ಕರ್ನಾಟಕ ಏಕೀಕರಣ ಚಳುವಳಿ ಕನ್ನಡಿಗರನ್ನು ಒಗ್ಗೂಡಿಸಿತು- ಕವಿ‌ ಕೆ.ಎಂ.ಮಹಾದೇವಪ್ಪ

ಕರ್ನಾಟಕ ಏಕೀಕರಣ ಚಳುವಳಿ ಕನ್ನಡಿಗರನ್ನು ಒಗ್ಗೂಡಿಸಿತು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಲು ಬೆಳೆಸಲು ಸಹಕಾರಿಯಾಯಿತು ಎಂದು  ಪ್ರಾಧ್ಯಾಪಕ ಮತ್ತು ಕವಿ‌ ಕೆ.ಎಂ. ಮಹಾದೇವಪ್ಪ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕರ್ನಾಟಕ ಏಕೀಕರಣ ಚಳುವಳಿ ಎಂಬ ವಿಷಯ ಕುರಿತು ಉಪನ್ಯಾಸ ಮತ್ತು ಕಲಾವಿದರಿಗೆ ಸನ್ಮಾನ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಭಾಷಿಗರ ನಾಡನ್ನು ಒಗ್ಗೂಡಿಸಲು  ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೇ ಕರ್ನಾಟಕ ಏಕೀಕರಣ ಹೋರಾಟ ಪ್ರಾರಂಭವಾಯಿತು. ಹಲವು  ಹೋರಾಟಗಳು, ಹೋರಾಟಗಾರರ ಶ್ರಮದಿಂದ ಕನ್ನಡ ನಾಡು ಒಂದು ರಾಜ್ಯವಾಗಿ ಉದಯವಾಯಿತು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಪಿ.ಮಲ್ಲಾರಾಜು ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ‌ ವ್ಯಾಸಂಗ ಮಾಡಿದವರು ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಕನ್ನಡ ಶಾಲೆಗಳಲ್ಲಿ ಓದಿದವರು ಖ್ಯಾತ ವಿಜ್ಞಾನಿಗಳು ಆಗಿದ್ದಾರೆ.
ಸಾವಿರಾರು ವರ್ಷಗಳ‌ ಇತಿಹಾಸವಿರುವ ಕನ್ನಡ ಭಾಷೆ  ಮತ್ತು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ  ದೊರೆಯಬೇಕೆಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ‌‌ದ   ಅಸ್ಮಿತೆ ಮತ್ತು ಅನನ್ಯತೆ ಬಗ್ಗೆ ಹೆಮ್ಮೆ ಪಡಬೇಕು. ಕರ್ನಾಟಕ ರಾಜ್ಯದಲ್ಲಿ  ಕನ್ನಡವೇ ನಮ್ಮೆಲ್ಲರ ಆದ್ಯತೆಯ ವಿಚಾರವಾಗಬೇಕು. ಕನ್ನಡ ಕಾರ್ಯಕ್ರಮಗಳು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಪ್ರತಿದಿನವು  ಕನ್ನಡತನ ನಮ್ಮ ಬದುಕಿನ ಭಾಗಬೇಕು. ಕನ್ನಡಿಗರಿಗೆ  ಕನ್ನಡ  ಭಾಷೆಯಲ್ಲಿ ಜ್ಞಾನವನ್ನು ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ, ಮಾತೃಭಾಷೆಯಿಂದ ಜ್ಞಾನ ಹೆಚ್ಚಾಗುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ ಎಂದರು.

ಕಲಾವಿದರಿಗೆ ಸನ್ಮಾನ : ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಲಾವಿದರುಗಳಾದ  ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ, ಕುಮಾರ್, ಶೋಭಾಕುಮಾರ್, ಅಣ್ಣಪ್ಪ, ಸತ್ಯಜಿತ್ ಅವರನ್ನು  ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ‌ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕಸಬಾ ಹೋಬಳಿ ಅಧ್ಯಕ್ಷ ಪಿ.ಡಿ.ದಾದಾಪೀರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು,  ಹಣಬೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹರೀಶ್, ವೆಂಕಟೇಶ್,  ಪಂಚಾಯಿತಿ ಅಧಿಕಾರಿ ಗಂಗರಾಜು, ಮುಖ್ಯಶಿಕ್ಷಕಿ ಶಾಂತಮ್ಮ, ಶಿಕ್ಷಕ ಮತ್ತು ಕಲಾವಿದ ಹಣಬೆ ನಾಗರಾಜು, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸಿ.ಅಣ್ಣಯ್ಯ, ಸಿಬ್ಬಂದಿಯವರಾದ ಮಹಾದೇವಸ್ವಾಮಿ, ಶಶಿಕಾಂತ್, ಶಾರದಮ್ಮ, ಯಮುನಾವ್ವ ಖನ್ನಾಳ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!