ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯದೇ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಟ್ಟಿರುವ ಆರೋಪದ ಮೇಲೆ ಗದಗ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ. ಜಾಯಗೊಂಡೆ ಅವರನ್ನು ಸಸ್ಪಂಡ್ ಮಾಡಿ ಪೌರಾಡಳಿತ ಇಲಾಖೆ ಆದೇಶಿಸಿದೆ.
ದೊಡ್ಡಬಳ್ಳಾಪುರ ನಗರಸಭೆಯ ಕರೇನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ 39 ಅನಧಿಕೃತ ನಿವೇಶನಗಳಿಗೆ ಇ-ಸ್ವತ್ತು ನೀಡಿದ್ದಾರೆ. ಆದರೆ ಇದಕ್ಕೆ ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆದಿರಲಿಲ್ಲ. ಪೌರಾಡಳಿತ ನಿರ್ದೇಶನಾಲಯ ಹಾಗೂ ಸರ್ಕಾರದ ಸುತ್ತೋಲೆ ಅನುಸಾರ ಖಾತೆಗಳನ್ನು ರದ್ದುಪಡಿಸಲು ಕ್ರಮ ವಹಿಸದೇ 39 ನಿವೇಶನಗಳ ಆಸ್ತಿಯ ಹಕ್ಕನ್ನು ಪವತಿ ಮಾಡಿಕೊಡಲಾಗಿದೆ.
ಸುಜಾತರೆಡ್ಡಿ, ಶ್ರೀನಿವಾಸರೆಡ್ಡಿ ಹೆಸರಿಗೆ ಜಂಟಿಯಾಗಿ ಆಸ್ತಿ ಹಕ್ಕನ್ನು ವರ್ಗಾಯಿಸಿ ಇ- ಸ್ವತ್ತು ಮಾಡಿಕೊಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ.
ಅಂದಿನ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ. ಜಾಯಗೊಂಡೆ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಪೌರಾಡಳಿತ ಇಲಾಖೆಗೆ ಪತ್ರ ಬರೆದಿದ್ದರು.
ಈ ಪತ್ರ ಗಮನಿಸಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಮಂಜುಶ್ರೀ ಎನ್. ಅವರು ಕರ್ತವ್ಯ ಲೋಪ ಎಸಗಿರುವ ಅಂದಿನ ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಾಗಿದ್ದ ಹಾಗೂ ಗದಗ -ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ್ ಎಸ್. ಸುಣಗಾರ ಹಾಗೂ ಕಂದಾಯ ಅಧಿಕಾರಿ ರವೀಂದ್ರ ಬಿ.ಜಾಯಗೊಂಡೆ ಮೇಲಿನ ಇಲಾಖಾ ವಿಚಾರಣೆ ಕಾಯ್ದಿರಿಸಿ ಕೆ. ಸಿ. ಎಸ್. (ಸಿಸಿಎ) ನಿಯಮ, 1957 ರ ನಿಯಮ 10(1)(ಡಿ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಜ.5 ಗೊಳಿಸಿ ಆದೇಶ ಹೊರಡಿಸಿದ್ದಾರೆ.