ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ: ಸಭೆಯ ಮುಖ್ಯಾಂಶಗಳು ಇಲ್ಲಿವೆ ಓದಿ…

ಇಂದು ವಿಧಾನಸೌಧ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯ ಮುಖ್ಯಾಂಶಗಳು:

– ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ನಾಳೆ ಕರೆದಿರುವ ಮುಷ್ಕರವನ್ನು ವಾಪಾಸು ಪಡೆಯಬೇಕು.

– 2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ. 12.5 ರಷ್ಟು ಹೆಚ್ಚಳ ಮಾಡಲಾಗಿತ್ತು. ಬಳಿಕ 2020 ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ. ದಿನಾಂಕ 2023ರ ಮೇ 01 ರ ಹಿಂದಿನ ಸರ್ಕಾರ ಇದ್ದಾಗ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ 15 ಶೇಕಡಾ ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು. ಆಗ ನೀವು ಅದನ್ನು ಒಪ್ಪಿಕೊಂಡಿದ್ದೀರಿ.

– ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ದಿನಾಂಕ 2022ರ ಜೂನ್‌ 01 ರಿಂದ 2023ರ ಫೆಬ್ರವರಿ 28ರ ವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು.ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಸಮಿತಿಯ ಶಿಫಾರಸ್ಸು ಸರ್ಕಾರ ಒಪ್ಪಿಕೊಂಡಿದೆ. ನೀವು ಸಹ ಸದರಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು.

– ಸಮಿತಿಯ ಶಿಫಾರಸು ಆಧಾರದಲ್ಲಿ ಈ ಕುರಿತು ದಿನಾಂಕ 2023ರ ಮಾರ್ಚ್‌ 01 ರಿಂದ ಜಾರಿಗೆ ಬರುವಂತೆ ಅಂದಿನ ಸರ್ಕಾರ ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ ಈಗ 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ.

– ನಾವು ಅಧಿಕಾರಕ್ಕೆ ಬಂದಾಗ ಎಲ್ಲಾ ನಿಗಮಗಳಿಗೆ ಒಟ್ಟಾರೆ 4 ಸಾವಿರ ಕೋಟಿ ಸಾಲ ಇತ್ತು. 2018 ರಲ್ಲಿ ಕೇವಲ ರೂ.14 ಕೋಟಿ ಮಾತ್ರ ಬಾಕಿಯಿತ್ತು. ಪ್ರಸ್ತುತ ಯಾವ ಸಾರಿಗೆ ನಿಗಮ ಸಹ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲಾ ನಿಗಮದವರು ಸಹಕರಿಸಬೇಕು.
– ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಎಲ್ಲಾ ಅಹವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ.

ಸಭೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಎಸ್.ಆರ್. ಶ್ರೀನಿವಾಸ್, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಅಧ್ಯಕ್ಷ ರಾಜುಕಾಗೆ, ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!