ನಾನು ಬಮೂಲ್ ಅಧ್ಯಕ್ಷನಾದ ಮೇಲೆ ದೊಡ್ಡಬಳ್ಳಾಪುರ ಹಾಲು ಉತ್ಪಾದಕರ ಸಮಸ್ಯೆ ತಿಳಿದುಕೊಳ್ಳಲು ಇಂದು ಇಲ್ಲಿಗೆ ಬಂದಿದ್ದೇನೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕಳಪೆ ಗುಣಮಟ್ಟದ ಹಾಲನ್ನು ಬಳಸಿ ಅನಾರೋಗ್ಯಕ್ಕೆ ಒಳಗಾಗಬೇಡಿ. ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಬಳಸಿ ಆರೋಗ್ಯವನ್ನು ಕಾಪಾಡುವಂತೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಜನರಲ್ಲಿ ಮನವಿ ಮಾಡಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಾಲು ಪೂರೈಕೆ ಕಡಿಮೆಯಾಗಿದ್ದು, ಹಾಲು ಪೂರೈಕೆ ಹೆಚ್ಚಿಸಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಚರ್ಚಿಸುತ್ತೇವೆ ಎಂದರು.
ಗುಣಮಟ್ಟದ ಹಾಲು ಪೂರೈಕೆ, ರೈತರಿಗೆ ಉತ್ತಮ ದರ ನೀಡುವ ಜೊತೆಯಲ್ಲಿಯೇ, ಗ್ರಾಹಕರ ಹಿತ ಕಾಪಾಡಬೇಕಾದ ಹೊಣೆಗಾರಿಕೆ ಬಮೂಲ್ ಮೇಲಿದೆ ಎಂದು ಹೇಳಿದರು.
ಬಮೂಲ್ ವತಿಯಿಂದ 160ಕ್ಕೂ ಹೆಚ್ಚು ನಂದಿನ ಉತ್ಪಾದಕಗಳನ್ನು ತಯಾರಿಸಲಾಗುತ್ತಿದೆ. ಇದರ ಬಗ್ಗೆ ಜನರಿಗೆ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ನಂದಿನಿ ಉತ್ಪನ್ನಗಳನ್ನೇ ಬಳಸಬೇಕು ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಟೆಟ್ರಾ ಪ್ಯಾಕ್ ಘಟಕ ಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಾಲಿನ ಪೂರೈಕೆ ಕಡಿಮೆಯಾಗಿರುವ ಕಾರಣ ಘಟಕ ಸ್ಥಾಪನೆ ಕುರಿತು ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ. ಟೆಟ್ರಾ ಪ್ಯಾಕ್ ಘಟಕ ಸ್ಥಾಪನೆ ಸಾಧಕ ಬಾಧಕದ ಕುರಿತು ಚರ್ಚೆ ಮಾಡಬೇಕಿದೆ. ಈಗಾಗಲೇ ಪರಿಸರಕ್ಕೆ ಮಾರಕವಾಗದಂತೆ ನಂದಿನ ಹಾಲಿನ ಪ್ಯಾಕ್ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಎರಡು ರೂ. ಹೆಚ್ಚಳವಾಗಲಿದೆ. ಲಕ್ಷಾಂತರ ಪ್ಲಾಸ್ಟಿಕ್ ಕವರ್ ಬಳಕೆಯಿಂದ ಉಂಟಾಗುತ್ತಿರುವ ಪರಿಸರಮಾಲಿನ್ಯ ತಡೆಯಲು ಗ್ರಾಹಕರ ಸಹಕಾರ, ಪ್ರತಿಕ್ರಿಯೆ ಯಾವ ರೀತಿ ಸಿಗುತ್ತದೆ ಎಂಬುದನ್ನು ತಿಳಿಯಲು ಬೆಂಗಳೂರಿನಲ್ಲಿ ಟ್ರಯಲ್ ಮಾಡಲಾಗುತ್ತಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ವಕೀಲರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿರಾಜು ಎಸ್.ಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.