ಕಾಂಗ್ರೆಸ್ ತಂತ್ರಕ್ಕೆ ಬ್ರೇಕ್ ಹಾಕಿದ ಶಾಸಕ ಧೀರಜ್ ಮುನಿರಾಜ್: ಮತ್ತೆ ನಗರಸಭೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದ ಬಿಜೆಪಿ-ಜೆಡಿಎಸ್ ಮೈತ್ರಿ: ನೂತನ ಅಧ್ಯಕ್ಷೆ ಸುಮಿತ್ರ ಆನಂದ್- ಉಪಾಧ್ಯಕ್ಷರಾಗಿ ಮಲ್ಲೇಶ್ ಆಯ್ಕೆ: ಗಣ್ಯರಿಂದ ಅಭಿನಂದನೆ

ನಿರೀಕ್ಷೆಯಂತೆಯೇ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರವನ್ನು ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಹಂಚಿಕೊಂಡಿದೆ. ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿಗೆ ನಗರಸಭೆ ಚುಕ್ಕಾಣಿ ದೊರೆತಿದೆ.

ಸೋಮವಾರ ನಗರದ ನಗರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೊದಲೇ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಿಕೊಂಡಿದ್ದವು. ಈ ಪ್ರಕ್ರಿಯೆ ಸುಗಮವಾಗಿ ಸಾಗುವ ಮೂಲಕ ಅಧ್ಯಕ್ಷ ಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಕ್ಕಾಗಿ ಶಾಸಕ ಧೀರಜ್ ಮುನಿರಾಜು ರಣತಂತ್ರ ರೂಪಿಸಿದ್ದರು. ನಿರೀಕ್ಷೆಯಂತೆಯೇ ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ದೊರಕಿದೆ.

ಬಿಜೆಪಿಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ ಪಾಲು

ಅಧ್ಯಕ್ಷ ಸ್ಥಾನಕ್ಕೆ ಕಮಲ-ದಳ ಮೈತ್ರಿಯಿಂದ ಸ್ಪರ್ಧಿಸಿದ್ದ ಸುಮಿತ್ರ ಆನಂದ್ (ಬಿಜೆಪಿ) ಅವರಿಗೆ ಸಂಸದ ಮತ್ತು ಶಾಸಕ ಇಬ್ಬರ ಮತ ಸೇರಿ 23 ಮತಗಳು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸ್ಥಾನಕ್ಕೆ ರೂಪಿಣಿ ಮಂಜುನಾಥ್ 10 ಮತಗಳು ದೊರೆತಿದ್ದು, 23 ಮತಗಳನ್ನು ಪಡೆದ ಸುಮಿತ್ರ ಆನಂದ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಮಲ-ದಳ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲೇಶ್ (ಜೆಡಿಎಸ್) ಅವರಿಗೆ ಸಂಸದ ಮತ್ತು ಶಾಸಕ ಇಬ್ಬರ ಮತ ಸೇರಿ 23 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ಅವರಿಗೆ 10 ಮತಗಳು ದೊರೆತಿದ್ದು, 23 ಮತಗಳನ್ನು ಪಡೆದ ಮಲ್ಲೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ವಿಪ್ ಜಾರಿ

ಚುನಾವಣೆ ಹಿನ್ನಲೆಯಲ್ಲಿ ಮೂರು ಪಕ್ಷಗಳಿಂದ ವಿಪ್ ಜಾರಿ ಮಾಡಲಾಗಿತ್ತು. ಈ ಪೈಕಿ ಇಬ್ಬರು ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರ್ಪಡೆಯಾಗಿದ್ದ ಎಂ.ಜಿ ಶ್ರೀನಿವಾಸ್ ಹಾಗೂ ಜೆಡಿಎಸ್ ನ ಹಸೀನತಾಜ್ ವಿಪ್ ಉಲ್ಲಂಘನೆ ಮಾಡಿದ್ದಾರೆ. ಇತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಿವಶಂಕರ್ ಹಾಗೂ ಶಿವಣ್ಣ ವಿಪ್‌ಗೆ ಮನ್ನಣೆ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತನೀಡಿದ್ದಾರೆ.

31 ಜನ ಸದಸ್ಯರನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರ ಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 7 ಹಾಗೂ ಪಕ್ಷೇತರ ಸದಸ್ಯರು 3 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ.

ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಸದ ಡಾ.ಕೆ.ಸುಧಾಕರ್ ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಲಭಿಸಿರುವುದು ಸಂತಸದ ವಿಷಯ. ಮತ್ತೆ ನಮ್ಮ ಹಿರಿಮೆ ಗರಿಮೆ ಹೆಚ್ಚಾಗಿದೆ. ಜವಾಬ್ದಾರಿ ಮತ್ತಷ್ಟು ವೃದ್ಧಿಸಿದೆ. ನಗರದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ತಂದುಕೊಡುವಲ್ಲಿ ಶ್ರಮಿಸುತ್ತೇನೆ. ದೊಡ್ಡಬಳ್ಳಾಪುರ ನಗರವನ್ನು ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಉಪಗ್ರಹ ನಗರವನ್ನಾಗಿ ಮಾಡಬೇಕು. ಸುರಕ್ಷಿತ, ಸುಂದರ ನಗರವನ್ನಾಗಿ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ನಂತರ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಬಿಜೆಪಿಯ 12 ಮಂದಿ ಸದಸ್ಯರು, ಜೆಡಿಎಸ್ ನ 6ಮಂದಿ ಸದಸ್ಯರು, ಮೂರು ಮಂದಿ ಪಕ್ಷೇತರರ ಸಹಕಾರದಿಂದ ಇಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ನಗರಸಭೆ ಚುಕ್ಕಾಣಿ ಹಿಡಿದಿದ್ದಾರೆ.

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೂ ಮುನ್ನಾ ಜೆಡಿಎಸ್ ಹಾಗೂ ಬಿಜಪಿ‌ ನಾಯಕರು, ಮುಖಂಡರ ಜೊತೆ ಚರ್ಚಿಸಿದ್ದೇವು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಇಂದು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ. ಉತ್ತಮ ಆಡಳಿತದಿಂದ ನಗರವನ್ನು ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.

ಇಂದು ಬಿಜೆಪಿಗೆ ಒಳ್ಳೆಯ ದಿನ. ಡಾ.ಕೆ.ಸುಧಾಕರ್ ಅವರು ಸಂಸದರಾದ ಮೇಲೆ ತಾಲೂಕಿನಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳುತ್ತಿದೆ. ಅವರು ಕಾಲಿಟ್ಟ ಕಡೆ ಸಿಹಿಸುದ್ಧಿ ಕೇಳುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ಎಲ್ಲಾ ಮುಖಂಡರು, ನಗರಸಭೆ ಸದಸ್ಯರು, ಮೈತ್ರಿಕೂಟದ ಮುಖಂಡರ ಸಹಕಾರದಿಂದ ಇಂದು ನಾನು ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ,‌ ನಗರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷೆ ಸುಮಿತ್ರ ಆನಂದ್ ಹೇಳಿದರು.

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ವೆಂಕಟೇಶ್‌ ಸೇರಿದಂತೆ ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ, ಸಿಹಿ ಹಂಚಿ ಅಭಿನಂದಿಸಿದರು.

Leave a Reply

Your email address will not be published. Required fields are marked *