ಬಲವಂತದ ಸಾಲ ವಸೂಲಿ ಮತ್ತು ಕಿರುಕುಳ ತಪ್ಪಿಸುವ ಉದ್ದೇಶದಿಂದ ರೂಪಿಸಿದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆ– 2025’ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಸಹಿ ಹಾಕಿದ ಹಿನ್ನೆಲೆ ರಾಜ್ಯ ಸರ್ಕಾರ ಗೆಜೆಟ್ ಹೊರಡಿಸಿದೆ. ಈ ಹಿನ್ನೆಲೆ, ಈ ಸುಗ್ರೀವಾಜ್ಞೆ ಜಾರಿಗೆ ಬಂದಂತಾಗಿದೆ.
ರಾಜ್ಯಪಾಲರ ಸಲಹೆಗಳು
* ಈ ಸುಗ್ರೀವಾಜ್ಞೆಯನ್ನು ತಪ್ಪು ಗ್ರಹಿಕೆ ಅಥವಾ ದುರ್ಬಳಕೆ ಮಾಡಿಕೊಂಡು ಆರ್‌ಬಿಐ ನೋಂದಾಯಿತ ಮತ್ತು ನಿಯಂತ್ರಿತ ಹಣಕಾಸು ಸಂಸ್ಥೆಗಳಿಗೆ ಕಿರುಕುಳ ನೀಡಬಾರದು
* ಕಾನೂನುಬದ್ಧ ಮತ್ತು ನಿಜವಾದ ಸಾಲದಾತರು ಬಡ್ಡಿ ಮತ್ತು ಅಸಲು ವಸೂಲಿ ಮಾಡಲು ತೊಂದರೆ ಆಗಬಾರದು. ಅಂತಹ ಸಾಲದಾತರು ನೀಡಿದ್ದ ಸಾಲವನ್ನು ಮರಳಿ ಪಡೆಯಲು ಯಾವುದೇ ಪರಿಹಾರ ಸುಗ್ರೀವಾಜ್ಞೆಯಲ್ಲಿ ಇಲ್ಲ. ಇದು ಕಾನೂನು ಹೋರಾಟಕ್ಕೆ ಕಾರಣ ಆಗಬಹುದು
* ಸಹಜ ನ್ಯಾಯದ ಭಾಗವಾಗಿ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಹಕ್ಕು ಮತ್ತು ಕಾನೂನು ಪರಿಹಾರಕ್ಕೆ ಹೋರಾಟ ನಡೆಸುವ ಅವಕಾಶವಿದೆ. ಯಾರೇ ಆದರೂ ಹೋರಾಟ ನಡೆಸದಂತೆ ತಡೆಯುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣ ಆಗಬಹುದು. ರಾಜ್ಯ ಸರ್ಕಾರ ಈ ಕುರಿತು ಮರುಚಿಂತನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು
* ಸುಗ್ರೀವಾಜ್ಞೆಯನ್ನು ಮಸೂದೆಯಾಗಿ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸುವ ಸಂದರ್ಭದಲ್ಲಿ ಈ ಮೇಲಿನ ಅಂಶಗಳನ್ನು ಸೇರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಈ ಎಲ್ಲ ಅಂಶಗಳ ಬಗ್ಗೆ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಸಬೇಕು.