ಕಾಮಗಾರಿಗಳಿಗೆ ಹಣ ಬಿಡುಗಡೆ ವಿಳಂಬ: ಸಾಲದ‌ ಸುಳಿಯಲ್ಲಿ ಗುತ್ತಿಗೆದಾರರು- ಗುತ್ತಿಗೆದಾರ ಸಂಘದ ತಾಲೂಕು ಅಧ್ಯಕ್ಷ ಜಿ.ಲಕ್ಷ್ಮೀಪತಿ

ಕಾಮಗಾರಿಗಳು ಸಂಪೂರ್ಣವಾಗಿ ಮುಕ್ತಾಯವಾದ ಕೂಡಲೇ ಕಾಮಗಾರಿ ಗುಣಮಟ್ಟ ಕುರಿತಂತೆ 3ನೇ ವ್ಯಕ್ತಿ ತಪಾಸಣೆ ನಂತರ ತಾಲ್ಲೂಕು ಹಂತದಲ್ಲೇ ಬಿಲ್ ಪಾವತಿಗಳು ನಡೆಯುತ್ತಿದ್ದವು. ಆದರೆ ಈಗ ಕಾಮಗಾರಿ ನಡೆದು ಎಲ್ಲಾ ರೀತಿಯ ಪರಿಶೀಲನೆಗಳು ಮುಕ್ತಾಯವಾದರೂ ಇಲಾಖೆಯ ಹಿರಿಯ ಅಧಿಕಾರಿಗಳ ಸಹಿಗೆ ಹಾಗೂ ಬಿಲ್ ಬಿಡುಗಡೆ ಮಾಡಿಸಿಕೊಳ್ಳಲು ತಿಂಗಳುಗಟ್ಟಲೆ ಕಾದು ಕುಳಿತುಕೊಳ್ಳುವಂತಾಗಿದೆ. ಈ ವಿಳಂಬ ನೀತಿಯಿಂದ ಗುತ್ತಿಗೆದಾರರು ಸಾಲಗಾರರಾಗುವಂತಾಗಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಿವಿಲ್ ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ತಾಲ್ಲೂಕು ಹಂತದ ಅಧಿಕಾರಿಗಳು ಕಚೇರಿಗಳಲ್ಲಿ ಇರುವುದೇ ಅಪರೂಪವಾಗುತ್ತಿದೆ. ಇದು ಸಹ ಬಿಲ್ ಪಾವತಿ, ಕಾಮಗಾರಿಗಳ ಪರಿಶೀಲನೆಗೆ ದೊಡ್ಡ ಅಡ್ಡಿಯಾಗಿದೆ ಎಂದು ದೂರಿದರು.

ಜಲ ಜೀವನ್ ಮೀಷನ್ ಯೋಜನೆಯಲ್ಲಿ ಜಿಲ್ಲೆಗೆ ರೂ.40 ಕೋಟಿ ಬಿಡುಗಡೆಯಾಗಿದ್ದರು ಸಹ ಗುತ್ತಿಗೆದಾರರು ಹಣ ಪಡೆಯಲು ವಿವಿಧ ಹಂತಗಳ ಅಧಿಕಾರಿಗಳ ಸಹಿಗೆ ಕಾದು ಕುಳಿತುಕೊಳ್ಳುವಂತಾಗಿದೆ. ಬಿಲ್ ಪಾವತಿಗೆ ಇರುವ ಹಂತಗಳನ್ನು ಕಡಿಮೆಗೊಳೀಸಬೇಕು ಎಂದು ಹೇಳಿದರು.

ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವ ಸಂದರ್ಭದಲ್ಲೇ ಜಿಎಸ್ ಟಿ ಸೇರಿದಂತೆ ಎಲ್ಲಾ ರೀತಿಯ ತೆರಿಗೆಗಳನ್ನು ಕಡಿತಮಾಡಿಕೊಂಡ ನಂತರವೇ ಆನ್ ಲೈನ್ ಮೂಲಕ ಕಾಮಗಾರಿಯ ಹಣ ಪಾವತಿಯಾಗುತ್ತಿದೆ ಎಂದು ತಿಳಿಸಿದರು.

2017 ರಿಂದ ಇಲ್ಲಿಯವರೆಗೆ ಕಡಿತ ಮಾಡಿಕೊಂಡಿರುವ ಲಕ್ಷಾಂತರ ರೂಪಾಯಿ ಜಿಎಸ್ ಟಿ ಹಣ ಗುತ್ತಿಗೆದಾರರಿಗೆ ಮರುಪಾವತಿಯಾಗಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸುತ್ತಲೇ ಬರಲಾಗುತ್ತಿದೆ. ಇತ್ತೀಚೆಗೆ ವಾಣಿಜ್ಯ ತೆರಿಗೆ, ಜಿಎಸ್ ಟಿ ಇಲಾಖೆಗಳಿಂದ ಗುತ್ತಿಗೆದಾರರಿಗೆ ವಿನಾಕಾರಣ ನೋಟಿಸ್ ಗಳನ್ನು ನೀಡುವ ಮೂಲಕ ಇಲ್ಲಸಲ್ಲದ ಮಾಹಿತಿಗಳನ್ನು ಕೇಳುತ್ತ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಮೂಲದಲ್ಲೇ ತೆರಿಗೆ ಕಡಿತ ಮಾಡಿಕೊಂಡ ನಂತರವೂ ಸಹ ನೋಟಿಸ್ಗಳನ್ನು ನೀಡುವ ಕೆಟ್ಟ ಪದ್ಧತಿ ನಿಲ್ಲಬೇಕಿದೆ ಎಂದು ಆಗ್ರಹಿಸಿದರು.

ಟೆಂಡರ್ ಪ್ರಕ್ರಿಯೆ ನಂತರ ಗುತ್ತಿಗೆದಾರರು ಕಾರ್ಯಾದೇಶ ಪಡೆದು ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆಗೆ ತಿಂಗಳು ಗಟ್ಟಲೆ ಕಾಯುವಂತಹ ಪರಿಸ್ಥಿತಿ ಉಂಟಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಸಮಯ ನೀಡುವವರೆಗೂ ಕಾದುಕುಳಿತುಕೊಳ್ಳುವಂತಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಕಾಮಗಾರಿಗಳನ್ನು ಮಾಡಿಮುಗಿಸುವುದು ಕಷ್ಟವಾಗಿದೆ. ಕಾರ್ಯಾದೇಶ ನೀಡುತ್ತಿದ್ದಂತೆ ಕೆಲಸ ಪ್ರಾರಂಭಿಸಿದರೆ ಆರ್ಥಿಕ ವರ್ಷ ಕೊನೆಗೊಳ್ಳುವ ಮುನ್ನ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪಂಚಾಯಿತ್ ರಾಜ್ ಇಲಾಖೆ ವತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ಕಾರ್ಯಾದೇಶ ಪಡೆದು ಕಾಮಗಾರಿಗಳನ್ನು ಮಾಡಿ ಮುಗಿಸಲಾಗಿದೆ. ಆದರೆ ಸರ್ಕಾರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ನೀಡಿ ಹಣ ಹಿಂದಕ್ಕೆ ಪಡೆದಿದೆ. ಸರ್ಕಾರವೇ ಕಾರ್ಯಾದೇಶ ನೀಡಿದ ನಂತರ ಈಗ ಹಣ ನೀಡದೆ ಹಿಂದಕ್ಕೆ ಪಡೆದಿರುವುದು ಸರಿಯಲ್ಲ. ತಕ್ಷಣ 15ನೇ ಹಣಕಾಸು ಅಥವಾ ಬೇರಾವುದೇ ನಿಧಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಕೆ.ಬಿ.ಬಚ್ಚೇಗೌಡ, ಕಾರ್ಯದರ್ಶಿ ಲಕ್ಷ್ಮೀಕಾಂತ, ಖಜಾಂಚಿ ಎ.ಚಂದ್ರಣ್ಣ, ದೇವನಹಳ್ಳಿ ಘಟಕದ ಅಧ್ಯಕ್ಷ ಸುಬ್ರಹ್ಮಣಿ, ನೆಲಮಂಗಲ ಅಧ್ಯಕ್ಷ ಪವನ್ಕುಮಾರ್, ಹೊಸಕೋಟೆ ಅಧ್ಯಕ್ಷ ಕೇಶವಮೂರ್ತಿ, ಗುತ್ತಿಗೆದಾರರಾದ ಆರೂಢಿ ಹರೀಶ್, ನಾರನಹಳ್ಳಿ ಕೆಂಪೇಗೌಡ ಮತ್ತಿತರರಿದ್ದರು

Leave a Reply

Your email address will not be published. Required fields are marked *

error: Content is protected !!