಗೆ, ಗುಲಾಬಿ, ಜರ್ಬೆರಾ, ಚೆಂಡು ಹೂ , ಸುಗಂಧರಾಜ ಹೂವನ್ನು ಸೇದಿದಂತೆ ಒಟ್ಟು 15 ಬಗೆಯ ಹೂಗಳನ್ನು ಅಲಂಕಾರಕ್ಕೆ ಬಳಸಿದ್ದಾರೆ, ದೊಡ್ಡಬಳ್ಳಾಪುರ ಯುವಕರ ತಂಡ ಮಾಡಿದ ಹೂವಿನ ಅಲಂಕಾರಕ್ಕೆ ಮೆಚ್ಚಿಗೆ ಸಹ ವ್ಯಕ್ತವಾಗಿದೆ.