ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 12 ಕೆಜಿ ಚಿನ್ನ, 15 ಲಕ್ಷ ಹಣ ಕದ್ದೋಯ್ದಿದ್ದ ಖದೀಮರು; ಬ್ಯಾಂಕ್ ದರೋಡೆಕೋರರ ಬಂಧನ

ತಾಲೂಕಿನ ಹೊಸಹಳ್ಳಿ ಗ್ರಾಮದ ಕರ್ನಾಟಕ‌ ಗ್ರಾಮೀಣ ಬ್ಯಾಂಕ್ ಲೂಟಿ‌ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಉತ್ತರ ಪ್ರದೇಶದ ಪೊಲೀಸರ ಸಹಕಾರದಿಂದ ಇಬ್ಬರು ಖದೀಮರನ್ನು ಗುರುವಾರ ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್ ನಲ್ಲಿ ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ಅಲಾಪುರ ನಿವಾಸಿ ಟ್ರಕ್ ಚಾಲಕ ಸರ್ತಾಜ್ ಹಾಗೂ ಉಜಾನಿಯ ನಿವಾಸಿ ಕಾಳಿಚರಣ್ ಬಂಧಿತ ಆರೋಪಿಗಳು.

ಟ್ರಕ್ ನಲ್ಲಿ ಬಂದು ಲೂಟಿ:

ನ.25 ರಂದು ಸಿನಿಮೀಯ ಶೈಲಿಯಲ್ಲಿ ಬ್ಯಾಂಕ್ ಲೂಟಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಿಂದ ಪೂರ್ವನಿಯೋಜಿತವಾಗಿ ಕಳ್ಳತನ, ಬ್ಯಾಂಕ್, ಮನೆಗಳ ಲೂಟಿ ಮಾಡಲೆಂದೆ ಬೃಹತ್ ಟ್ರಕ್ ರೆಡಿ ಮಾಡಿಕೊಂಡಿದ್ದರು.

ಈ ಟ್ರಕ್ ನಲ್ಲಿ ಕಳ್ಳತನಕ್ಕೆ ಬಳಸುವ ಉಪಕರಣಗಳು ಎಲ್ಲವೂ ಸಿದ್ಧವಿದ್ದವು. ಗ್ಯಾಸ್ ಕಟರ್, ಸಿಲಿಂಡರ್ ಸೇರಿದಂತೆ ಹಲವು ಉಪಕರಣಗಳನ್ನು ಇಟ್ಟುಕೊಂಡು ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಕನ್ನ ಹಾಕಿದ್ದರು.

ಗ್ಯಾಸ್ ಕಟರ್ ಮೂಲಕ ಶೆಟರ್ ಹಾಗೂ ಲಾಕರ್ ತೆರೆದು 12 ಕೆ.ಜಿ. ಚಿನ್ನಾಭರಣ ಹಾಗೂ 15 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಬಹಳ ದಿನಗಳಿಂದ ಹೊಂಚು ಹಾಕಿದ ಕಳ್ಳರು, ಬ್ಯಾಂಕ್ ಬಳಿ ಚಲನವಲನಗಳನ್ನು ಗಮನಿಸಿ ಕಳುವು ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ‌ ಸೆರೆಯಾಗಿದ್ದ ಟ್ರಕ್ ಪತ್ತೆ ಹಚ್ಚಿ ಹೋದ ಪೊಲೀಸರಿಗೆ ಆರೋಪಿಗಳ ಮಹತ್ವದ ಸುಳಿವು‌ ಸಿಕ್ಕಿದೆ. ಅಲಾಪುರದ ಕಾಕರಾಲ ಪೊಲೀಸರ ನೆರವು ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *