‘ಕರಿ ಮಣಿಯ ಮಾಲೀಕ’ಎಂಬ ಪರಿಕಲ್ಪನೆ: ಕರಿಮಣಿ ಮತ್ತು ನಾನು…

ಕರಿಮಣಿ ಮಾಲೀಕನ ಹಾಡು ವೈರಲ್ ಆಗುತ್ತಿದ್ದಂತೆಯೇ ವಿಷಯದ ಬಗ್ಗೆ ಅನೇಕ ವಾದ ವಿವಾದಗಳು ಮೂಡಿದ್ದು ರೀಲ್ಸ್ ಗೆ ಸಂಬಂಧ ಪಟ್ಟಂತೆ ಅನೇಕ ಸಾವು ನೋವುಗಳು ಕೂಡ ವರದಿಯಾಗಿದೆ.

ಕರಿಮಣಿ, ತಾಳಿ ಮತ್ತು ಮಂಗಳಸೂತ್ರ ಮೊದಲಾದವು ವೈವಾಹಿಕ ಬಂಧನದ ಗುರುತಿಗಾಗಿ ತೊಡುವಂತಹದು. ಹಿಂದು ಧರ್ಮದ ಪ್ರಕಾರ ಅದರ ಸುತ್ತಲೂ ಅನೇಕ ಧಾರ್ಮಿಕ ನಂಬಿಕೆಗಳು ಮತ್ತು ಶ್ರದ್ಧೆಯ ವಿಚಾರಗಳು ತಳಕು ಹಾಕಿಕೊಂಡಿವೆ. ಮತ್ತು ವಿವಾಹಿತ ಮಹಿಳೆಯು ಕಡ್ಡಾಯವಾಗಿ ಧರಿಸಲೇಬೇಕಾದ ಕರ್ತವ್ಯ ಎಂದು ಆಕೆಗೆ ಬೋಧನೆ ಮಾಡಲಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಅನೇಕರು ಈ ಆದೇಶಗಳನ್ನು ಪಾಲಿಸುತ್ತಿದ್ದಾರೆ. ಇನ್ನು ಕೆಲವರು ತಮಗೆ ಸರಿ ಕಂಡಂತೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ವಿಚ್ಛೇದನದ ಮತ್ತು ಡೊಮೆಸ್ಟಿಕ್ ವೈಲೆನ್ಸ್ ಆಕ್ಟ್ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಹೋರಾಡಿ ಹೋರಾಡಿ ಕೊನೆಗೆ ಅಂತೂ ವಿಷಯವು ಮಧ್ಯಸ್ತಿಕ ಕೇಂದ್ರದಲ್ಲಿ ರಾಜಿ ತೀರ್ಮಾನದ ಸಲುವಾಗಿ ಬಂದಾಗ ಹೆಣ್ಣು ಮಗಳಿಗೆ ಹಿಂದಿರುಗಿಸಬೇಕಾದ ಒಡವೆ, ಮಕ್ಕಳ ಕಸ್ಟಡಿ, ಜೀವನಾಂಶದ ಶಾಶ್ವತ ಪರಿಹಾರ ಮೊದಲಾದ ಎಲ್ಲಾ ವಿಷಯಗಳು ಕೂಡ ತೀರ್ಮಾನವಾಗುತ್ತವೆ. ಈ ವಿಷಯ ಸೌಹಾರ್ದಯುತವಾಗಿಯೂ ಆಗಬಹುದು ಅಥವಾ ನಿಗಿ ನಿಗಿ ಕೆಂಡದಂತೆ ಸುಡುತ್ತಿರುವ ದ್ವೇಷದ ನಡುವೆ ಬೈಗುಳ ಮತ್ತು ಜಗಳದೊಡನೆ ಕೂಡ ತೀರ್ಮಾನವಾಗಬಹುದು.

ಆದರೆ, ವಿಷಯ ಬಂದು ನಿಲ್ಲುವುದು ತಾಳಿಯ ಬಗ್ಗೆ. ಲಕ್ಷಾಂತರ ರೂಪಾಯಿಗಳ ಪರಿಹಾರವನ್ನು ಕೊಡುವ ಪತಿ ತನಗೆ ಆಕೆ ತಾಳಿಯನ್ನು ಹಿಂದಿರುಗಿಸಲೇಬೇಕು ಎಂದು ಪಟ್ಟು ಹಿಡಿಯುತ್ತಾನೆ. ವಿಚ್ಛೇದನವಾದ ನಂತರ ತಾನು ಕಟ್ಟಿದ ತಾಳಿ ತನಗೆ ಮರಳಿ ಕೊಡಲೇಬೇಕು. ಅದನ್ನು ತಾನು ದೇವರ ಹುಂಡಿಗೆ ಹಾಕಬೇಕು ಎಂದು ಆತನ ಒತ್ತಾಯ. ಅಪಾರ ಪರಿಹಾರವನ್ನು ಮತ್ತು ಜೀವನಾಂಶವನ್ನು ಪಡೆದಿರುವ ಆಕೆ ಒಂದು ಅಥವಾ ಎರಡು ಗ್ರಾಂ ತೂಕದ ತಾಳೆಯನ್ನು ಆತನಿಗೆ ಮರಳಿ ಕೊಡಲು ಸುತಾರಾಂ ಒಪ್ಪುವುದಿಲ್ಲ. ಅಂತೂ ಕೊನೆಗೆ ಯಾರು ಈ ಬಗ್ಗೆ ಶಾಂತವಾಗಿ ಆಲೋಚನೆ ಮಾಡುವರೋ ಅವರನ್ನು ಒಲಿಸಿ ತಾಳಿಯ ತೀರ್ಮಾನವಾಗುತ್ತದೆ.

ಮುಸ್ಲಿಂ ಸಂಪ್ರದಾಯದಲ್ಲಿ ತಾಳಿಯ ಪರಿಕಲ್ಪನೆ ಇಲ್ಲ. ಆದರೆ, ಮದುವೆಯ ಸಂದರ್ಭದಲ್ಲಿ ಅವಶ್ಯಕವಾಗಿ ಕರಿಮಣಿಯ ಸಂಪ್ರದಾಯವಿದೆ. ಗಂಡನ ಮನೆಯವರು ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ಬಳುವಳಿಯಾಗಿ ನೀಡುವ ಅಪಾರ ಚಂದದ ಒಡವೆಗಳ ಪೈಕಿ ಕರಿಮಣಿ ಸರವು ಕೂಡ ಒಂದು. ಆದರೆ ಅದನ್ನು ಪತಿಯಾದವನು ಕಟ್ಟುವುದಿಲ್ಲ ಬದಲಿಗೆ ಪತಿಯ ತಾಯಿ ಅಥವಾ ಕಡೆಯ ಹಿರಿಯ ಮುತ್ತೈದೆಯ ಮಹಿಳೆಯೊಬ್ಬಳು ಕರಿಮಣಿ ಸರವನ್ನು ವಧುವಿನ ಕೊರಳಿಗೆ ತೊಡಿಸುತ್ತಾಳೆ. ಏಕೆಂದರೆ ಅದಕ್ಕೆ ಹುಕ್ ಇರುತ್ತದೆ. ಹೀಗಾಗಿ ಅದನ್ನು ಒಂದು ಒಡವೆಯಾಗಿ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುತ್ತಾರೆ.

ಆದರೂ ಕೂಡ ಅದು ವೈವಾಹಿಕ ಸ್ಟೇಟಸ್ ನ ಲಾಂಛನವಾಗಿಯೇ ಕಂಡು ಬರುತ್ತದೆ. ಅದನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ಧರಿಸುವುದಿಲ್ಲ.

ಮುಸ್ಲಿಮರಲ್ಲಿ ಕರಿಮಣಿಯೊಂದಿಗೆ ಅವರದೇ ಆದ ಲಾಂಛನಗಳನ್ನು ಪೋಣಿಸುತ್ತಾರೆ. ಅರ್ಧ ಚಂದ್ರಾಕೃತಿ ಅಥವಾ ಪೂರ್ಣಚಂದ್ರ ಕೃತಿಯ 21 ಚಿನ್ನದ  ತುಣುಕುಗಳೊಡನೆ ಕರಿಮಣಿಯನ್ನು ಪೋಣಿಸುತ್ತಾರೆ. ಮತ್ತು ನಿಕಾ ಆದ ಕೂಡಲೇ ವರನ ಕಡೆಯ ಹಿರಿಯ ಮಹಿಳೆ ಅದನ್ನು ಆಕೆಯ ಕೊರಳಿಗೆ ತೊಡಿಸುತ್ತಾಳೆ. ಇದನ್ನು ಗಲ್ಸರ್ ಎಂದು ಕರೆಯುತ್ತಾರೆ. ಪೂರ್ಣಚಂದ್ರಾಕೃತಿಯ ಗಲ್ಸರ್ ನಲ್ಲಿ ಎರಡು ಚಂದ್ರಾಕೃತಿಯ ಚಿನ್ನದ ನಡುವೆ ಒಂದೊಂದೇ ದಪ್ಪ ಕರಿಮಣಿ ಇರುತ್ತದೆ. ಆದರೆ ಅರ್ಧ ಚಂದ್ರಾಕೃತಿಯ ಗರ್ಲ್ಸರಿನಲ್ಲಿ ಎರಡು ಅರ್ಧ ಚಂದ್ರಾಕೃತಿಗಳ ನಡುವೆ  ಮೂರು ಎಳೆಗಳಿಂದ ಕೂಡಿದ ಸಣ್ಣ ಸೈಜಿನ ಅಪಾರ ಕರಿಮಣಿ ಗಳನ್ನು ಪೋಣಿಸಲಾಗಿರುತ್ತದೆ.

ಆದರೆ, ಮುಸ್ಲಿಮರಲ್ಲಿ ಈಗಲ್ಸರ್ ನ ಸಾಂಪ್ರದಾಯ ಮಾಯವಾಗುತ್ತಿದೆ. ಅದೊಂದು ಪಳೆಯುಳಿಕೆಯಾಗಿದೆ. ಅದಕ್ಕೆ ಬದಲಾಗಿ ಹಿಂದೂ ಹೆಣ್ಣು ಮಕ್ಕಳ ರೀತಿಯಲ್ಲಿಯೇ ಎರಡು ಎಳೆ ಅಥವಾ ಒಂದು ಎಳೆಯ ಮಂಗಳಸೂತ್ರದ ಶೈಲಿಯಲ್ಲಿಯೇ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಕರಿಮಣಿಯನ್ನು ಧರಿಸುತ್ತಾರೆ. ಆದರೆ ತಾಳಿ ಮಾತ್ರ ಇರುವುದಿಲ್ಲ. ಇದರ ಬಗ್ಗೆ ಕೂಡ ಅನೇಕ ಧಾರ್ಮಿಕ ಪಂಡಿತರು ಕರಿಮಣಿ ಸರವನ್ನು ಮುಸ್ಲಿಂ ಹೆಣ್ಣು ಮಕ್ಕಳು ಧರಿಸಬೇಕಿಲ್ಲ. ಅದು ಹಿಂದೂ ಸಂಪ್ರದಾಯ. ಬೇರೆ ಸಂಪ್ರದಾಯಗಳನ್ನು ಮುಸ್ಲಿಂ ಹೆಣ್ಣು ಮಕ್ಕಳು ಪಾಲಿಸ ಕೂಡದು ಎಂದು ಕೆಲವು ಪ್ರವಚನಗಳಲ್ಲಿ ಕರೆ ನೀಡುತ್ತಾರೆ. ಆದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಎಷ್ಟೇ ಒಡವೆಗಳಿದ್ದರೂ ಕೂಡ ಕರಿಮಣಿ ಸರ ಕೂಡ ಒಂದು ವಿಶೇಷ ಒಡವೆಯಾಗಿ ಪರಿಗಣಿಸಿ ಧರಿಸುವುದನ್ನು ಮುಂದುವರೆಸಿಯೇ ಇದ್ದಾರೆ.

ಆದರೆ, ಕರಿಮಣಿ ಮಾಲೀಕನ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಏಕೆಂದರೆ ಕರಿಮಣಿ ಸರಕ್ಕೆ ಯಾವುದೇ ಧಾರ್ಮಿಕ ಪಾವಿತ್ರ್ಯತೆ ಇಲ್ಲ. ಅದೊಂದು ಒಡವೆಯಾಗಿ ತಮ್ಮ ಖುಷಿಗಾಗಿ ತೊಡುವ ಆಭರಣ ಮಾತ್ರ.

ನಾನು ಕೂಡ ನನ್ನ ಮದುವೆಯಲ್ಲಿ ಗಲ್ಸರ್ ತೊಟ್ಟು ಸಂಭ್ರಮಿಸಿ ನಂತರ ಉದ್ದನೆಯ ಮಜಬೂತಾದ ಕರಿಮಣಿ ಸರಕ್ಕೆ ಅಪ್ ಗ್ರೇಡಾಗಿ ಹಾಲಿ ಕೊರಳಿನ ಸುತ್ತ ಮಾತ್ರ ಸುತ್ತುವರೆಯುವ ಪುಟ್ಟ ಕರಿಮಣಿ ಸರದ ಮಾಲೀಕಳಾಗಿ ಅದನ್ನು ಕೂಡ ಐದು ವರ್ಷಕ್ಕೊಮ್ಮೆ ತೊಡುವ ಪಂಚವಾರ್ಷಿಕ ಯೋಜನೆಯಲ್ಲಿ ನಿರತಳಾಗಿದ್ದೇನೆ.

ಮದುವೆ ಆದ ಹೊಸದರಲ್ಲಿ ಮಾತ್ರ ನಾನು ಕರಿಮಣಿಯೊಂದಿಗೆ ಅತ್ಯಂತ ಭಾವನಾತ್ಮಕವಾದ ಸ್ವಯಂ ಬಂಧನದ ಬಾವುಕತೆಯಲ್ಲಿ ಲೀನವಾಗಿದ್ದೆ. ನಂತರದ ಸಹಜ ಮತ್ತು ನೆಮ್ಮದಿಯ ವೈವಾಹಿಕ ಜೀವನದ ಸಂಬಂಧದಲ್ಲಿ ಕರಿಮಣಿ ಅಗತ್ಯ ಮತ್ತು ಅನಿವಾರ್ಯ ಎಂದು ನನಗೆ ಅನಿಸಲಿಲ್ಲ. ಇದು ನನ್ನ ಮತ್ತು ಕೇವಲ ನನ್ನ ಅಭಿಪ್ರಾಯ ಮಾತ್ರ. ಅವರವರು ಅವರವರ ನಿಲುವು ಮತ್ತು ಅಭಿಪ್ರಾಯವನ್ನು ತಳೆಯಲು ಸ್ವತಂತ್ರರಿದ್ದಾರೆ.

ಆದರೆ, ‘ಕರಿ ಮಣಿಯ ಮಾಲಿಕ ‘ಎಂಬ ಪರಿಕಲ್ಪನೆ ನನಗೆ ಖಂಡಿತವಾಗಿಯೂ ಒಪ್ಪಿಗೆ ಇಲ್ಲ. ಇದರ ಹಿಂದೆ ಹೆಣ್ಣಿನ ಮೇಲೆ ವಿಧಿಸಲಾದ ಶೀಲ, ನಿಷ್ಠೆ ಮತ್ತು ದಾಂಪತ್ಯ ಜೀವನದಲ್ಲಿ ಪಾತಿವೃತ್ಯ ರಕ್ಷಣೆ ಮೊದಲಾದ ಕಟ್ಟಳೆಗಳು ಕಂಡು ಬರುತ್ತವೆ. ಹಾಗೂ ಸದರಿ ದಾಂಪತ್ಯ ಜೀವನದಿಂದ ಜನಿಸಿದ ಮಕ್ಕಳು ಆಕೆಯ ಪತಿಯ ಸಂತಾನವೇ ಮಾತ್ರ ಆಗಿರಬೇಕು ಎಂಬ ಶರತ್ತು ಮತ್ತು ಹಾಗಾಗದಿದ್ದಲ್ಲಿ…! ಎಂಬ ಗಂಡಿನ ಅಭದ್ರತೆ ಇದೆ ಎಂದು ನನಗನಿಸುತ್ತೆ. ಮತ್ತೊಮ್ಮೆ ಇದು ನನ್ನ ಖಾಸಗಿ ಅಭಿಪ್ರಾಯ.

ಹಿಂದಿನ ತಲೆಮಾರಿನ ಜನರ ರಕ್ತ ಸಂಬಂಧಿಗಳು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದು, ನಂತರ ಅವರುಗಳೊಡನೆ ವೈವಾಹಿಕ ಸಂಬಂಧ ಕೂಡ ಇದ್ದುದರಿಂದ ಆ ಸಂದರ್ಭದಲ್ಲಿ ನಮ್ಮ ಊರು ಮೊಹಲ್ಲ ಗಳಿಂದ ಪಾಕಿಸ್ತಾನ ಮತ್ತು ಭಾರತದ ನಡುವೆ ಪರಸ್ಪರ ಬರಹೋಗುವ ಸಂಬಂಧಗಳು ಕೂಡ ಇದ್ದವು. ಅನೇಕ ಜನ ಪಾಕಿಸ್ತಾನಿಯರು ನಮ್ಮ ಊರಿಗೆ ಕೂಡ ಬರುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಬಂದಿದ್ದ ಒಂದು ಕುಟುಂಬವು ಕರಿಮಣಿ ಸರವನ್ನು ಕಂಡು ಎಷ್ಟು ಮೋಹಕ್ಕೊಳಗಾದರೆಂದರೆ ಸುಮಾರು ಆರು ಜನ ಮಹಿಳೆಯರಿದ್ದ ಆ ತಂಡದವರು ಪ್ರತಿಯೊಬ್ಬರೂ ಕೂಡ ಒಂದೊಂದು ಕರಿಮಣಿ ಸರವನ್ನು ಮತ್ತು ಒಂದೊಂದು  ಮೈಸೂರು ಸಿಲ್ಕ್ ಸೀರೆಯನ್ನು ಖರೀದಿಸಿದರು. ಸೀರೆ ಕೂಡ ಹಿಂದೂ ಸಂಸ್ಕೃತಿಯ ಕೊಡುಗೆ. ಅದನ್ನು ಮುಸ್ಲಿಂ ಮಹಿಳೆಯರು ತೊಟ್ಟು ಸೊಂಟ, ಬೆನ್ನು ತೋರಿಸಿಕೊಂಡು ಉಡ ಬೇಕಿಲ್ಲ ಎಂಬ ಆದೇಶಗಳು ಹರಿದಾಡುತ್ತಿದ್ದರೂ, ಅವರುಗಳ ಪೈಕಿ ಕೆಲವರಂತೂ ಸೀರೆಗಳನ್ನು ಕಡ್ಡಾಯವಾಗಿ ತೊಡುವವರಾಗಿಯೇ ಆಗಿದ್ದಾರೆ. ಒಂದು ಪ್ರದೇಶದ ನಿರ್ದಿಷ್ಟ ಭಾಷೆ ಅನ್ನ ಹವೆ ನೀರು ದೋಸೆ ಇಡ್ಲಿ ಸೀರೆ ಬಟ್ಟೆ ಒಡವೆ ಹಬ್ಬ ಮತ್ತು ಸಾಂಸ್ಕೃತಿಕ ಆಚರಣೆಗಳು ಆಳವಾಗಿ ಬೇರು ಬಿಟ್ಟಿರುತ್ತವೆ.

ಬಳೆಗಳ ಕಥೆಯೂ ಕೂಡ ಇದೇ ಆಗಿದೆ. ಹಾಗೆ ನೋಡಿದಲ್ಲಿ ನಿಖಾ ನಡೆಯುವ ಹಿಂದಿನ ದಿನ ನಡೆಸುವ ಶುಕ್ರನ ಎಂಬ ಆಚರಣೆಯಲ್ಲಿ ವಧುವಿನ ಕೈಗಳಿಗೆ ವರನ ಕಡೆಯ ಹಿರಿಯ ಮಹಿಳೆಯರು ಕೆಂಪು ಮತ್ತು ಹಸಿರು ಬಳೆಗಳನ್ನು ಧಾರಾಳವಾಗಿ ತೊಡಿಸುತ್ತಾರೆ. ನಂತರ ಬಳೆಯನ್ನು ಧರಿಸುವುದು ಅಥವಾ ಬಿಡುವುದು ಆಕೆಯ ಆಯ್ಕೆ. ಮದುವೆಯಾದ ಒಂದು ವರ್ಷದೊಳಗಾಗಿಯೇ ನಾನು ಗಾಜಿನ ಬಳೆಗಳನ್ನು ತೊಡುವುದನ್ನು ಬಿಟ್ಟೆ. ಒಂದೆರಡು ಚಿನ್ನದ ಬಳೆಗಳನ್ನು ಧರಿಸುತ್ತಿದ್ದೆ. ವಕೀಲಳಾಗಿ ವೃತ್ತಿ ನಿರ್ವಹಿಸಲು ಆರಂಭಿಸಿದ ನಂತರ, ಟೇಬಲ್ ಮೇಲೆ ಕೈಯನ್ನು ಇಟ್ಟರೆ ಕರಕರ ಸದ್ದು ಬರುತ್ತದೆ ಎಂದು ನಂತರ ಅದನ್ನು ತೊಡುವುದನ್ನು ಬಿಟ್ಟೆ. ಆದರೆ 2023ರ ವರ್ಷದ ಡಿಸೆಂಬರ್ ನಲ್ಲಿ ಉಮ್ರಾಗೆಂದು ಹೋದಾಗ ಮುಸ್ತಾಕ್ ಅವಾಜ್ ಹಾಕಿದರು.” ಚಿನ್ನ ಗಿನ್ನ ತೊಟ್ಟು ಬಂದು ಆ ಹೋಟೆಲ್ ನಲ್ಲಿ ಬಿಟ್ಟೆ ಈ ಹೋಟೆಲ್ ನಲ್ಲಿ ಬಿಟ್ಟೆ ಎಂದು ಕಿರಿಕಿರಿ ಮಾಡಿದರೆ ಚೆನ್ನಾಗಿರಲ್ಲ”ಅಂತ. ಬಳೆಗಳನ್ನಂತೂ ನಾನು ನಿದ್ರೆ ಮಾಡುವಾಗ ಯಾವಾಗಲೋ ತೆಗೆದು ತಲೆದಿಂಬಿ ನಡಿ ಇಡುವುದು ನನ್ನ ಅಭ್ಯಾಸ. ಹೀಗಾಗಿ ನಾನು ಲಕ್ಷಣವಾಗಿ ಎರಡು ಕೈಗಳ ತುಂಬಾ ಗಾಜಿನ ಬಳೆಗಳನ್ನು ಧರಿಸಿ ಉಮ್ರಾಗೆ ಹೋದೆ. ಅಲ್ಲೇ ನಮಾಜ್ ಮುಗಿದ ನಂತರ ನನ್ನ ಅಕ್ಕ ಪಕ್ಕ ಕುಳಿತ ಬೇರೆ ದೇಶದ ಮಹಿಳೆಯರೊಂದಿಗೆ ಉಭಯ ಕುಶಲೊಪರಿ ಮಾಡುವುದು  ನನ್ನ ಸ್ವಭಾವ.

ಜಪಾನ್, ಜರ್ಮನಿ, ಚೈನಾ, ಇಂಡೋನೇಷ್ಯಾ ದೇಶದ ಮಹಿಳೆಯರು ನನ್ನೊಡದೆ ಮಾತನಾಡುತ್ತಿದ್ದರೂ ಕೂಡ ಅವರ ನೋಟವೆಲ್ಲ ನನ್ನ ಬಳೆಗಳ ಕಡೆಗೆ. ಕೊನೆಗೂ ಒಂದಿಬ್ಬರು ಕೇಳುತ್ತಿದ್ದರು ಅದೇನು ನೀನು ತೊಟ್ಟಿರೋದು ಅಂತ. ಅವರ ಆಸಕ್ತಿ ಕಂಡು ನಾನು ತೊಟ್ಟಿದ್ದ ಒಂದೆರಡು ಬಳೆಗಳನ್ನು ತೆಗೆದು ಅವರ ಕೈಗೆ ಇಡುತ್ತಿದ್ದೆ. ಅದನ್ನು ಒಂದು ಕೈಗೆ ಏರಿಸಿ ಆಸೆ ಕಂಗಳಿಂದ ಮತ್ತೆ ನೋಡಿದಾಗ ಇನ್ನೂ ಒಂದೆರಡು ಬಳೆಗಳು ಅವರ ಕೈಗೆ ವರ್ಗಾವಣೆ. ಅದನ್ನು ಗಲಗಲ ಮಾಡಿ ಸಂತೋಷಪಟ್ಟು ನಂತರ ವಿದಾಯ. ಹೀಗೆ ನಡೆದಿದ್ದರಿಂದ ಮೂರ್ನಾಲ್ಕು ದಿನಗಳಲ್ಲೇ ನನ್ನ ಎರಡು ಕೈಗಳು ಖಾಲಿ. ಮಹಿಳೆಯರ ಈ ಚಿಕ್ಕ ಪುಟ್ಟ ಸಂತೋಷಗಳು ದೇಶ ಕಾಲಾತೀತವಾಗಿ ಬೆಸೆದುಕೊಳ್ಳುವ ಪರಿಯೇ ಗಡಿಗಳಾಚೆಯ ಬಾಂಧವ್ಯವನ್ನು ಸೃಷ್ಟಿಸುತ್ತವೆ.

ಲೇಖಕಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ- ಬಾನು ಮುಷ್ತಾಕ್

Leave a Reply

Your email address will not be published. Required fields are marked *