ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ; ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಲೋಕಾರ್ಪಣೆ

ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕ ಮತ್ತು ಕಿಂಚಿತ್ತೂ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ಹಸುವ ಜನಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಕಾವೇರಿ 2.0 ತಂತ್ರಾಂಶ ಅಭಿವೃದ್ದಿಪಡಿಸಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖಾ ಐಜಿಆರ್ ಡಾ.ಬಿ.ಆರ್.ಮಮತಾ ತಿಳಿಸಿದರು.

ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೂತನ ತಂತ್ರಾಂಶ ಕಾವೇರಿ 2.0 ತಂತ್ರಜ್ಞಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದರಿಂದ ನಕಲಿ ದಾಖಲೆ ನೀಡಿ ನೋಂದಣಿ ಪ್ರಕ್ರಿಯೆಗೆ ಕಡಿವಾಣ ಬೀಳಲಿದ್ದು, ಕಚೇರಿಗೆ ಬಂದು ದಿನವಿಡಿ ಕಾಯುವುದು ತಪ್ಪುತ್ತದೆ. ಮನೆಯಲ್ಲೇ ಕುಳಿತು ಸಂಬಂಧಿಸಿದ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಿ ನಿಗದಿಪಡಿಸಿದ ದಿನದಂದು ಕಚೇರಿಗೆ ಬಂದು ಭಾವಚಿತ್ರ ಹೆಬ್ಬಟ್ಟಿನ ಗುರುತು ನೀಡಿದ ನಂತರ ನೋಂದಣಿ ಮಾಡಲಾಗುವುದು. 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ನಾಗರೀಕರು ನೋಂದಣಿ ಕಚೇರಿಗೆ ಬರುವಾಗ ಮೊದಲು ಎಲ್ಲಾ ಡೇಟಾ ಮತ್ತು ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಕಚೇರಿಗೆ ಸಲ್ಲಿಸಬೇಕು. ಇವುಗಳನ್ನು ಪರಿಶೀಲಿಸಿ ನಿಗದಿತ ಶುಲ್ಕ ಪಾವತಿಸಲು ತಿಳಿಸಲಾಗುತ್ತದೆ.

ನಾಗರಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆ ದಿನಾಂಕ ಮತ್ತು ಸಮಯ ನಿಗದಿಪಡಿಸಬಹುದಾಗಿದೆ. ತಮ್ಮ ಭಾವಚಿತ್ರ ಹೆಬ್ಬೆರಳು ಗುರುತು ಸೆರೆಹಿಡಿಯುವ ಸಂದರ್ಭದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿರುವ ದಸ್ತಾವೇಜನ್ನು ನಾಗರಿಕರ ಲಾಗಿನ್ ಗೆ ಮತ್ತು ಅವರ ಡಿಜಿ ಲಾಕರ್ ಖಾತೆಗೆ ಕಳುಹಿಸಲಾಗುವುದು. ದಸ್ತಾವೇಜಿನ ಮಾಹಿತಿಯನ್ನು ಸಂಬಂಧಿತ ಇಲಾಖೆಯ ಖಾತಾ ಬದಲಾವಣೆಗೆ ಕಳುಹಿಸಲಾಗುತ್ತದೆ ಎಂದರು.

ಈ ವೇಳೆ ಡಿ‌.ಆರ್ ಮಹಮ್ಮದ್ ಯೂಸುಫ್, ಸಂಯೋಜಕಿ ಶ್ರೀದೇವಿ,ಉಪನೋಂದಣಾಧಿಕಾರಿಗಳಾದ ಸತೀಶ್, ಡಾ. ಬಿ.ಆರ್ ಅನುಪಮಾ ಇದ್ದರು.

Leave a Reply

Your email address will not be published. Required fields are marked *