ಕರ್ನಾಟಕವನ್ನು ಆಳ್ವಿಕೆ ಮಾಡಿದ ರಾಜರುಗಳ ಜೀವನಚರಿತ್ರೆ ಕನ್ನಡಿಗರಿಗೆ ಸ್ಫೂರ್ತಿ: ಉಪನ್ಯಾಸಕಿ ಟಿ.ಎಸ್.ಸರಸ್ವತಿ

 

ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಯಲ್ಲಿ  ನೃಪತುಂಗನಿಂದ ಮೈಸೂರಿನ ಅರಸು ಮನೆತನದ ತನಕ  ಆಳ್ವಿಕೆ ಮಾಡಿದ ರಾಜರ ಕೊಡುಗೆ ಮಹತ್ವದಾಗಿದೆ ಎಂದು ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ಉಪನ್ಯಾಸಕಿ ಟಿ.ಎಸ್.ಸರಸ್ವತಿ ತಿಳಿಸಿದರು.

ನಗರದ ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಡಿ.ವಿ.ಪದ್ಮಾವತಮ್ಮ ಶೈಕ್ಷಣಿಕ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ರಾಜರ ಕೊಡುಗೆ ಎಂಬ ವಿಷಯವನ್ನು ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ, ಕಲೆ, ರಂಗಭೂಮಿ ಕರ್ನಾಟಕದಲ್ಲಿ   ಶ್ರೀಮಂತಗೊಳ್ಳಲು ಕವಿಗಳಿಗೆ, ಕಲಾವಿದರಿಗೆ, ಶಿಲ್ಪಿಗಳಿಗೆ ರಾಜರು ಆಶ್ರಯ ನೀಡುವ ಮೂಲಕ‌ ಪ್ರೋತ್ಸಾಹ ನೀಡಿದರು. ಅನ್ಯ ಧರ್ಮ ಸಹಿಷ್ಣುತೆಯನ್ನು  ಸಾಕಾರಗೊಳಿಸಿದ್ದ ರಾಜ ಮನೆತನಗಳು ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಗೌರವಿಸುತ್ತಾ ಬಂದಿದ್ದರು. ಕರ್ನಾಟಕವನ್ನು ಆಳ್ವಿಕೆ ಮಾಡಿದ ರಾಜರುಗಳ ಜೀವನಚರಿತ್ರೆಗಳು ಕನ್ನಡಿಗರಿಗೆ ಸ್ಫೂರ್ತಿಯಾಗಿವೆ ಎಂದರು.

ಕನ್ನಡದ ವಚನ ಸಾಹಿತ್ಯ ವಿಶ್ವಸಾಹಿತ್ಯದ ಮಟ್ಟದಲ್ಲಿ ಗೌರವಗೊಳಲು ಬಸವಣ್ಣ ‌ಮೊದಲಾದ ವಚನಕಾರರು ಕಾರಣರಾದರು. ಹರಿದಾಸರು ಕನ್ನಡನಾಡಿನ ಭಕ್ತಿ ಸಾಹಿತ್ಯವನ್ನು ಉನ್ನತಗೊಳಿಸಿದರು. ಮೈಸೂರಿನ  ಒಡೆಯರು ದಸರಾ ಸಾಂಸ್ಕೃತಿಕ ಪರಂಪರೆಯನ್ನು ಪ್ರಾರಂಭಿಸಿ, ಕನ್ನಡ ನಾಡಿನ ಸಾಂಸ್ಕೃತಿಕ ವೈವಿಧ್ಯಮಯನ್ನು ಜಗತ್ತಿಗೆ ಪರಿಚಯಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪನೆಗೊಂಡಿರುವುದು ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಸಾಂಸ್ಕೃತಿಕ ಪರಂಪರೆ ಉಳಿದು ಬೆಳೆಯಬೇಕಾದರೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಹಂತದಲ್ಲಿಯೇ ಕಲೆ ಮತ್ತು ಸಾಹಿತ್ಯ ಅಭಿರುಚಿ ಮೂಡಿಸಬೇಕಾಗಿದೆ. ಕನ್ನಡ ಪುಸ್ತಕಗಳ ಓದಿನಿಂದ  ಜ್ಣಾನದೊಂದಿಗೆ ನಮ್ಮ ಪರಂಪರೆಯನ್ನು ಅರಿಯಲು ಸಹಕಾರವಾಗುತ್ತದೆ ಎಂದರು.

ದತ್ತಿ ದಾನಿಗಳಾದ ಡಿ.ವಿ.ಪದ್ಮಾವತಮ್ಮ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಬಹುಮಾನ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಲಾಗಿದೆ. ಕನ್ನಡ ಭಾಷೆ ಉಳಿಸುವುದೆಂದರೆ  ಕನ್ನಡವನ್ನು ಓದುವುದು, ಬರೆಯುವುದು ಮತ್ತು ಮಾತನಾಡುವ ಮೂಲಕ ಮಾತ್ರ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಸೃಜನಶೀಲ ಚಿಂತನೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬದಲಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  125 ಅಂಕಗಳಿಗೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕನ್ನಡ ಶಿಕ್ಷಕರು ಅಭಿನಂದಿಸಿದರು.

ಸಮಾರಂಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಶಿಕ್ಷಣ ಸಂಯೋಜಕ ಗಂಗಾಧರ್, ಕಲಾವಿದ ಹಣಬೆ ನಾಗರಾಜು, ಜ್ಞಾನಗಂಗಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಹನುಮೇಗೌಡ, ಸಹ್ಯಾದ್ರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್, ಕನ್ನಡ ಶಿಕ್ಷಕರುಗಳಾದ ರವಿಕುಮಾರ್, ರಮೇಶ್,  ಸುಜಾತ, ಮಂಜುನಾಥ್, ನಂಜುಂಡರಾವ್, ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *