ಕೋಲಾರ: ಕಾಂಗ್ರೆಸ್ ಪಕ್ಷದವರು ಮನೆಮುರುಕ ಸಂಸ್ಕೃತ ಉಳ್ಳವರಾಗಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಮತ್ತೊಬ್ಬರ ಮನೆ ಹಾಳು ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರಿಗೆ ಯಾವುದೇ ತತ್ವಸಿದ್ಧಾಂತಗಳು ಇಲ್ಲ ಯಾರ ಮನೆ ಬೇಕಾದರೂ ಹಾಳು ಮಾಡಲು ಸಿದ್ದರಿದ್ದಾರೆ ಅದಕ್ಕಾಗಿ ನಿದ್ದೆಗೆಟ್ಟು ಕಾಯುತ್ತಿರುತ್ತಾರೆ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಗೊಂದಲ ಮೂಡಿಸಲು ಹಾಗೂ ಜೆಡಿಎಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವುದೇ ಅವರ ಉದ್ದೇಶವಾಗಿದೆ ಎಂದು ಟೀಕಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದರೂ ಕಾಂಗ್ರೆಸ್‌ನ ದಾಹ ತೀರಿದಂತಿಲ್ಲ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ನೋಡುತ್ತಿದ್ದಾರೆ. ಆದರೆ, ಶಾಸಕರಾದ ಸಮೃದ್ಧಿ ಮಂಜುನಾಥ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಇವರಿಬ್ಬರೂ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ನಿಷ್ಠರಾಗಿ ಮನೆ ಮಕ್ಕಳಂತೆ ಇದ್ದಾರೆ ಪಕ್ಷದ ನೀತಿ ನಿಯತ್ತಿಗೆ ಬದ್ಧವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಅನಿಲ್ ಕುಮಾರ್ ಅವರ ಆಟ ಯಾವುದೇ ಕಾರಣಕ್ಕೂ ನಡೆಯಲ್ಲ ಮೊದಲು ಮನೆಹಾಳು ಕೆಲಸ ಮಾಡುವುದನ್ನು ಬಿಡಬೇಕು ಈಗಾಗಲೇ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಅವರನ್ನು ಯಾಕಾಗಿ ಗೆಲ್ಲಿಸಿದೆವೋ ಎಂದು ಕೋಲಾರ ಜನರು ಶಾಪ ಹಾಕುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಹಾಗೂ ದೇವೇಗೌಡರ ನಾಯಕತ್ವದಲ್ಲಿ ಕೋಲಾರ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ತಿಳಿಸಿದರು.
ತಮ್ಮ ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ ಹೋಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಮೂರು ದಿನಗಳ ಹಿಂದೆಯಷ್ಟೇ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ ಭಾಗಿಯಾಗಿದ್ದರು. ಕೋಲಾರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಒಟ್ಟಾಗಿ ಚರ್ಚಿಸಲಾಗಿದೆ ಎಂದು ಬಣಕನಹಳ್ಳಿ ನಟರಾಜ್ ಹೇಳಿದರು.