ಕಾಂಗ್ರೆಸ್ ಪಕ್ಷಕ್ಕೆ ಸೇರಲು ಜೆಡಿಎಸ್‌ನ ಇಬ್ಬರು ಶಾಸಕರು ಸಿದ್ಧ- ಸ್ಪೋಟಕ ಸುಳಿವು ನೀಡಿದ ಶಾಸಕ ಕೊತ್ತೂರು ಮಂಜುನಾಥ್ !

ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಕಾಂಗ್ರೆಸ್‌ಗೆ ಸೇರಲು ಪಕ್ಷದ ಹಿರಿಯ ಸಮ್ಮುಖದಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯೊಂದಕ್ಕೆ ಆಗಮಿಸಿದ ವೇಳೆ ಶಾಸಕದ್ವಯರಾದ ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಸಹಕಾರದಲ್ಲಿ ಕೋಲಾರದ ಇಬ್ಬರು ಜೆಡಿಎಸ್ ಶಾಸಕರು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಹ ಖಚಿತ ಪಡಿಸಿದ್ದು, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿರುವ ಸ್ಪೋಟಕ ಮಾಹಿತಿಯನ್ನು ಶಾಸಕ ಕೊತ್ತೂರು ಮಂಜುನಾಥ್ ನೀಡಿದ್ದಾರೆ.

ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ, ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಕಾಂಗ್ರೆಸ್ ಸೇರುತ್ತಾರೆ. ಇಬ್ಬರು ಜೆಡಿಎಸ್ ಶಾಸಕರು ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಈಗಾಗಲೇ ಶ್ರೀನಿವಾಸಪುರದಲ್ಲಿ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಜಿ ಶಾಸಕ ರಮೇಶ್ ಕುಮಾರ್ ಜೊತೆ ಚರ್ಚೆ ಮಾಡಿದ್ದಾರೆ. ರಮೇಶ್ ಕುಮಾರ್ ಅವರ ಜೊತೆ ಜೆಡಿಎಸ್ ಶಾಸಕರ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಮುಂಚೆಯೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ, ವೆಂಕಟಶಿವಾರೆಡ್ಡಿ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿ ರಮೇಶ್ ಕುಮಾರ್ ಅವರಿಂದ ಸೂಚಕರಾಗಿ ಸಹಿ ಮಾಡಿಸಿ ಅವರನ್ನು ಗೆಲ್ಲಿಸಿಕೊಳ್ಳತ್ತೇವೆ, ಅದೇ ರೀತಿ ಸಮೃದ್ಧಿ ಮಂಜುನಾಥ್ ರಾಜೀನಾಮೆ ನೀಡಿದರೆ, ಮುಂದೆ ನಡೆಯುವ ಮದ್ಯಂತರ ಚುನಾವಣೆಯಲ್ಲಿ ಸಮೃದ್ಧಿ ಮಂಜುನಾಥ್ ಅವರಿಗೆ ಸ್ವತಃ ಕೊತ್ತೂರು ಮಂಜುನಾಥ್ ಅದ ನಾನೇ ಸೂಚಕನಾಗುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಅನಿಲ್‌ಕುಮಾರ್ ಮಾತನಾಡಿ, ಜೆಡಿಎಸ್ ಶಾಸಕರು ಪಕ್ಷ ಸೇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿರುವ ಹಿನ್ನಲೆ ಹೈಕಮಾಂಡ್ ಹೇಳಿದಂತೆ ಪಕ್ಷದ ಬಲವರ್ಧನೆಗಾಗಿ ಕೆಲಸ ಮಾಡುತ್ತೇವೆ. ವೆಂಕಟಶಿವಾರೆಡ್ಡಿ ಪಕ್ಷಕ್ಕೆ ಸೇರಿದರೆ ರಮೇಶ್ ಕುಮಾರ್ ಅವರ ಸ್ಥಾನಮಾನ ಅಭಾಧಿತವಾಗಿರುತ್ತದೆ. ರಮೇಶ್‌ಕುಮಾರ್ ಅವರನ್ನು ಪರಿಷತ್ ಅಥವಾ ರಾಜ್ಯಸಭಾ ಸದಸ್ಯತ್ವ ನೀಡಿಯಾದರೂ ಅವರನ್ನು ಪಕ್ಷ ಉಳಿಸಿಕೊಳ್ಳುತ್ತದೆ ಎಂದರು.

ಲೋಕಸಭಾ ಚುನಾವಣೆಗೂ ಮುಂಚಿತವಾಗಿಯೇ ಈ ಬೆಳವಣಿಗೆ ನಡೆಯುತ್ತಿರುವುದು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಾಯವಾಗಲಿದೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಇನ್ನೂ ತಯಾರಾಗಿಲ್ಲ, ಊಹಾಪೋಹಗಳಿಗೆ ಕಿವಿಗೊಡುವ ಅವಶ್ಯಕತೆಯಿಲ್ಲ, ಪಕ್ಷದ ಅಧ್ಯಕ್ಷರಾಗಲೀ, ಮುಖ್ಯಮಂತ್ರಿಗಳಾಗಲೀ ಅಥವಾ ರಾಜ್ಯದ ಉಸ್ತುವಾರಿಯಾದ ಸುರ್ಜೇವಾಲ ಆಗಲಿ ಯಾರೂ ಸಹ ಪಕ್ಷದೆ ಪಟ್ಟಿಯ ಬಗ್ಗೆ ಮಾಹಿತಿ ನೀಡಿಲ್ಲ, ಅಂತಿಮವಾಗಿ ಹೈಕಮಾಂಡ್ ತೀರ್ಮಾನದಂತೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *