ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ಅಪಾರ- ಉಪನ್ಯಾಸಕ ಗಿರೀಶ್ ಎನ್.ಬರಗೂರು

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಕವಿ‌ ಹಾಗೂ ದಾರ್ಶನಿಕರಾಗಿ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಿರೀಶ್ ಎನ್.ಬರಗೂರು ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ, ಕನಕದಾಸರ ಬದುಕು ಮತ್ತು ಸಾಹಿತ್ಯ ಕುರಿತು ಮಾತನಾಡಿದ ಅವರು, ಕನಕದಾಸರು  ಹರಿಭಕ್ತಸಾರ, ಮೋಹನತರಂಗಿಣಿ,  ನಳಚರಿತೆ,  ರಾಮಧಾನ್ಯ ಚರಿತೆ ಕಾವ್ಯಗಳ ಜೊತೆಗೆ ಸುಮಾರು 300ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸುವ ಮೂಲಕ  ಕನ್ನಡ ಸಾಹಿತ್ಯವನ್ನು ಸಮೃದ್ದಿಗೊಳಿಸಿದರು ಎಂದರು.

ಕನಕದಾಸರ ಕೀರ್ತನೆಗಳ ವೈಶಿಷ್ಟ್ಯವೆಂದರೆ ಸರಳ ಭಾಷೆಯಲ್ಲಿ ವಿಷಯವನ್ನು ಮನಮುಟ್ಟುವಂತೆ ತಿಳಿಸುತ್ತವೆ.  ಕನಕದಾಸರ ಕನ್ನಡ ಭಾಷೆಯ ಚಿಂತನೆ, ವೈಚಾರಿಕ ಮತ್ತು ಪ್ರಗತಿಪರ ಚಿಂತನೆ  ಇಂದಿಗೂ ಪ್ರಸ್ತುತ ಎನಿಸಿಕೊಂಡಿವೆ ಎಂದು‌ ಹೇಳಿದರು.

ಜ್ಞಾನ ಮತ್ತು ಭಕ್ತಿಯ ಸಂಗಮದೊಂದಿಗೆ ಸಾಮಾಜಿಕ ಸುಧಾರಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಚಿಂತನೆಗಳು   ಕನಕದಾಸರ ಕಾವ್ಯ ಮತ್ತು ಕೀರ್ತನೆಗಳ ಪ್ರಮುಖ ಆಶಯಗಳಾಗಿವೆ. ಸಮಾನತೆಯ ಸಮಾಜವನ್ನು ಪ್ರತಿಪಾದಿಸಿದವರು‌. ಕರ್ನಾಟಕ ಸಂಗೀತ ಮತ್ತು ಕೀರ್ತನೆಗಳಲ್ಲಿ ಸ್ಥಳೀಯ ಭಾಷೆಯ ಬಳಕೆ ಮಾಡಿದರು. ಕನಕದಾಸರು ವೈಚಾರಿಕ ಸಂತರು. ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು ಕೀಳು, ಜಾತಿ-ಮತಗಳ ಬಗ್ಗೆ   ಕನಕದಾಸರ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ತಮ್ಮ ಸಾಹಿತ್ಯದ ಮೂಲಕ ಮೂಡಿಸಿದವರು ಕನಕದಾಸರು ಎಂದರು.

ಕಾರ್ಯಕ್ರಮದಲ್ಲಿ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್.ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ, ಪ್ರತಿನಿಧಿ ಷಫೀರ್, ಪ್ರೇರಣಾ ಟ್ರಸ್ಟ್‌ ಅಧ್ಯಕ್ಚೆ ನೇತ್ರಾವತಿ,   ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಾಳಯ್ಯ, ಮಾಜಿ ಅಧ್ಯಕ್ಷ ಬೈಲಾಂಜಿನಪ್ಪ, ಗ್ರಾಮದ ಮುಖಂಡರುಗಳಾದ ಕೃಷ್ಣಮೂರ್ತಿ, ಬೋರಲಿಂಗೇಗೌಡ, ಶಾಲೆಯ ಶಿಕ್ಷಕರುಗಳಾದ ಭಾಸ್ಕರ್, ಯೋಗನರಸಿಂಹಮೂರ್ತಿ, ಯಲ್ಲಪ್ಪ ಬಡಗಣನವರ್, ಮೇಘನಾ, ವರಲಕ್ಷ್ಮಿ, ರಜನಿ, ರೂಪ, ಅಚರ್ನಾ, ನಗ್ಮಾ, ವಿಶಾಲಾಕ್ಷಿ, ವಿದ್ಯಾಶ್ರೀ, ರಮ್ಯ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *