
ಕೊಡಗಿನ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಾಳು ಮೆಣಸು ಕಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಸೋಮವಾರಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ರೂ. 2.4 ಲಕ್ಷ ಮೌಲ್ಯದ 360 ಕೆ.ಜಿ. ಕಾಳು ಮೆಣಸು ಹಾಗೂ ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ನಿವಾಸಿ ಸುಮಂತ್, ಕಿಬೆಟ್ಟ ಗ್ರಾಮದ ಕೀರ್ತಿ, ಕೊಣನೂರು ಗ್ರಾಮದ ಮಣಿಕಂಠ ಹಾಗೂ ಕೆ.ಆರ್. ಪೇಟೆಯ ಸಚಿನ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಕಾಳು ಮೆಣಸಿನ ಚೀಲಗಳನ್ನು ವಾಹನದ ಮೂಲಕ ಸಾಗಿಸುತ್ತಿದ್ದ ವೇಳೆ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.