ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ 2023-24ನೇ ಸಾಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ-ನೇರಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-1(ಸಹಾಯಧನ ಗರಿಷ್ಠ ರೂ.1.00 ಲಕ್ಷ), ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-2 (ಸಹಾಯಧನ ಗರಿಷ್ಠ ರೂ.2.00 ಲಕ್ಷ), ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-3-ಸ್ವಾವಲಂಬಿ ಸಾರಥಿ ಯೋಜನೆ (ಸರಕು ವಾಹನ/ಟ್ಯಾಕ್ಸಿ(ಹಳದಿ ಬೋರ್ಡ್) ಸಹಾಯಧನ ಗರಿಷ್ಠ ರೂ.4.00 ಲಕ್ಷ), ಮೈಕ್ರೋ ಕ್ರೆಡಿಟ್(ಪ್ರೇರಣಾ) (ಮಹಿಳಾ ಸ್ವ ಸಹಾಯ ಗುಂಪುಗಳಿಗೆ), ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ಒದಗಿಸುವ ಸಲುವಾಗಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಫಲಾಪೇಕ್ಷಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು 2023 ರ ಅಕ್ಟೋಬರ್ 31 ರಿಂದ ನವೆಂಬರ್ 31 ರವರೆಗೆ ಸಲ್ಲಿಸಬಹುದಾಗಿದೆ.

ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು. ಅರ್ಜಿದಾರರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ ಕನಿಷ್ಠ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು ಕನಿಷ್ಠ 21 ರಿಂದ 50 ವರ್ಷ ಮೇಲ್ಪಟ್ಟವರಾಗಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1,50,000 ಹಾಗೂ ನಗರ ಪ್ರದೇಶವಾದಲ್ಲಿ ರೂ 2,00,000 ಮಿತಿಯೊಳಗಿರಬೇಕು.
ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
ಅರ್ಜಿದಾರರು ಹಾಗೂ ಅವರ ಕುಟುಂಬದವರು ಯಾವುದೇ ನಿಗಮಗಳಿಂದ ಈ ಹಿಂದೆ ಸಾಲ ಸೌಲಭ್ಯ ಪಡೆದಿರಬಾರದು.

ಅರ್ಜಿದಾರರು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾದ ದಾಖಲಾತಿಗಳ ವಿವರ: ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ. ಆರ್.ಡಿ ನಂಬರ್ ಹೊಂದಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ. ಪಡಿತರ ಚೀಟಿ/ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ ಅರ್ಜಿದಾರರ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳನ್ನೊಳಗೊಂಡ ಪಾಸ್‌ಬುಕ್ ಪ್ರತಿ. ಇಚ್ಛಿಸುವ ಯೋಜನೆಗಳ ಯೋಜನಾ ವರದಿ. ವಾಹನದ ಪರವಾನಗಿ.

ಅರ್ಹ ಫಲಾಪೇಕ್ಷಿಗಳು ಆನ್‌ಲೈನ್ ಮೂಲಕ ಆಯಾ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳ ಅರ್ಜಿಗಳನ್ನು ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ https://sevasindhu.karnataka.gov.in ನಲ್ಲಿ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್, ಇವುಗಳ ಮೂಲಕ ಅಪ್‌ಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ ಅಥವಾ ದೂರವಾಣಿ ಸಂಖ್ಯೆ 080-29781036 ಹಾಗೂ ನಿಗಮದ ವೆಬ್‌ಸೈಟ್ ನಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *