ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ತಿ.ರಂಗರಾಜು, ಎಂ.ಜಿ.ಶ್ರೀನಿವಾಸ್ ಕನಸವಾಡಿಯ ಪ್ರಕಾಶ್, ಬಿ ಎಚ್ ಕೆಂಪಣ್ಣ, ದಲಿತ ಮುಖಂಡ ಮರಿಯಪ್ಪ ಮತ್ತು ಕಿಸಾನ್ ಕಾಂಗ್ರೆಸ್ ಮುಖಂಡರಾಗಿದ್ದ ಕುಮುದ ಜಗದೀಶ್ ಹಾಗೂ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಡಾ.ಸುಧಾಕರ್ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿದರು.
ಹಾಲಿ ಶಾಸಕ ಟಿ.ವೆಂಕಟರಮಣಯ್ಯ ಅವರ ವಿರುದ್ಧ ತಿರುಗಿಬಿದ್ದು, ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು, ಕಾಂಗ್ರೆಸ್ ಸ್ವಾಭಿಮಾನಿ ಬಣ ಕಟ್ಟಿಕೊಂಡಿದ್ದ ನಾಯಕರು ಇದೀಗ ಕಮಲ ಪಾಳಯ ಸೇರಿದ್ದಾರೆ.
ಶಾಸಕ ಟಿ.ವೆಂಕಟರಮಣಯ್ಯ ಅವರ ಆಡಳಿತ ವಿರೋಧಿ ಅಲೆಗೆ ಬೇಸತ್ತು ಬಿ.ಸಿ.ಆನಂದಕುಮಾರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕಾಂಗ್ರೆಸ್ ಬಣದ ಮುಖಂಡರು ನೂರಾರು ಕಾರ್ಯಕರ್ತರೊಂದಿಗೆ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ, ಹೈಕಮಾಂಡ್ ಗೆ ಗಡುವು ನೀಡಿದ್ದರು.
ಈ ಮಧ್ಯೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರು ಬಿ.ಸಿ.ಆನಂದ್ ಅವರನ್ನು ಮನವೊಲಿಸಿ, ಹಾಲಿ ಶಾಸಕರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಕಾಂಗ್ರೆಸ್ ನಾಯಕರ ಈ ಧೋರಣೆಗೆ ಸ್ವಾಭಿಮಾನಿಬಣದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಮದ್ಯೆ ಬಿ.ಸಿ.ಆನಂದ್, ತಿ.ರಂಗರಾಜು ಅವರು ಸ್ಥಳೀಯ ಬಿಜೆಪಿ ನಾಯಕರು ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೊಟ್ಟಿಗೆ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ, ಕುತೂಹಲ ಮೂಡಿಸಿದ್ದರು.
ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಕೆಪಿಸಿಸಿ ಸದಸ್ಯ ಹಾಲಿ ನಗರಸಭಾ ಸದಸ್ಯ ಎಂ.ಜಿ.ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇದಕ್ಕೆ ತಿ.ರಂಗರಾಜು ಹಾಗೂ ಬಿ.ಸಿ.ಆನಂದ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಏ.8 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ಬಣದ ಮುಖಂಡರು ಕಮಲ ಮುಡಿದಿದ್ದು, ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.