“ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕಾಗಿದೆ”- ಸಿ‌ಎಂ‌ ಸಿದ್ದರಾಮಯ್ಯ

ಕೇಂದ್ರದ ಎನ್ ಡಿಎ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಾ ಬಂದಿರುವ ಅನ್ಯಾಯಕ್ಕೆ ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿ.  28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ. ಈ ಅನ್ಯಾಯದ ವಿರುದ್ಧ ಜಾತಿ-ಧರ್ಮ, ಪಕ್ಷ – ಪಂಥದ ಭೇದವಿಲ್ಲದೆ ದನಿ ಎತ್ತುವ ಶಪಥವನ್ನು ಪ್ರತಿಯೊಬ್ಬ ಕನ್ನಡಿಗನು ಮಾಡಬೇಕಾಗಿದೆ. ಇಂತಹದ್ದೊಂದು ಪ್ರಮಾಣ ವಚನ ಸ್ವೀಕಾರಕ್ಕೆ ಅನ್ಯಾಯದ ವಿರುದ್ಧ ನ್ಯಾಯದ ಗೆಲುವಿನ ಸಂಕೇತವಾದ ವಿಜಯದಶಮಿಯ ಶುಭ ದಿನ ಸಾಕ್ಷಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ? ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನು ಕೇಂದ್ರ ಸರ್ಕಾರವನ್ನು ಕೇಳಬೇಕಾಗಿದೆ. ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ರೂ.31,962 ಕೋಟಿ, ಬಿಹಾರಕ್ಕೆ ರೂ.17,921 ಕೋಟಿ, ಮಧ್ಯಪ್ರದೇಶಕ್ಕೆ ರೂ.13,987 ಕೋಟಿ ಮತ್ತು ರಾಜಸ್ತಾನಕ್ಕೆ ರೂ.10,737 ಕೋಟಿಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ ಎಂದರು.

ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಅಭಿವೃದ್ದಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಈ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಯಾಕೆ ಪೋಲಾಗಬೇಕು ಎನ್ನುವುದು ನಮ್ಮ ಪ್ರಶ್ನೆಯಾಗಿದೆ? ಎಂದರು.

ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ.3.64 ಮಾತ್ರ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ @BJP4India  ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ನಾವು ಒತ್ತಾಯಿಸುತ್ತಲೇ ಬಂದಿದ್ದರೂ ನರೇಂದ್ರನ ಮೋದಿ ಅವರ ಸರ್ಕಾರ ಕಿವುಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.713 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.647ಕ್ಕೆ ಇಳಿಸಿತು. ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ರೂ ₹62,275 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ ರೂ.5,495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನು ಕೂಡಾ ಬಿಜೆಪಿ ಸರ್ಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ.79,770 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದರು.

ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇಕಡಾ 5ರಷ್ಟಿದ್ದರೂ ದೇಶದ ಜಿಡಿಪಿಗೆ ಕರ್ನಾಟಕದ ಶೇಕಡಾ 8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಸತತವಾಗಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು 2017-18ರಿಂದ 2023-24ರ ವರೆಗೆ ಸುಮಾರು ರೂ. 59,274 ಕೋಟಿ ಹಣವನ್ನು ಕಳೆದುಕೊಂಡಿದೆ ಎಂದು ಹೇಳಿದರು.

ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ರೂ.4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು ರೂ.45,000 ಕೋಟಿ ಮಾತ್ರ. ಇದರ ಜೊತೆಗೆ ಅನುದಾನದ ರೂಪದಲ್ಲಿ ಅಂದಾಜು ₹15,000 ಕೋಟಿ ಸೇರಿರುತ್ತದೆ. ಇವೆಲ್ಲ ಕೂಡಿದರೆ ಕರ್ನಾಟಕ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. ಈ ಅನ್ಯಾಯವನ್ನು ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ? ಎಂದರು.

ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್‌ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. 2018-19ರಲ್ಲಿ ಕೇಂದ್ರ ಬಜೆಟ್‌ ಗಾತ್ರ ರೂ. ₹24,42,213 ಕೋಟಿ ಇತ್ತು. ಆಗ ಕೇಂದ್ರದಿಂದ ರಾಜ್ಯಕ್ಕೆ ದೊರೆಯುತ್ತಿದ್ದ ತೆರಿಗೆ ಪಾಲು ರೂ.35,895 ಕೋಟಿ ಹಾಗೂ ರೂ.16,082 ಕೋಟಿ ಸೇರಿ ಒಟ್ಟು ರೂ.46,288 ಕೋಟಿ ಲಭ್ಯವಾಗಿತ್ತು. 2024-25ರಲ್ಲಿ ಕೇಂದ್ರದ ಬಜೆಟ್‌ ಗಾತ್ರ ರೂ.48,20,514 ಕೋಟಿಗೆ ಏರಿಕೆಯಾಗಿದೆ. ಆದರೆ 2024-25ರ ಸಾಲಿನಲ್ಲಿ ಕರ್ನಾಟಕಕ್ಕೆ ನಿಗದಿ ಪಡಿಸಿರುವ ತೆರಿಗೆ ಪಾಲು ರೂ.44,485 ಕೋಟಿ. ಅಂದಾಜು ಅನುದಾನ ರೂ.15,299 ಕೋಟಿ. ಈ ರೀತಿ ತೆರಿಗೆ ಪಾಲು ಮತ್ತು ಅನುದಾನಗಳೆರಡೂ ಸೇರಿ ಕೇಂದ್ರದಿಂದ ರಾಜ್ಯಕ್ಕೆ ಸಿಗಲಿರುವ ಒಟ್ಟು ಹಣ ರೂ,59,784 ಕೋಟಿ ಮಾತ್ರ. ಅಂದರೆ ಕಳೆದ 8 ವರ್ಷಗಳ ಅವಧಿಯಲ್ಲಿ ಬಜೆಟ್ ಗಾತ್ರ ದುಪ್ಪಟ್ಟಿಗಿಂತ ಹೆಚ್ಚಾದರೂ ಕರ್ನಾಟಕಕ್ಕೆ ಸಿಗುವ ಕೇಂದ್ರದ ತೆರಿಗೆ ಪಾಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸಕ್ತ ಬಜೆಟ್‌ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ರೂ.1 ಲಕ್ಷ ಕೋಟಿಯಷ್ಟು ಹಣ ತೆರಿಗೆಯ ಪಾಲು ಹಾಗೂ ಅನುದಾನದ ಮುಖೇನ ದೊರೆಯಬೇಕಿತ್ತು, ಆದರೆ ದೊರೆತಿಲ್ಲ ಎಂದು ಹೇಳಿದರು.

ಕರ್ನಾಟಕಕ್ಕೆ ಈ ಪರಿಯ ದೊಡ್ಡ ಮಟ್ಟದ ಅನ್ಯಾಯ ಆಗಿರುವುದು ಮನವರಿಕೆಯಾದ ನಂತರವೇ ಹದಿನೈದನೇ ಹಣಕಾಸು ಆಯೋಗ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ ₹5,495 ಕೋಟಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಕನ್ನಡಿಗರ ಜನಪ್ರತಿನಿಧಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರೇ ಈ ಶಿಫಾರಸನ್ನು ನಿರಾಕರಿಸಿರುವ ಕಾರಣ ಆ ದುಡ್ಡು ಕೂಡಾ ಬರಲಿಲ್ಲ. ಇದಲ್ಲದೆ, ಹದಿನೈದನೇ ಹಣಕಾಸು ಆಯೋಗವು ಬೆಂಗಳೂರಿನ ಫೆರಿಫೆರಲ್‌ ರಿಂಗ್‌ ರಸ್ತೆಗೆ ರೂ.3,000 ಕೋಟಿ ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ ರೂ. 3000 ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಈ ಶಿಫಾರಸ್ಸುಗಳನ್ನು ತಿರಸ್ಕರಿಸಿದ ವಿತ್ತ ಸಚಿವರು ರಾಜ್ಯಕ್ಕೆ ಸುಮಾರು ರೂ.11,495 ಕೋಟಿ ದ್ರೋಹ ಮಾಡಿದ್ದಾರೆ ಎಂದು ಹೇಳಿದರು.

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಎರಡು ಚಕ್ರಗಳಂತೆ. ಈ ಎರಡೂ ಚಕ್ರಗಳೂ ಸಮಾನವಾಗಿ, ಸುಗಮವಾಗಿ ತಿರುಗಿದಾದ ಮಾತ್ರವೇ ದೇಶವು ನಾಗಾಲೋಟದಿಂದ ಪ್ರಗತಿಯ ಪಥದಲ್ಲಿ ಮುನ್ನಡೆಯಲು ಸಾಧ್ಯ. ವಿಪರ್ಯಾಸವೆಂದರೆ, ಇತ್ತೀಚಿನ ವರ್ಷಗಳಲ್ಲಿ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ಮೋದಿ ಸರ್ಕಾರದ ತಾರತಮ್ಯ ಧೋರಣೆಯು ಕರ್ನಾಟಕವೂ ಸೇರಿದಂತೆ ಭಾರತದ ದಕ್ಷಿಣದ ರಾಜ್ಯಗಳನ್ನು ನಿರಂತರವಾಗಿ ಅನ್ಯಾಯದ ಶೂಲಕ್ಕೆ ಕೊರಳೊಡ್ಡುವಂತೆ ಮಾಡಿದೆ ಎಂದರು.

ದೇಶವು ಇಂದು ಐದು ಟ್ರಿಲಿಯನ್‌ ಅರ್ಥ ವ್ಯವಸ್ಥೆಯಾಗುವ ಕನಸನ್ನು ಕಾಣುತ್ತಿದೆ ಎಂದರೆ ಅದರ ಹಿಂದೆ ದೇಶದ ಪ್ರಗತಿಗೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿರುವ, ದೇಶದ ಸಂಪತ್ತಿಗೆ ಅಗಾಧವಾದ ಸಂಪನ್ಮೂಲವನ್ನು ಒದಗಿಸುತ್ತಿರುವ ಕರ್ನಾಟಕದ ಸಹಿತ ದಕ್ಷಿಣ ಭಾರತದ ರಾಜ್ಯಗಳ ವಿಶೇಷ ಕೊಡುಗೆಯಿದೆ ಎನ್ನುವುದನ್ನು ಮರೆಯಬಾರದಲ್ಲವೇ? ಎಂದರು.

ಪ್ರಧಾನಿ‌ ಮೋದಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲು ಯೋಜನಾ ಆಯೋಗವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರಗಳಿಗೆ ದನಿಯೇ ಇಲ್ಲದ ರೀತಿಯಲ್ಲಿ ನೀತಿ ಆಯೋಗವನ್ನು ರಚಿಸಲಾಯಿತು. ಅದರ ಬೆನ್ನಲ್ಲಿಯೇ ಹದಿನೈದನೇ ಹಣಕಾಸು ಆಯೋಗವನ್ನು ರಚಿಸಿ ಅದರ ಕಾರ್ಯೋದ್ದೇಶಗಳನ್ನು ನಿಗದಿಗೊಳಿಸುವ ಮಾರ್ಗಸೂಚಿ ಅಂಶಗಳಲ್ಲಿ ಬದಲಾವಣೆ ಮಾಡಲಾಯಿತು. ಈ ಬದಲಾವಣೆಗಳು ಸಹಜವಾಗಿ ಕರ್ನಾಟಕವೂ ಸೇರಿದಂತೆ ಅಭಿವೃದ್ಧಿಯ ಪಥದಲ್ಲಿರುವ ದಕ್ಷಿಣದ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಿದೆ. ಕರ್ನಾಟಕದಿಂದ ಕ್ರೋಢೀಕರಿಸಲ್ಪಟ್ಟ ತೆರಿಗೆ ಕನ್ನಡಿಗರ ಕಷ್ಟನಷ್ಟಗಳಿಗೆ ಒದಗದೆ ಹೋದರೆ, ಕನ್ನಡಿಗರ ಕಣ್ಣೀರು ಒರೆಸಲು ಬಳಕೆಯಾಗದೆ ಹೋದರೆ ಅಂತಹ ತೆರಿಗೆಯನ್ನು ಸಂಗ್ರಹಿಸಿ ಏನು ಪ್ರಯೋಜನ? ದೇಶದ ಅಭಿವೃದ್ದಿಗೆ ವರ್ಷಂಪ್ರತಿ ಲಕ್ಷೋಪಲಕ್ಷ ಕೋಟಿ ರೂಪಾಯಿ ಹಣವನ್ನು ತೆರಿಗೆಯಾಗಿ ನೀಡಿದ ನಂತರವೂ ಅಪರೂಪಕ್ಕೊಮ್ಮೆ ಬರುವಂತಹ ಅತಿವೃಷ್ಟಿ, ಅನಾವೃಷ್ಟಿಗಳ ಸಂದರ್ಭದಲ್ಲಿ ಕೆಲ ಸಾವಿರ ಕೋಟಿ ರೂ. ಹಣವನ್ನು ಕೇಂದ್ರ ನಮ್ಮವರ ಕಣ್ಣೀರು ಒರೆಸಲು ನೀಡದೆ ಹೋದರೆ ಒಕ್ಕೂಟ ವ್ಯವಸ್ಥೆಗೆ ಅರ್ಥವಿದೆಯೇ? ಈ ಪ್ರಶ್ನೆಗಳು ಇಂದು ನಮ್ಮ ಮುಂದಿವೆ ಎಂದು ಹೇಳಿದರು.

ಕರ್ನಾಟಕವು ಒಕ್ಕೂಟ ವ್ಯವಸ್ಥೆಯೆಡೆಗೆ ತನಗಿರುವ ಎಲ್ಲ ಗೌರವವನ್ನು ಉಳಿಸಿಕೊಂಡೇ, ತನ್ನ ನ್ಯಾಯಯುತ ಪಾಲನ್ನು ಪಡೆಯಲು ಹೇಗೆ ಮುಂದುವರೆಯಬೇಕು ಎನ್ನುವ ಚರ್ಚೆಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ನಡೆಯಬೇಕಿದೆ. ಇಂತಹ ಒಂದು ರಚನಾತ್ಮಕ ಚರ್ಚೆ ವಿಜಯದಶಮಿಯ ಶುಭದಿನದಿಂದಲೇ ಶುರುವಾಗಲಿ ಎನ್ನುವುದು ನನ್ನ ಹಾರೈಕೆ ಎಂದು ತಿಳಿಸಿದರು.

Ramesh Babu

Journalist

Recent Posts

ಸಮಾಜಸೇವಕ ಮಹೇಂದ್ರ ಬಾಬುಗೆ ಅದ್ಧೂರಿ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ಸಾಯಿರಾಂ ಡ್ರಿಪ್ ಇರಿಗೇಷನ್ ಹಾಗೂ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರಾದ ಬಿ. ಮಹೇಂದ್ರ ಬಾಬು ಅವರ 46ನೇ ವರ್ಷದ ಹುಟ್ಟುಹಬ್ಬವನ್ನು…

9 hours ago

ಕುಖ್ಯಾತ ಅಂತರರಾಜ್ಯ ಕೇಬಲ್ ಕಳ್ಳರ ಬಂಧನ: ₹15 ಲಕ್ಷ ಮೌಲ್ಯದ ಕೇಬಲ್ ವಶ

ದೊಡ್ಡಬಳ್ಳಾಪುರ: ಅಲ್ಯೂಮಿನಿಯಂ ವಿದ್ಯುತ್ ಕೇಬಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಂತರರಾಜ್ಯ ಕೇಬಲ್ ಕಳ್ಳರ ಜಾಲವನ್ನು…

20 hours ago

RSS ನೋಂದಣಿಗೆ ಆಗ್ರಹಿಸಿ ಪ್ರತಿಭಟನೆ; ರಾಷ್ಟ್ರಪತಿಗಳಿಗೆ ಮನವಿ

ದೊಡ್ಡಬಳ್ಳಾಪುರ : ಹೊರದೇಶಗಳಲ್ಲಿ ಅಲ್ಲಿನ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಿಕೊಂಡಿರುವ ಸಂಘ ಪರಿವಾರ, ಇಲ್ಲಿನ ನೆಲದ ಕಾನೂನಿಗೆ ವ್ಯತಿರಿಕ್ತವಾಗಿ…

21 hours ago

ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಣೆ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರದ್ದು: ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜನೆ-ವಕೀಲ ಪ್ರತಾಪ್

ದೊಡ್ಡಬಳ್ಳಾಪುರ: ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆಯಬೇಕಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕೊನೆಯ ಕ್ಷಣದಲ್ಲಿ ಕಾಲೇಜು ವತಿಯಿಂದ…

1 day ago

ಮುಂಗಾರು ಮಳೆ ಕೊರತೆ, ಭೂಗರ್ಭದ ನೀರಿಗೆ ಭಾರೀ ಹೊಡೆತ: ಜಲಬಿಕ್ಕಟ್ಟಿನ ಮುನ್ಸೂಚನೆ

ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಸಾಮಾನ್ಯವಾಗಿ…

1 day ago

ರಕ್ತ ಸಿಕ್ತ ದೆಹಲಿ… ಇದು ಒಳ್ಳೆಯ ಬೆಳವಣಿಗೆಯಲ್ಲ….

ರಕ್ತ ಸಿಕ್ತ ದೆಹಲಿ...... ಇದು ಒಳ್ಳೆಯ ಬೆಳವಣಿಗೆಯಲ್ಲ.... ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಲಾಟಿಚಾರ್ಜ್ ಹಂತಕ್ಕೆ ತಲುಪುವ ಮೊದಲೇ ಸರ್ಕಾರ ಒಂದಷ್ಟು…

1 day ago