ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಪುತ್ರ ಎಂ.ಕೆ ಅಳಗಿರಿ ಆಪ್ತರಾಗಿದ್ದ ವಿ.ಕೆ.ಗುರುಸ್ವಾಮಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಣಸವಾಡಿಯ ಕಮ್ಮನಹಳ್ಳಿ ಸುಖಸಾಗರ್ ಹೋಟೆಲ್ನಲ್ಲಿ ಟೀ ಕುಡಿಯುವಾಗ ನಡೆದಿದೆ.
ಗುರುಸ್ವಾಮಿ ತಲೆ ಭಾಗಕ್ಕೆ ಲಾಂಗ್ ನಿಂದ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆಗಾಗಿ ಗುರುಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನಿಂದ ಕಾರಿನಲ್ಲೇ ಫಾಲೋ ಮಾಡಿಕೊಂಡು ಬಂದಿದ್ದ ಐವರು ಹಂತಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ವಿ.ಕೆ ಗುರುಸ್ವಾಮಿ ಮಧುರೈ ಮೂಲದವರು. ಮಧುರೈ ಕಾರ್ಪೊರೇಷನ್ ಮಾಜಿ ಅಧ್ಯಕ್ಷ ಆಗಿದ್ದರು. ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿವಿಧ ಪ್ರಕರಣಗಳಲ್ಲಿ ಗುರುಸ್ವಾಮಿ ಆರೋಪಿ. ತಮಿಳುನಾಡಿನ ನಟೋರಿಯಸ್ ರೌಡಿ ಕೂಡ ಆಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಲಿಟಿಗೇಷನ್ ಇರೋ ಸೈಟ್ ವಿಚಾರವಾಗಿ ಮಾತುಕತೆಗೆ ಬೆಂಗಳೂರಿಗೆ ಬಂದಿದ್ದ ಗುರುಸ್ವಾಮಿ. ಹೋಟೆಲ್ವೊಂದರಲ್ಲಿ ರೂಂ ಮಾಡಿಕೊಂಡು ಇದ್ದು, ಇಡೀ ದಿನ ಮನೆಯೊಂದು ಹುಡುಕಿ ಸೈಟ್ ಬಗ್ಗೆ ಗುರುಸ್ವಾಮಿ ಮಾತಾಡುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಬ್ರೋಕರ್ ಜತೆ ಮಾತಾಡುವಾಗ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದು ಏಕಾಏಕಿ ಅಟ್ಯಾಕ್ ಮಾಡಿದ್ದಾರೆ. ಸದ್ಯ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.