ತನ್ನ ಪಾಡಿಗೆ ತಾನು ಕಸ ಸಂಗ್ರಹಿಸುತ್ತಿರುವ ವ್ಯಕ್ತಿಗೆ ರೈಲ್ವೆ ಹಳಿ ಪಕ್ಕದ ಪೊದೆಯೊಂದರಲ್ಲಿ 2.5ಮಿಲಿಯನ್ ಡಾಲರ್ ಹಣ ಸಿಕ್ಕಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ತನ್ನ ಮಾಲೀಕನಿಗೆ ವಿಷಯ ತಿಳಿಸಿದ ವ್ಯಕ್ತಿ, ಈ ನಡುವೆ ವಿಚಾರ ತಿಳಿದ ಮತ್ತೋರ್ವ ವ್ಯಕ್ತಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಆರ್ ಬಿಐಗೆ ಪತ್ರ ಬರೆಯುವ ಮೂಲಕ ಸತ್ಯ ಹುಡುಕಲು ಹೆಬ್ಬಾಳ ಪೊಲೀಸರು ಮುಂದಾಗಿದ್ದಾರೆ. ಮೇಲ್ನೋಟಕ್ಕೆ ನಕಲಿ ಡಾಲರ್ಸ್ ಎಂಬ ಶಂಕೆ ವ್ಯಕ್ತವಾಗಿದೆ.
ವಶಕ್ಕೆ ಪಡೆದ ಡಾಲರ್ಸ್ ಗಳ ಜೊತೆಗೊಂದು ಪತ್ರ ಕೂಡ ಸಿಕ್ಕಿದೆ. ಅದು ವಿಶ್ವ ಸಂಸ್ಥೆಯ ಲೆಟರ್ ಹೆಡ್ ನಲ್ಲಿದೆ.
ಅಮೇರಿಕಾದಿಂದ ಅಭಿವೃದ್ಧಿಗಾಗಿ ವಿಶ್ವಸಂಸ್ಥೆಗೆ ಕಳುಹಿಸಲಾದ ಹಣ ಎಂದು ತಿಳಿದುಬಂದಿದೆ. ಈ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಲೆಟರ್ ನಲ್ಲಿ ಉಲ್ಲೇಖವಾಗಿದೆ. ಜೊತೆಗೆ ಡಾಲರ್ಸ್ ಗಳ ನೋಟಿನ ಸಿರಿಯಲ್ ಗಳನ್ನು ಸಹ ಉಲ್ಲೇಖ ಮಾಡಿರೊದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.