Categories: ಲೇಖನ

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ…..

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ…..

ಕನ್ನಡ ತಾಯಿ ಭಾಷೆ. ಅದಕ್ಕೆ ಸದಾ ಮೊದಲನೆಯ ಸ್ಥಾನ.
ಎರಡನೆಯದು ಇಂಗ್ಲೀಷ್, ವ್ಯಾವಹಾರಿಕತೆ, ಉದ್ಯೋಗ, ಜ್ಞಾನಾರ್ಜನೆ ಮತ್ತು ಬಹುತೇಕ ವಿಶ್ವ ಮಾನ್ಯತೆ ಪಡೆದ ಮಾಹಿತಿಯ ಕಣಜವಾಗಿರುವ ಭಾಷೆ..

ಉರ್ದು, ಸಂಸ್ಕೃತ ಕೆಲವು ಸಮುದಾಯಗಳಿಗೆ ಮಾತ್ರ ಸೀಮಿತ….

ಹಿಂದಿ ಭಾರತದ ಬಹುಸಂಖ್ಯಾತ ಜನರ ಭಾಷೆಯಾದರೂ ಉದ್ಯೋಗ ಮತ್ತು ರಾಜಕೀಯ ದೃಷ್ಟಿಯಿಂದ ಅತ್ಯಂತ ಪ್ರಬಲವಾದ ದಾಯಾದಿ ಭಾಷೆ ಹಾಗೂ ಮೇಲಿನಿಂದ ಒತ್ತಾಯಪೂರ್ವಕ ಹೇರಿಕೆ ಆಗುತ್ತದೆ. ಅದರಿಂದಾಗಿ ನಮ್ಮ ತಾಯಿ ಭಾಷೆಯ ಮೇಲೆ ಒತ್ತಡ. ಕೇಂದ್ರ ಸರ್ಕಾರ ಉದ್ಯೋಗಗಳಲ್ಲಿ ತಾಯಿ ಭಾಷೆಯವರಿಗೆ ಅನ್ಯಾಯ.

ನಿನ್ನೆ ಮೊನ್ನೆಯಷ್ಟೇ ಕರ್ನಾಟಕ ಸರ್ಕಾರ ಪಾಸ್ ವಿಥೌಟ್ ಹಿಂದಿ ಅಂದರೆ ಹಿಂದಿಯನ್ನು ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಕಲಿಯಬಹುದು, ಆದರೆ ಅದರ ಅಂಕಗಳನ್ನು ಯಾವುದೇ ಮಾನದಂಡವಾಗಿ ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಗ್ರೇಡ್ ನೀಡಲಾಗುತ್ತದೆ. ಆದರೆ ಭಾಷೆ ಕಲಿಕೆಗೆ ಒತ್ತಡವಿಲ್ಲ, ನಿರ್ಲಕ್ಷ್ಯವೂ ಇಲ್ಲ, ಅಂಕಗಳನ್ನು ಮಾತ್ರ ಪರಿಗಣಿಸುವುದಿಲ್ಲ ಎಂದು ಆದೇಶ ಹೊರಡಿಸಿದೆ.

ಕನ್ನಡ ಭಾಷೆಯ ಅನೇಕ ಹೋರಾಟಗಾರರು, ಸಾಮಾನ್ಯ ಜನರಿಗೆ ಇದೊಂದು ಅತ್ಯುತ್ತಮ ನಿರ್ಧಾರ. ಅವರ ಹೋರಾಟಗಳಿಗೆ ಸಿಕ್ಕ ಬಹುದೊಡ್ಡ ಪ್ರತಿಫಲ, ಕನ್ನಡ ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಘೋಷಣೆ. ಆದರೆ ರಾಷ್ಟ್ರೀಯ ಪಕ್ಷದೊಂದಿಗೆ ಗುರುತಿಸಿಕೊಂಡ ಕೆಲವರಿಗೆ ಇದೊಂದು ಅನ್ಯಾಯ, ಅಕ್ರಮ, ದೌರ್ಜನ್ಯ, ಬೇಜವಾಬ್ದಾರಿ ಆದೇಶ. ಅದರ ಬಗ್ಗೆ ಅವರ ಆಕ್ರೋಶ.

ಈ ಭಾಷಾ ನೀತಿಯನ್ನು ನಾವುಗಳು ನಮ್ಮ ತಾಯಿ ಭಾಷೆಯ ಸ್ವಾರ್ಥದಿಂದ ಮಾತ್ರ ನೋಡಿದರೆ ಅರ್ಥವಾಗುವುದಿಲ್ಲ. ಇದನ್ನು ಸಮಗ್ರವಾಗಿ, ಐತಿಹಾಸಿಕವಾಗಿ, ಮೂಲ ನಿವಾಸಿಗಳ ಸಾಂಸ್ಕೃತಿಕ ಅಸ್ಮಿತೆಯಾಗಿ, ಈ ಕ್ಷಣದ ಅನಿವಾರ್ಯತೆ, ರಾಜಕೀಯ ಭವಿಷ್ಯ, ಭಾಷಾ ಸಾಮರ್ಥ್ಯ ಎಲ್ಲವನ್ನು ಪರಿಗಣಿಸಿ ಯೋಚಿಸಬೇಕಾಗುತ್ತದೆ. ಕೇವಲ ಭಾವನಾತ್ಮಕ ಭಾವದಿಂದ ನೋಡಿದರೆ ಸಮಗ್ರ ಚಿತ್ರಣ ದೊರೆಯುವುದಿಲ್ಲ. ಎಲ್ಲರಿಗೂ ಅವರವರದೇ ದೃಷ್ಟಿಕೋನವಿರುತ್ತದೆ. ಈ ಘೋಷಣೆಯಲ್ಲಿ ಇರಬಹುದಾದ ತಾಂತ್ರಿಕ ದೋಷಗಳನ್ನೇ ಮುಂದೆ ಮಾಡಿ ನೋಡದೆ ದೂರ ದೃಷ್ಟಿಯಿಂದ ನೋಡಬೇಕಾಗುತ್ತದೆ…

ತ್ರಿಭಾಷಾ ಸೂತ್ರ ಎಷ್ಟು ಸರಿ……..
ದ್ವಿಭಾಷಾ ಸೂತ್ರ ಉತ್ತಮವೇ……

ಕನ್ನಡ : ರಾಜ್ಯ ಭಾಷೆ….
ಹಿಂದಿ : ರಾಷ್ಟ್ರ ಭಾಷೆ….
ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ…..

ಈ ಭಾಷಾ ಸೂತ್ರ ಸರಿಯೇ ?
ಇದು ಸಂವಿಧಾನಾತ್ಮಕವೇ ?
ಇದು ವಾಸ್ತವವೇ ?
ಪ್ರಾಯೋಗಿಕವೇ ?
ಕನ್ನಡದ ಹಿತಕ್ಕೆ ಇದು ಒಳ್ಳೆಯದೇ ಅಥವಾ ಮಾರಕವೇ ?
ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ಹಿತವೇ ಅಥವಾ ಅಪಾಯಕಾರಿಯೇ ?
ಭಾಷಾ ಅಸ್ಮಿತೆ ಮತ್ತು ದೇಶದ ಅಸ್ಮಿತೆಗೆ ಇದು ಪೂರಕವೇ ವಿರುದ್ಧವೇ ?
ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಮರಸ್ಯಕ್ಕೆ ಉಪಕಾರವೇ ? ವಿನಾಶವೇ ?….

ನೀವು ಅಪ್ಪಟ ಕನ್ನಡ ಅಭಿಮಾನಿಗಳೇ ಆಗಿರಲಿ,
ನೀವು ಭಾವುಕ ದೇಶಭಕ್ತರೇ ಆಗಿರಲಿ,
ನೀವು ಹಿಂದಿ ಭಾಷೆಯ ಪಂಡಿತರೇ ಆಗಿರಲಿ,
ನೀವು ಸಹಜ ಸ್ವಾಭಾವಿಕ ಸಾಮಾನ್ಯ ಪ್ರಜೆಗಳೇ ಆಗಿರಲಿ ಮತ್ತು ಏನೇ ಆಗಿರಲಿ ಈ ವಿಷಯದ ಬಗ್ಗೆ ಸ್ಪಷ್ಟ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕಿಕೊಂಡಾಗ ಮಾತ್ರ ಈ ವಿಷಯದ ವಾಸ್ತವದ ಹತ್ತಿರಕ್ಕೆ ಹೋಗಬಹುದು. ಅದನ್ನು ಸಮಷ್ಟಿ ಪ್ರಜ್ಞೆಯ ದೃಷ್ಟಿಕೋನ ಎಂದು ಕರೆಯಲಾಗುತ್ತದೆ.

1) ಹಿಂದಿ ಭಾಷೆಯನ್ನು ಭಾರತದ ಎಲ್ಲಾ ರಾಜ್ಯಗಳಲ್ಲೂ ಒಂದು ಕಡ್ಡಾಯ ಭಾಷೆಯಾಗಿ ಕಲಿಸುವ ಒತ್ತಾಯ ಹೇರಿದರೆ ಆಗುವ ಪರಿಣಾಮಗಳು ಏನು ?

2) ಸಂವಿಧಾನದಲ್ಲಿ ಹಿಂದಿ ಕನ್ನಡ ಸೇರಿ ಸುಮಾರು 22 ಭಾಷೆಗಳಿಗೆ ಸಮನಾದ ಪ್ರಾದೇಶಿಕ ಸ್ಥಾನ ನೀಡಿರುವಾಗ ಹಿಂದಿ ಹೇರಿಕೆಯ ಅವಶ್ಯಕತೆ ಇದೆಯೇ ?

3) ಹಿಂದಿ ಭಾಷೆಯ ಒತ್ತಡಕ್ಕೆ ಸಿಲುಕಿಯೂ ಪ್ರಾದೇಶಿಕ ಭಾಷೆಗಳು ನಿಜಕ್ಕೂ ನಾಶವಾಗದೆ ಕನಿಷ್ಠ ಈಗಿನ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯವೇ ?

4) ಹಿಂದಿ ಭಾಷೆಯ ‌ಸ್ಪರ್ಧೆಯನ್ನು ಸಹಿಸಿಕೊಳ್ಳಲಾರದಷ್ಟು ದುರ್ಬಲವೇ ಈ ಭಾಷೆಗಳು ? ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಭಾಷೆ ಬಂದರು ನಮ್ಮ ಭಾಷೆಯಲ್ಲಿ ಸಾಮರ್ಥ್ಯ ಮತ್ತು ನಂಬಿಕೆ ಅಚಲವಾಗಿದ್ದರೆ ಭಯಪಡುವುದೇಕೆ ?

5) ಜನಸಂಖ್ಯೆಯ ಆಧಾರದಲ್ಲಿ ಸ್ವಲ್ಪ ಹೆಚ್ಚು ಜನ ಮಾತನಾಡುತ್ತಾರೆ ಎಂಬ ಕಾರಣದಿಂದಾಗಿ ಹಿಂದಿ ರಾಷ್ಟ್ರ ಭಾಷೆಯಾಗಬೇಕು ಎಂಬುದು ಈ ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯಲ್ಲಿ ಒಪ್ಪುವಂತ ವಿಷಯವೇ ?

6) ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲದ ಆದರೆ ಹಿಂದಿ ಭಾಷೆಯಲ್ಲಿ ಮಾತ್ರ ಇರುವ ವಿಶೇಷತೆ ಏನು ? ಮತ್ತು ಅದರಿಂದಾಗಿ ಆಡಳಿತಾತ್ಮಕ , ಸಾಂಸ್ಕೃತಿಕ ಮತ್ತು ದೇಶದ ಐಕ್ಯತೆಯನ್ನು ಹೆಚ್ಚಿಸುವ ಅಂಶಗಳು ಹಿಂದಿಯಲ್ಲಿ ಇದೆಯೇ ? ಹಿಂದಿಯಿಂದ‌ ದೇಶದ ಆಡಳಿತ ಸುಗಮವಾಗುವುದೇ ? ದೇಶದ ಅನಕ್ಷರಸ್ಥರ‌ ಸಂಖ್ಯೆ ನೆನಪಿದೆಯೇ ?

7) ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸಬೇಕು ಎಂದು ಹೇಳುತ್ತಿರುವವರು ವಿದ್ವಾಂಸರೇ – ತತ್ವಜ್ಞಾನಿಗಳೇ – ಭಾಷಾ ಪಂಡಿತರೇ – ಭಾರತದ ಸಾಂಸ್ಕೃತಿಕ ವಕ್ತಾರರೇ ? ಜಗದ್ವಿಖ್ಯಾತ ಸಂಶೋದಕರೇ? ಅಥವಾ ಕೇವಲ ಅಧಿಕಾರ ಹೊಂದಿರುವ ರಾಜಕಾರಣಿಗಳೇ‌ ?

8) ಭಾಷೆ ಒಂದು ಸಂವಹನ ಕಲೆ ಮಾತ್ರವೇ ? ಅಥವಾ ಭಾಷೆ ದೇಹದ ಒಂದು ಭಾಗವೇ ? ನಮ್ಮ ನಡವಳಿಕೆ ಸ್ವರೂಪವೇ ? ನಮ್ಮ ಸಂಸ್ಕೃತಿಯ ಜೀವನಾಡಿಯೇ ? ನಮ್ಮ ಅನ್ನ ಮಾರ್ಗವೇ ? ಒಂದು ವ್ಯಕ್ತಿತ್ವವೇ ?

9) ಬದುಕಲು ಯಾವ ಭಾಷೆಯಾದರೇನು ? ಹೇಗೋ ಬದುಕಿದರೆ ಸಾಕು ಎಂದು ದಿವ್ಯ ನಿರ್ಲಕ್ಷ್ಯ ವಹಿಸಬಹುದಾದ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವಷ್ಟು ಸಣ್ಣ ವಿಷಯವೇ ಇದು ?

9) ಅಕಸ್ಮಾತ್ ಕೆಲವು ಕನ್ನಡ ಹೋರಾಟಗಾರರು ಕೋಪದಲ್ಲಿ ಒಂದಷ್ಟು ಆಕ್ರೋಶವಾಗಿ ಮಾತನಾಡಬಹುದು, ಜೀವನೋಪಾಯಕ್ಕಾಗಿ ಭಾಷೆಯನ್ನು ಬಳಸುತ್ತಿರಬಹುದು, ಹಿಂದಿ ಹೇರಿಕೆಯನ್ನು ವಿರೋಧಿಸುವವರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸಿರಬಹುದು, ಕನ್ನಡ ಅಭಿಮಾನಿಗಳು ಹಿಂದಿ ಸಿನಿಮಾಗಳನ್ನೇ ಹೆಚ್ಚಾಗಿ ನೋಡಬಹುದು ಎಂಬ ಈ ಕಾರಣ ಮತ್ತು ನೆಪಗಳನ್ನು ಹೇಳಿ ಮತ್ತು ಅವರ ಆತ್ಮಶಕ್ತಿ – ವಾದ ಸಮರ್ಥನೆಯಲ್ಲಿ ಅಸಮರ್ಥರನ್ನಾಗಿ ಮಾಡಿ ( D – MORALISE ) ಅತ್ಯಂತ ಮಹತ್ವದ ಕನ್ನಡದ ಮೇಲೆ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳಬಹುದೇ ? ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಒಡಕು ಮೂಡುವುದು ಸರಿಯೇ ?
ಕೆಲವು ಲೋಪಗಳನ್ನು ಪ್ರತ್ಯೇಕವಾಗಿ ಚರ್ಚಿಸಬಹುದಲ್ಲವೇ ?

11) ನಮ್ಮ ದೇಶವನ್ನು ಆಳಿ – ಕೊಳ್ಳೆ ಹೊಡೆದು ಕೊಡಬಾರದ ಕಷ್ಟ ಕೊಟ್ಟು ಇಲ್ಲಿಂದ ಪರಾರಿಯಾದ ಪರಕೀಯ ಭಾಷೆ ಮತ್ತು ನಮ್ಮ ದೇಶದ ಎಲ್ಲಾ ರಾಜ್ಯಗಳ ಬಹುತೇಕ ಶಿಕ್ಷಣ ಸಂವಹನ ಆಕರ್ಷಕ ಉದ್ಯೋಗದಾತ ಮತ್ತು ಪ್ರತಿಷ್ಟೆ ಎನಿಸಿಕೊಂಡಿರುವ ಇಂಗ್ಲೀಷ್ ಭಾಷೆಯೇ ವ್ಯಾಪಕವಾಗಿರುವಾಗ ನಮ್ಮ ನೆಲದ ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸುವುದು ಸರಿಯೇ ?

12) ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ, ಇಂಗ್ಲೀಷ್ ಭಾಷೆಯನ್ನು ಸರ್ಕಾರದ ಯಾವುದಾದರೂ ಆಡಳಿತ ಒತ್ತಾಯಪೂರ್ವಕವಾಗಿ ಹೇರಿದರೆ ಅಥವಾ ಸ್ವತಃ ಕನ್ನಡ ಹಿಂದಿ ಮುಂತಾದ ಮಾಧ್ಯಮ ಶಾಲೆಗಳು ಇದ್ದರೂ ಜನರೇ ತಮ್ಮ ಸ್ವ ಇಚ್ಛೆಯಿಂದ ಇಂಗ್ಲೀಷ್ ಆಯ್ಕೆ ಮಾಡಿಕೊಂಡರೆ ?

13) ಒಂದು ವೇಳೆ ಇಂಗ್ಲೀಷ್ ಭಾಷೆಯ ಮಾದರಿಯಲ್ಲಿ ಹಿಂದಿ ಎಲ್ಲಾ ಜನರ ಸ್ವಯಂ ಆಯ್ಕೆಯಾಗುವುದಾದರೆ ಯಾರೂ ತಡೆಯುವುದು ಸಾಧ್ಯವಿಲ್ಲ ಅಲ್ಲವೇ ? ಹಾಗಿದ್ದಲ್ಲಿ ಒತ್ತಾಯಪೂರ್ವಕ ಏಕೆ ?

14) ಸಂವಿಧಾನಾತ್ಮಕವಾಗಿ ನಮ್ಮ ಸ್ವ ಇಚ್ಛೆಯಿಂದ ಯಾವುದೇ ಭಾಷೆಯನ್ನು ಕಲಿಯುವ, ಆ ಭಾಷೆಯ ಸಾಹಿತ್ಯ ಓದುವ, ಸಿನಿಮಾ ನೋಡುವ, ಅದನ್ನು ಅಭಿಮಾನಿಸುವ, ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇರುವಾಗ ಈ
” ಹೇರಿಕೆ ” ಯ ಹುನ್ನಾರವೇನು ?

15) ತಾಯಿಭಾಷೆಯೇ ನಮ್ಮೆಲ್ಲಾ ಕಲಿಕೆಯ, ನಮ್ಮೊಳಗಿನ ಅಂತಃಶಕ್ತಿಯ ನಿಜವಾದ ಕಾರಣ ಎಂದು ವಿಶ್ವ ಇತಿಹಾಸದ ಎಲ್ಲಾ ವಿಷಯ ತಜ್ಞರು ಹೇಳಿರುವಾಗ ಈ ಹೇರಿಕೆ ಸರಿಯೇ ? ತಮ್ಮದಲ್ಲದ ಭಾಷೆಯನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರಿದಾಗ ಮಾತೃಭಾಷೆ ಹಿಂದಿಯ ಮಕ್ಕಳ ನಡುವೆ ನಮ್ಮ ಮಕ್ಕಳು ನಲುಗುವುದಿಲ್ಲವೇ ?

16) ದಯವಿಟ್ಟು ಗಮನಿಸಿ. ಈ ಹೇರಿಕೆ ಮೇಲ್ನೋಟಕ್ಕೆ ಮಾಡುವ ಅಪಾಯಕ್ಕಿಂತಲೂ ದೀರ್ಘಕಾಲದಲ್ಲಿ ಅದು ನಮ್ಮ ಇಡೀ ಸಾಂಸ್ಕೃತಿಕ ವ್ಯಕ್ತಿತ್ವವನ್ನೇ ಆಪೋಶನ ತೆಗೆದುಕೊಂಡು ನಮ್ಮನ್ನು ಭಾಷಾ ಅಸ್ಪೃಶ್ಯರನ್ನಾಗಿ ಮಾಡುವ ಎಲ್ಲಾ ಸಾಧ್ಯತೆಗಳೂ ಕಾಣುವುದಿಲ್ಲವೇ ? ಮಾತೃಭಾಷೆಯ ಜೊತೆ ಇದೊಂದು ಪೂರಕ ಭಾಷೆ ಎಂದು ಹೇಳಲಾಗುತ್ತದೆ. ಆದರೆ ಒಳಗಿನ ಲೆಕ್ಕಾಚಾರವೇ ಬೇರೆ ಎಂಬ ಅನುಮಾನ ಕಾಡುವುದಿಲ್ಲವೇ ?

ಹೀಗೆ ಸಾಗುವ ಮತ್ತು ಮನದಲ್ಲಿ ಮೂಡುವ ಅನೇಕ ಪ್ರಶ್ನಾವಳಿಗಳಿಗೆ ಸೂಕ್ಷ್ಮವಾಗಿ ಉತ್ತರ ಹುಡುಕಿಕೊಂಡಾಗ ನಮಲ್ಲಿ ಮೂಡುವ ಸಮಷ್ಟಿ ಪ್ರಜ್ಞೆಯ ಜ್ಞಾನದಿಂದ ಹಿಂದಿ ಭಾಷೆಯ ಹೇರಿಕೆಯ ಬಗ್ಗೆ ಒಂದು ಅಭಿಪ್ರಾಯ ರೂಪಿಸಿಕೊಳ್ಳಬಹುದು.

ಒಟ್ಟಿನಲ್ಲಿ,
ಹಿಂದಿ ಅಥವಾ ಇನ್ಯಾವುದೇ ಭಾಷೆಯ ಬಗ್ಗೆ ಯಾರಿಗೂ ದ್ವೇಷ ಅಸೂಯೆ ಇಲ್ಲ. ಆ ಭಾಷೆಯ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ನಮ್ಮ ಮೇಲೆ ‌ತಾಯಿಭಾಷೆ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ‌ಹೇರಿಕೆ ಮಾಡುವುದರ ವಿರುದ್ಧ ಮಾತ್ರ ಪ್ರತಿಭಟನೆ ಮಾಡಬೇಕಿದೆ.
ಭಾರತದ ಒಕ್ಕೂಟ ವ್ಯವಸ್ಥೆಯ ನಿಜವಾದ ಶಕ್ತಿ ಅಡಗಿರುವುದು ಇಲ್ಲಿನ ವೈವಿಧ್ಯತೆಯಿಂದಲೇ ಎಂಬುದನ್ನು ಮರೆಯದಿರೋಣ. ರಾಜಕೀಯ ಹೊರತುಪಡಿಸಿ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕಿದೆ.

ಬೇರೆ ದೇಶಗಳ ಏಕ ಭಾಷೆ ಏಕ ಸಂಸ್ಕೃತಿಯ ಆದರ್ಶ ನಮಗೆ ಒಗ್ಗುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಸಹ ಸ್ವಾಗತಿಸುತ್ತಾ, ಗೌರವಿಸುತ್ತಾ…..

ಕನ್ನಡಮ್ಮನ ಅಳಲು……

ನಾನು ಮಕ್ಕಳೇ,
ನಿಮ್ಮ ತಾಯಿ ಕನ್ನಡಮ್ಮ ಮಾತನಾಡುತ್ತಿರುವುದು….

ಇಲ್ಲಿಯವರೆಗೂ ನನ್ನ ಧ್ವನಿ ನೀವೇ ಆಗಿದ್ದಿರಿ ಮತ್ತು ಇನ್ನು ಮುಂದೆಯೂ…………

ಆದರೆ ಇತ್ತೀಚಿನ ವರ್ಷಗಳಲ್ಲಿ ನನ್ನ ಮಕ್ಕಳಲ್ಲಿ ಏನೋ ಆತಂಕ, ಭಯ, ಕೋಪ, ಆಕ್ರೋಶವಿರುವುದನ್ನು ಕಂಡು ಹೆತ್ತ ಕರುಳ ಬಳ್ಳಿಗೆ ಸಂಕಟವಾಗಿ ನಿಮ್ಮ ಬಳಿ ನೇರ ಹೇಳಿಕೊಳ್ಳಬೇಕೆನಿಸಿತು.

ಏಕೆ ಕಂದಮ್ಮಗಳೇ, ಅಷ್ಟೊಂದು ಆಕ್ರೋಶ ಆತಂಕ. ನಿಮ್ಮ ಅಮ್ಮನ ಮೇಲೆ ಬೇರೆಯವರು ದೌರ್ಜನ್ಯ ಮಾಡುತ್ತಿದ್ದಾರೆ. ಅದರಿಂದ ನಮ್ಮಮ್ಮನಿಗೆ ಬಹಳ ತೊಂದರೆಯಾಗುತ್ತದೆ ಎಂದೇ.

ಅಯ್ಯೋ ಪುಟ್ಟಗಳ , ನನ್ನ ಬಗ್ಗೆ ನಿಮ್ಮ ಆಭಿಮಾನ ಪ್ರೀತಿ ನಿಮ್ಮ ರಕ್ತದಲ್ಲಿ – ನರನಾಡಿಗಳಲ್ಲಿ – ಉಸಿರಿನಲ್ಲಿ ಹರಿದಾಡುತ್ತಿರುವವರೆಗೂ ನನಗ್ಯಾವ ತೊಂದರೆಗಳು ಇಲ್ಲ. ಇನ್ನೂ ನೂರು ಭಾಷೆಗಳ ತಾಯಂದಿರು ಬಂದರೂ ನನಗೇನು ಆಗುವುದಿಲ್ಲ. ಏಕೆಂದರೆ ಯಾರು ಏನೇ ಹೇಳಿದರೂ ನನ್ನ ಮಕ್ಕಳ ತಾಯಿ ಪ್ರೀತಿ ನನಗೆ ತಿಳಿದಿಲ್ಲವೇ.

ಮಕ್ಕಳೇ, ಈ ಮಾತು ಎಂಬುದು ಸಾಮಾನ್ಯವಾಗಿ ಮನುಷ್ಯನ ಕಣ್ಣಿನಲ್ಲಿ ಮೂಡುವ ಬಿಂಬವನ್ನು ಗ್ರಹಿಸುವ, ಮೆದುಳಿನಲ್ಲಿ ದಾಖಲಾಗಿ, ಅಲ್ಲಿಂದ ರವಾನೆಯಾಗಿ ಮನಸ್ಸಿನಲ್ಲಿ ಮೂಡಿ ( ಕಣ್ಣು ಕಾಣದವರಿಗೆ ಮೊದಲಿಗೆ ಬಹುಶಃ ಮನಸ್ಸಿನ ಭಾವನೆಗಳನ್ನು ಮೆದುಳೇ ಗ್ರಹಿಸಬಹುದು ) ಗಂಟಲಿನ ಮುಖಾಂತರ ದಾಟಿ, ನಾಲಗೆಯನ್ನು ಹೊರಳಿಸಿ, ಬಾಯಿಯ ಮೂಲಕ ಹೊರಬರುವ ಗಾಳಿಯ ರೂಪದ ತರಂಗಗಳೇ ಭಾಷೆ.

ಇದರಲ್ಲಿ ಶ್ರೇಷ್ಠ ಕನಿಷ್ಠತೆಯ ಪ್ರಶ್ನೆ ಬರುವುದೇ ಇಲ್ಲ.
ಸೃಷ್ಟಿಯ ಆಯಾ ಪ್ರದೇಶದ ನೆಲಮೂಲದಿಂದ ಉದ್ಭವವಾಗಿರುವ ಮಾತುಗಳೇ ನಿಮ್ಮನ್ನು ಇತರ ಜೀವಿಗಳಿಗಿಂತ ಒಂದಷ್ಟು ಭಿನ್ನವಾಗಿ ಮಾಡಿದೆ. ಬೇರೆ ಜೀವಿಗಳು ತಮ್ಮದೇ ಧ್ವನಿಯಲ್ಲಿ ಮಾತನಾಡಬಹುದಾದರೂ ನಾಗರಿಕ ಪ್ರಜ್ಞೆ ಕ್ರಮಬದ್ಧವಾಗಿರುವುದು ಮನುಷ್ಯನಲ್ಲಿ ಮಾತ್ರವೆನಿಸುತ್ತದೆ.

ಪುಟ್ಟಗಳ, ಅದರಲ್ಲಿ ಕನ್ನಡಮ್ಮ ಹೆಚ್ಚು, ತೆಲುಗಮ್ಮ ಹೆಚ್ಚು, ತಮಿಳಮ್ಮ, ಹಿಂದಿಯಮ್ಮ, ಉರ್ದು ಅಮ್ಮ, ಇಂಗ್ಲೀಷಮ್ಮ ಹೆಚ್ಚು ಎಂಬುದೇನೂ ಇಲ್ಲ. ಅವರವರಿಗೆ ಅವರಮ್ಮನೇ ಇಷ್ಟ. ಮೊದಲ ಆದ್ಯತೆ ಅವರಮ್ಮನೇ. ಆದರೂ , ಇತರರ ಅಮ್ಮನನ್ನೂ ಗೌರವಿಸಬೇಕಾಗುತ್ತದೆ.

ಹಾಗಂತ ಯಾರೋ ಒತ್ತಾಯ ಪೂರ್ವಕವಾಗಿ ಯಾವುದೇ ರೂಪದಲ್ಲಿಯಾದರು ತಮಗೆ ಅಧಿಕಾರವಿದೆ ಎಂಬ ಅಹಂಮಿನಲ್ಲಿ ಇನ್ನೊಬ್ಬರ ಮೇಲೆ ದೌರ್ಜನ್ಯವೆಸಗಿದರೆ, ಒತ್ತಾಯಮಾಡಿದರೆ ಅದನ್ನು ಪ್ರತಿಭಟಿಸಲೇಬೇಕು. ಮಾತು ಪ್ರಪಂಚದ ಎಲ್ಲಾ ಮನುಷ್ಯರ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯ.

ಮಕ್ಕಳೇ, ಇನ್ನೊಂದು ಕಿವಿಮಾತು ಏನೆಂದರೆ, ಕಾಲ ಮುಂದುವರಿದಂತೆ, ನನ್ನ ಮಕ್ಕಳ ಸಂಖ್ಯೆ ಹೆಚ್ಚಾದಂತೆ, ಜ್ಞಾನ ಮತ್ತು ಹೊಟ್ಟೆಪಾಡಿನ ಅವಶ್ಯಕತೆ ಉಂಟಾದಂತೆ, ನೀವು ಕೇವಲ ನನ್ನನ್ನು ಮಾತ್ರ ಅವಲಂಬಿಸಿದರೆ ಕಷ್ಟವಾಗುತ್ತದೆ. ನಾನು ಅದನ್ನು ಅಪೇಕ್ಷಿಸಿದರೆ ಸ್ವಾರ್ಥಿಯಾಗಬಹುದು ಎನಿಸುತ್ತದೆ. ಆ ಕಾರಣಕ್ಕಾಗಿ ನನ್ನ ನಂತರ ಇಂಗ್ಲೀಷಮ್ಮನನ್ನೇ ಹೆಚ್ಚಾಗಿ ಪ್ರೀತಿಸಿ. ಆಕೆ ವಿಶ್ವದಲ್ಲೇ ಹೆಚ್ವು ಪ್ರಖ್ಯಾತಳು, ಜ್ಞಾನದಲ್ಲಿ ಶ್ರೀಮಂತಳೂ ಮತ್ತು ವಿಶಾಲ ಮನೋಭಾವದವಳೂ ಆಗಿದ್ದಾಳೆ.

ಮಕ್ಕಳೇ, ಇತ್ತೀಚಿಗೆ ಕೆಲವರು ಧರ್ಮದ – ರಾಜಕೀಯದ ನೆಪದಲ್ಲಿ ಇಂಗ್ಲೀಷಮ್ಮನಿಗಿಂತ ಹಿಂದಿಯಮ್ಮನೇ ನಮಗೆ ಮುಖ್ಯ ಎನ್ನುತ್ತಿದ್ದಾರೆ. ವಾಸ್ತವವಾಗಿ ಅದು ಅಷ್ಟು ಸರಿಯಲ್ಲ ಕಂದ. ಈ ಹಿಂದಿಯಮ್ಮ, ತೆಲುಗಮ್ಮ, ತಮಿಳಮ್ಮ, ಮಲಯಾಳಂ ಅಮ್ಮ, ಉರ್ದು ಅಮ್ಮ ಇವರೆಲ್ಲಾ ನಮ್ಮ ದಾಯಾದಿಗಳು. ಮೇಲು ನೋಟಕ್ಕೆ ನಾವೆಲ್ಲಾ ರಕ್ತ ಸಂಬಂಧಿಗಳೇ. ಆದರೆ ಮತ್ಸರ ಮಾತ್ರ ಒಳಗೊಳಗೇ ಕುದಿಯುತ್ತಿದೆ. ಒಬ್ಬರ ಏಳಿಗೆ ಇನ್ನೊಬ್ಬರು ಸಹಿಸುತ್ತಿಲ್ಲ. ಅಲ್ಲದೆ ಹೆಚ್ಚು ಕಡಿಮೆ ಅವರ ವ್ಯಾಪ್ತಿಯೂ ನಮ್ಮ ಅಷ್ಟೇ ಇದೆ‌. ಆದ್ದರಿಂದ ಪುಟ್ಟಗಳ ನನ್ನ ನಂತರ ನಿಮಗೆ ಇಂಗ್ಲೀಷಮ್ಮನೇ ಇರುವುದರಲ್ಲಿ ಉತ್ತಮ ಆಯ್ಕೆ ಎಂಬುದು ತಾಯಿಯಾಗಿ ನನ್ನ ಸಲಹೆ‌.

ಕೊನೆಯದಾಗಿ ಮಕ್ಕಳೇ, ಇತ್ತೀಚಿಗೆ ನಿಮಗೆ ನನ್ನ ಮೇಲೆ ಅದರಲ್ಲೂ ಹೆಚ್ಚಾಗಿ ಕೆಲವು ಹೆಣ್ಣು ಮಕ್ಕಳಿಗೆ ನನ್ನ ಬಗ್ಗೆ ಅಸಡ್ಡೆ ಬಂದಿದೆ. ಬೇರೆ ಥಳಕು ಬಳುಕಿನ ಅಮ್ಮಂದಿರನ್ನು ನೋಡಿದ ಮೇಲೆ ಆಕೆಯ ಸನಿಹವನ್ನೇ ಹೆಚ್ವಾಗಿ ಬಯಸುತ್ತಿದ್ದಾರೆ. ಏಕೆ ಈ ಕನ್ನಡಮ್ಮ ಬೇಸರವಾದಳೆ ? ಬಡವಳು, ಅಸಹಾಯಕಳು, ದಡ್ಡಿ ಎಂಬ ಅಸಡ್ಡೆಯೇ ? ಕೀಳರಿಮೆಯೇ ?
ಬೇಡ ಮಕ್ಕಳೇ , ಏನೇ ಆದರೂ ಸ್ವಂತ ತಾಯಿಯನ್ನು ತಿರಸ್ಕರಿಸಿದ ಯಾರೂ ನೆಮ್ಮದಿಯಾಗಿ ಜೀವಿಸುವ ಸಾಧ್ಯತೆ ಇಲ್ಲ.

ಆದ್ದರಿಂದ, ನನಗಿಂತ ನಿಮ್ಮ ಒಳ್ಳೆಯದಕ್ಕೇ ಹೇಳುತ್ತಿದ್ದೇನೆ. ಧೈರ್ಯವಾಗಿ ಹೇಳಿ,
ಹೆಮ್ಮೆಯಿಂದ ಹೇಳಿ,
ಛಲದಿಂದ ಹೇಳಿ,
ಸ್ವಾಭಿಮಾನದಿಂದ ಹೇಳಿ,
ಸಂತೋಷದಿಂದ ಹೇಳಿ,
ಆತ್ಮ ವಿಶ್ವಾಸದಿಂದ ಹೇಳಿ.
ಕನ್ನಡಮ್ಮನೇ ನಮ್ಮಮ್ಮ. ಉಳಿದವರು ಚಿಕ್ಕಮ್ಮ ಮಾತ್ರ.
ಕೊನೆಯ ಉಸಿರಿರುವವರೆಗೂ.

ಇನ್ನು ಮುಂದೆ ಪ್ರೀತಿ ಪ್ರೇಮ ಪ್ರಣಯ ನಗು ಅಳು ಕೋಪ ದ್ವೇಷ ಕರುಣೆ ರೌದ್ರ ಭೀಬತ್ಸ ಭಯಾನಕ ಮುಂತಾದ ಎಲ್ಲಾ ಭಾವನೆಗಳೂ ಕನ್ನಡವೇ . ಮನೆ ಶಾಲೆ ಕಾಲೇಜು ಸಿನಿಮಾ ಚಿತ್ರಮಂದಿರ ಆಸ್ಪತ್ರೆ ಮಾಲು ಬಸ್ಸು ರೈಲು ವಿಮಾನ ಮೆಟ್ರೋ ಪಾರ್ಕು ಹೋಟೆಲ್ಲು ಇತ್ಯಾದಿ ಎಲ್ಲಾ ಕಡೆ ಕನ್ನಡ ಕನ್ನಡ ಕನ್ನಡ ಎಂದು ಹೃದಯದಾಳದಿಂದ ಪ್ರತಿಜ್ಞೆ ಮಾಡಿ.
ಮುಂದಿನ ದಿನಗಳು ನಿಮ್ಮವೇ .

ಹೋಗಿ ಬರುತ್ತೇನೆ ಮಕ್ಕಳೇ, ಹುಷಾರು,
ಮತ್ತೆ ಭೇಟಿಯಾಗುತ್ತೇನೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

13 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

14 hours ago

KIADB ಭೂಸ್ವಾಧೀನ ವಿರೋಧಿಸಿ ತಾಲೂಕು ಕಚೇರಿಗೆ ಟ್ರ್ಯಾಕ್ಟರ್ ರ್ಯಾಲಿ

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ. ನಾರನಹಳ್ಳಿ, ಸೊಣ್ಣೇನಹಳ್ಳಿ  ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು…

22 hours ago

ಹುಟ್ಟಿಸುವವನೂ ಅವನೇ…. ಸಾಯಿಸುವವನೂ ಅವನೇ…

ದೇವರು ಎಷ್ಟೊಂದು ಒಳ್ಳೆಯವನಲ್ಲವೇ........ ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು…

1 day ago

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

2 days ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

2 days ago