ಪುನೀತ್ ರಾಜ್ ಕುಮಾರ್ ಅವರ ಸ್ಮಾರಕ ಪುನರಾಭಿವೃದ್ಧಿ ಸಂಬಂಧ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಾಡಿರುವ ಮನವಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪಿ.ಆರ್.ಕೆ. ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ನನಗೂ ಪುನೀತ್ ರಾಜ್‌ಕುಮಾರ್ ಅವರು ಬಹಳ ಗೌರವದಿಂದ ಕಾಣುತ್ತಿದ್ದರು. ದೊಡ್ಡವರನ್ನು, ಸಹಕಲಾವಿದರನ್ನು ಗೌರವದಿಂದ ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರನ್ನು ಕಳೆದುಕೊಂಡಿರುವುದು ಇಡೀ ಕರುನಾಡಿಗೆ ಆಗಿರುವ ನಷ್ಟ. ಆ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಉತ್ತಮ ನಟ ಹಾಗೂ ಮಾನವೀಯತೆಯುಳ್ಳ ವ್ಯಕ್ತಿಯನ್ನು ನಾಡು ಕಳೆದುಕೊಂಡಿದೆ. ಅವರ ಪ್ರತಿಮೆಯಿಂದ ಪುನೀತ್ ಅವರನ್ನು ಇನ್ನಷ್ಟು ಸ್ಮರಿಸುವ ಕೆಲಸವಾಗಿದೆ ಎಂದರು.
ರಾಜ್‌ಕುಮಾರ್ ಕುಟುಂಬದವರು ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜಕುಮಾರ್ ಅವರ ತಂದೆ ರಾಜ್‌ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್ ಕುಮಾರ್ ಜನಪ್ರಿಯ ಮೇರು ನಟ. ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್‌ಕುಮಾರ್ ಅವರಿಗಿಂತಲೂ ಜನಪ್ರಿಯರಾಗಿದ್ದರು ಎಂಬ ಭಾವನೆ ಬಂದಿತು. ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದಿದ್ದರು ಎಂದು ತಿಳಿಯುತ್ತದೆ. ಬಹಳ ಬೇಗ ನಮ್ಮನ್ನು ಅಗಲಿದರು. ಅವರು ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು ಎಂದರು.
ಅಪ್ಪು ಅವರ ಕುಟುಂಬ ವರ್ಗದವರಿಗೆ ಅವರ ಸಾವಿನಿಂದಾದ ನೋವನ್ನು ಭರಿಸುವ ಶಕ್ತಿ ದೇವರು ಯಾವಾಗಲೂ ನೀಡಬೇಕು. ಪುನೀತ್ ರಾಜ್ ಕುಮಾರ್ ಮನೆ ಮನೆಯ ಮಗ. ಅವರನ್ನು ಗೌರವಿಸದವರೇ ಇಲ್ಲ. ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಇಂದು ಅನಾವರಣ ಮಾಡಲಾಗಿದೆ. ಡಾ.ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿತ್ವ. ಸರಳತೆ, ಸಜ್ಜನಿಕೆ, ವಿನಯ ಎಲ್ಲವನ್ನೂ ಒಬ್ಬರಲ್ಲೆ ಕಾಣುವುದು ವಿರಳ. ಸಾಮಾನ್ಯ ಜನರು, ಸಂಕಷ್ಟದಲ್ಲಿದವರಿಗೆ ಸ್ಪಂದಿಸುವ ಉದಾತ್ತ ಭಾವನೆಯ ಪುನೀತ್‍ರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾಗ ಜನರು ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಷ್ಟು ದು:ಖಿಸಿದ್ದರು. ಕರ್ನಾಟಕ ಜನರ ಮನಸ್ಸನ್ನು ಗೆದಿದ್ದರು ಎಂದು ಹೇಳಿದರು.
ರಾಜ್ಯದ ಪ್ರತಿ ಮನೆಯಲ್ಲಿಯೂ ಕುಡ ಪುನೀತ್ ರ ಭಾವಚಿತ್ರವಿದ್ದು, ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಹುಶ: ಇನ್ನೊಬ್ಬ ಪುನೀತ್ ರಂಥ ವ್ಯಕ್ತಿಯನ್ನು ಕಾಣುವುದು ಕಷ್ಟ. ರಾಜಕುಮಾರ್ ಕುಟುಂಬದವರು ಸದಾ ವಿನಯವಂತರು. ರಾಜಕುಮಾರ್, ಅವರ ಮಕ್ಕಳು ಮಾನವೀಯತೆಯ ಪ್ರತಿರೂಪವಾಗಿದ್ದಾರೆ. ಮಾನವೀಯತೆಯುಳ್ಳವರು ಮತ್ತೊಬ್ಬರನ್ನು ಪ್ರೀತಿ ಗೌರವಗಳಿಂದ ಕಾಣುತ್ತಾರೆ. ರಾಜ್ ಕುಮಾರ್ ಸೇರಿದಂತೆ ಅವರ ಕುಟುಂಬದವರೊಂದಿಗೆ ನನಗೆ ಬಹಳ ವರ್ಷಗಳಿಂದಲೂ ಉತ್ತಮ ಒಡನಾಟವಿದೆ ಎಂದರು.