ಪ್ರಧಾನಿ ಮೋದಿ ಪ್ರಕಾರ ಕಾಂಗ್ರೆಸ್ 85% ಸರ್ಕಾರ, ಕಾಂಗ್ರೆಸ್ ಹೇಳುತ್ತೆ ಬಿಜೆಪಿ 40% ಸರ್ಕಾರ ಎನ್ನುತ್ತಾರೆ. ಆದರೆ ಜನರ ತೆರಿಗೆ ಹಣವನ್ನು ಗುಣಾತ್ಮಕವಾಗಿ ಖರ್ಚು ಮಾಡುವ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಚಿಂತನೆ ಇಲ್ಲ- ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಡಾ.ರಾಜ್ ಕುಮಾರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಉತ್ತರ ಭಾರತದ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಕರ್ನಾಟಕ ನೆನಪು, ಮಮಕಾರ, ಪ್ರೀತಿ ಬರುತ್ತದೆ. ಅಕಾಲಿಕ ಮಳೆ ಬಂದಾಗ, ಬರಗಾಲ ಬಂದಾಗ, ಇನ್ನೇನೋ ಸಮಸ್ಯೆ ಆದಾಗ ನಮ್ಮ ರಾಜ್ಯ ನೆನಪು ಬರೋದಿಲ್ಲ, ಇತ್ತ ಸುಳಿಯುವುದಿಲ್ಲ ಎಂದು ಗುಡುಗಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕನ್ನಡ ನಾಡಿನ ಹಲವು ಸಮಸ್ಯೆಗಳನ್ನು ರಾಷ್ಟ್ರೀಯ ಪಕ್ಷಗಳಿಂದ ಬಗೆಹರಿಸಲು ಸಾಧ್ಯವಾಗಿಲ್ಲ.
ವಿಷ ಕನ್ಯೆ ಎಂದು ಬಿಜೆಪಿ ಕಾಂಗ್ರೆಸ್ ಗೆ ಹೇಳಿ, ವಿಷ ಸರ್ಪ ಎಂದು ಕಾಂಗ್ರೆಸ್ ಬಿಜೆಪಿಗೆ ಬಿರುದು ಕೊಟ್ಟುಕೊಂಡು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲಕಳೆಯುತ್ತಿರುವ ರಾಷ್ಟ್ರೀಯ ಪಕ್ಷಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚರತ್ನ ಯೋಜನೆ ಜಾರಿಗೆ ಆಗಬೇಕಾರೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಬೇಕು, ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದರೆ ಪಂಚರತ್ನ ಯೋಜನೆ ಜಾರಿಗೆ ತರಲು ಅಸಾಧ್ಯ ಆದ್ದರಿಂದ ಈ ಬಾರಿ ಹೆಚ್ಚು ಬಹುಮತ ನೀಡಬೇಕು ಆಗ ಸ್ವತಂತ್ರ ಸರ್ಕಾರ ರಚನೆ ಮಾಡಿ ಕನ್ನಡ ನಾಡನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.
ಕಮಿಷನ್ ಸರ್ಕಾರಗಳನ್ನು ತೊಲಗಿಸಲು ಜೆಡಿಎಸ್ ಗೆ ಶಕ್ತಿ ನೀಡಿ. ಪಂಚರತ್ನ ಯೋಜನೆ ಜಾರಿಗೆ ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಮಾಡಿದ್ದೇನೆ. ನನಗೆ ಬಡವ ಶ್ರೀಮಂತ ಬೇಧಭಾವ ಇಲ್ಲ, ಜಾತಿ ಧರ್ಮ ಇಲ್ಲ ನನಗೆ ಎಲ್ಲರೂ ಒಂದೆ. ನೇಕಾರ, ಮಡಿವಾಳ ಸೇರಿ ಎಲ್ಲಾ ಸಮುದಾಯಕ್ಕೆ ಸಮನಾಗಿ ಎಲ್ಲಾ ಕಸುಬುಗಳಿಗೆ ಆರ್ಥಿಕ ಉತ್ತೇಜನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಮಹಿಳೆಯರು ಸ್ವಾಭಿಮಾನ, ಸ್ವಾವಲಂಬಿ ಬದುಕಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.
ಬೃಹತ್ ಕೈಗಾರಿಕಾಗಳಿಗೆ ನೀಡುವ ವಿವಿಧ ಸಬ್ಸಿಡಿಗಳು ಕಡಿತ ಮಾಡಿ ನಾಡಿನ ವಿದ್ಯಾವಂತ ಯುವ ಜನತೆಗೆ ಆ ಹಣವನ್ನು ನೀಡಲಾಗುವುದು. ಮಹಿಳೆಯರಿಗೆ ಒಂದು ಲಕ್ಷ ಸಾಲ ನೀಡಿ ೯೦ ಸಾವಿರ ಸಬ್ಸಿಡಿ ನೀಡುತ್ತೇವೆ.
ಕಮಿಷನ್ ಸರ್ಕಾರಕ್ಕೆ ಕಡಿವಾಣ ಹಾಕಿ ತೆರಿಗೆ ಹಣದಿಂದ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇನೆ. ನೇಕಾರರಿಗೆ ವಸ್ತ್ರ ಬ್ಯಾಂಕ್ ಸ್ಥಾಪಿಸಿ ಮಾರುಕಟ್ಟೆ ಸೃಷ್ಟಿಸಲಾಗುವುದು ಎಂದರು.
ಮಿಸ್ಟರ್ ಕುಮಾರಸ್ವಾಮಿ ನೀನು ನೂರು ಪಂಚರತ್ನ ಯೋಜನೆ ಕೊಟ್ಟರು ನಿನಗೆ 20-25 ಸ್ಥಾನ ಗಟ್ಟಿ ಎಂದು ಸಿದ್ದರಾಮಯ್ಯ ಲೇವಡಿ ವಿಚಾರಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ
ಇಂತಹ ದುರಹಂಕಾರದ ಮಾತುಗಳನ್ನು ಬಿಡಬೇಕು. ಇದಕ್ಕೆ ಮುಂದೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ.
ಆರೋಗ್ಯವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆ ಸುತ್ತಿದ್ದೇನೆ. ತಾಲ್ಲೂಕಿನಲ್ಲಿ ಮುನೇಗೌಡ ಮೂರು ಬಾರಿ ಸೋತು, ನಾಲ್ಕನೆಯ ಬಾರಿಗೆ ಸ್ಪರ್ಧಿಸಿದ್ದಾರೆ.. ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ನಾಲ್ಕನೇ ಬಾರಿಯಾದರೂ ಮೋಕ್ಷ ನೀಡಿ ಎಂದರು.
ದೊಡ್ಡಬಳ್ಳಾಪುರದ ಸ್ಥಳೀಯ ಸಮಸ್ಯೆಗಳಾದ ಯುಜಿಡಿ, ಎಂಎಸ್ಜಿಪಿ ಘಟಕಕ್ಕೆ ಬೀಗ, ನೇಕಾರರ ಮಗ್ಗಗಳಿಗೆ 25 ಹೆಚ್.ಪಿ ವರೆಗೆ ಸಬ್ಸಿಡಿ ನೀಡಿ, ರೈತರ ಹಾಲಿನ ಸಬ್ಸಿಡಿ ದರ 8 ರೂ.ಗೆ ಏರಿಕೆ ಮಾಡಲಾಗುವುದು ಎಂದರು.
ಅಭ್ಯರ್ಥಿ ಮುನೇಗೌಡ ಮಾತನಾಡಿ ಈ ಬಾರಿಯ ಚುನಾವಣೆಗೆ ಜನರೇ ಸ್ವಯಂ ಪ್ರೇರಿತರಾಗಿ ಸಿದ್ಧರಾಗಿದ್ದಾರೆ. ಇದಕ್ಕೆ ಸಾಕ್ಷಿ ಕನ್ನಡ ಪಕ್ಷ, ಸಿಪಿಐಎಂ ಬೆಂಬಲ ಸೂಚಿಸಿರುವುದು. ತಾಲ್ಲೂಕಿನ ಎಲ್ಲಾ ಹಿರಿಯ, ಕಿರಿಯ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದು, ಮುಸ್ಲಿಂ ಸಮುದಾಯದ ಮುಖಂಡರು ಈ ಬಾರಿ ಜೆಡಿಎಸ್ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ ಎಂದರು.
ಇನ್ನು ನಮ್ಮ ರಾಜ್ಯ ರಾಮರಾಜ್ಯ ಆಗಬೇಕಾದರೆ ಪಂಚರತ್ನ ಯೋಜನೆ ಜಾರಿಯಾಗಬೇಕು ಹೀಗಾಗಿ ಬಹುಮತದ ಸರ್ಕಾರ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತ.ನ ಪ್ರಭುದೇವ, ಇ ಕೃಷ್ಣಪ್ಪ, ಲಕ್ಷ್ಮೀಪತಯ್ಯ, ವೆಂಕಟೇಶ್ ಬಾಬು, ಡಾ.ವಿಜಯ್ ಕುಮಾರ್, ಹರೀಶ್ ಗೌಡ, ಹುಸ್ಕೂರು ಆನಂದ್, ವಡ್ಡರಹಳ್ಳಿ ರವಿ, ಕೆಂಪರಾಜು, ಸತ್ಯನಾರಾಯಣ, ಪದ್ಮಾವತಿ ಮುನೇಗೌಡ, ಮಲ್ಲೇಶ್, ಸುನೀಲ್, ಕನ್ನಡ ಪಕ್ಷದ ಸಂಜೀವ್ ನಾಯಕ್, ಡಿ ವೆಂಕಟೇಶ್ ಮತ್ತಿತರರು ಇದ್ದರು.