ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ತಾಕ್ ಅವರು ಆಯ್ಕೆಯಾಗಿದ್ದಾರೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೀಗ ಅವರು ಆ ಆಹ್ವಾನ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ.
ಈ ನಡುವೆ ಅವರು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಏಕೆಂದರೆ ಎರಡು ವರ್ಷದ ಹಿಂದೆ ಕಲ್ಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಕೆಲವು ಧೋರಣೆಗಳನ್ನು ವಿರೋಧಿಸಿ ಪ್ರಗತಿಪರ ಚಿಂತಕರು ಪ್ರತ್ಯೇಕ ಜನ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದರು. ಅದಕ್ಕೆ ಭಾನು ಮುಷ್ತಾಕ್ ಅವರೇ ಅಧ್ಯಕ್ಷರಾಗಿದ್ದರು. ಈಗ ಅದೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ ಬಾನು ಮುಷ್ತಾಕ್ ಅವರನ್ನು ಬಳ್ಳಾರಿಯ 88ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿದ್ದಾರೆ.
ಈ ವಿಷಯದಲ್ಲಿ ಈ ಬಗ್ಗೆ ಯೋಚಿಸುವ ಎಲ್ಲರಿಗೂ ಅವರವರದೇ ಆದ ಅಭಿಪ್ರಾಯವಿರುತ್ತದೆ. ಆ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ನನ್ನ ಒಂದಷ್ಟು ಅಭಿಪ್ರಾಯ.
ಕನ್ನಡ ಸಾಹಿತ್ಯ ಪರಿಷತ್ತು ಯಾರದೋ ಒಬ್ಬ ವ್ಯಕ್ತಿಯ ಸಂಸ್ಥೆಯಲ್ಲ ಅಥವಾ ಆ ವ್ಯಕ್ತಿಯ ಅಭಿಪ್ರಾಯ ಮಾತ್ರವೇ ಮುಖ್ಯವಾಗುವುದಿಲ್ಲ ಅಥವಾ ಅವರ ಸೈದ್ಧಾಂತಿಕ ನಿಲುವೇ ಪ್ರಾಮುಖ್ಯತೆ ಪಡೆಯುವುದಿಲ್ಲ. ಅದೊಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಹಾಗೆಯೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯು ಸಹ ಆ ಸಂಸ್ಥೆಯ ಸರ್ವಾನುಮತದ ನಿರ್ಣಯ ಇದನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯ.
ಆದರೆ ಈಗ ಉದ್ಭವವಾಗಿರುವ ದ್ವಂದ್ವವೆಂದರೆ ಈಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿಯವರ ಮೇಲಿನ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಸರ್ವಾಧಿಕಾರಿ ಧೋರಣೆ ಎಂಬ ಆರೋಪಗಳು ಮತ್ತೊಂದು ಗುಂಪಿನ ವಿರೋಧಕ್ಕೆ ಕಾರಣವಾಗಿರುವುದರಿಂದ ಶ್ರೀಮತಿ ಭಾನು ಮುಷ್ತಾಕ್ ಅವರು ಆ ಗುಂಪಿನಲ್ಲಿ ಗುರುತಿಸಿಕೊಂಡಿರುವುದರಿಂದ ಅವರಿಗೆ ಅಧ್ಯಕ್ಷತೆ ಒಪ್ಪಿಕೊಳ್ಳಬೇಕೋ ಬೇಡವೋ ಎಂಬುವ ಗೊಂದಲ ಶುರುವಾಗಿದೆ. ಆ ಒತ್ತಡ ಅವರ ಮೇಲಿದೆ.
ಅವರು ಸರ್ವಾಧ್ಯಕ್ಷ ಸ್ಥಾನ ಒಪ್ಪಿಕೊಂಡರೆ ಒಂದು ಗುಂಪು ಅವರನ್ನು ಟೀಕಿಸುತ್ತದೆ, ಅವರು ಒಪ್ಪಿಕೊಳ್ಳದಿದ್ದರೆ ಇನ್ನೊಂದು ಗುಂಪು ಅವರನ್ನು ಟೀಕಿಸುತ್ತದೆ. ಅದನ್ನು ಎದುರಿಸುವ ಅನಿವಾರ್ಯತೆ ಅವರಿಗಿದೆ. ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ವಿವೇಚನೆ ಭಾನು ಮುಷ್ತಾಕ್ ಅವರಿಗೂ ಇದೆ. ಅವರ ಯಾವುದೇ ಅಭಿಪ್ರಾಯ ಗೌರವಿಸುತ್ತಾ,….
ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದತೆ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರಿಗೂ ಇದೆ ಮತ್ತು ಮುಖ್ಯವಾಗಿ ಸಾಹಿತಿಗಳಿಗೆ ಇರಬೇಕು. ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕತೆಯ ಅಥವಾ ಇತರ ವಿಷಯಗಳಲ್ಲಿ ಹಠ ಮಾಡಿ ತುಂಬಾ ದೂರಕ್ಕೆ ಎಳೆದುಕೊಂಡು ಹೋಗುವುದು ಭಾಷೆ, ಸಮಾಜ ಮತ್ತು ರಾಜ್ಯದ ಹಿತ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ದ್ವೇಷ, ಸೇಡಿಗೆ ಕೊನೆಯೇ ಇಲ್ಲ, ಆದರೆ ಸಂಧಾನಕ್ಕೆ, ಸೌಹಾರ್ದತೆಗೆ ಖಂಡಿತ ಕೊನೆಯಿದೆ. ಡಾಕ್ಟರ್ ಮಹೇಶ್ ಜೋಶಿ ಅವರ ಬಗ್ಗೆ ಯಾವುದೇ ವಿರೋಧ ಅಥವಾ ಭಿನ್ನಾಭಿಪ್ರಾಯವಿದ್ದರೆ ಅದನ್ನು ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಹಾಗೆಯೇ ಸಮ್ಮೇಳನದ ಸರ್ವಾಧ್ಯಕ್ಷರಾದಾಗಲೂ ಅವರ ಕಾರ್ಯ ವಿಧಾನದ ಬಗ್ಗೆ, ಇತರ ಧೋರಣೆಗಳ ಬಗ್ಗೆ ಖಂಡಿತವಾಗಲೂ ಪ್ರಸ್ತಾಪಿಸಿ, ಪ್ರತಿಭಟಿಸಿ ಟೀಕಿಸಬಹುದು. ಆದರೆ ಸರ್ವಾಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದರೆ ಅದರಿಂದ ಸಾಹಿತ್ಯ ಪರಿಷತ್ತು ಬಗೆಗಿನ ಮತ್ತಷ್ಟು ಅಸಹನೆಯ ಅಂತರ ಜಾಸ್ತಿಯಾಗುತ್ತಾ ಹೋಗುತ್ತದೆ. ಎಲ್ಲರೂ ಅವರವರದೇ ಹಠಕ್ಕೆ ಬಿದ್ದರೆ ಒಂದು ಸೌಹಾರ್ದತೆಯ ಸೇತುವೆ ನಿರ್ಮಿಸಲು ಇರುವ ಅವಕಾಶವನ್ನು ಕೈ ಚೆಲ್ಲಿದಂತಹಾಗುತ್ತದೆ ಮತ್ತು ಬೆಸುಗೆಯ ಕೊಂಡಿ ಸಡಿಲವಾಗುತ್ತದೆ.
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿರುವ ಅಥವಾ ನಿರಾಕರಿಸಿರುವ ಉದಾಹರಣೆ ತುಂಬಾ ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿಗಳಾದ ಶ್ರೀ ದೇವನೂರು ಮಹಾದೇವ ಅವರು ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಪ್ರಾಮುಖ್ಯತೆ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸರ್ಕಾರ ಯಾವುದೇ ಸರಿಯಾದ ಕಾರ್ಯಯೋಜನೆ ರೂಪಿಸಿಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಅದರ ಅನುಷ್ಠಾನದಲ್ಲಿ ವಿಫಲವಾಗಿರುವುದರಿಂದ ಈ ಅಧ್ಯಕ್ಷ ಸ್ಥಾನ ಸ್ವೀಕರಿಸುವುದು ನನಗೆ ವೈಯಕ್ತಿಕವಾಗಿ ಮನಸ್ಸಿಗೆ ಇಷ್ಟವಿಲ್ಲ ಎಂಬ ಕಾರಣ ನೀಡಿ ಅದನ್ನು ನಿರಾಕರಿಸಿದರು. ಆನಂತರ ಮತ್ತೊಬ್ಬ ಕವಿ ಶ್ರೀ ಸಿದ್ದಲಿಂಗಯ್ಯನವರು ಅಧ್ಯಕ್ಷತೆ ವಹಿಸಿದ್ದರು.
ಆದರೆ ಇಲ್ಲಿ ಭಾನುಮಷ್ಟಾಕ್ ಅವರಿಗೆ ಬಹುಶಃ ಇರುವುದು ಪರಿಷತ್ ಅಧ್ಯಕ್ಷ ಶ್ರೀ ಮಹೇಶ್ ಜೋಶಿಯವರ ಸೈದ್ಧಾಂತಿಕ ನಿಲುವುಗಳು ಮತ್ತು ಸರ್ವಾಧಿಕಾರಿ ಧೋರಣೆ ಎಂಬ ವಿಷಯ. ಅದು ಬಹುತೇಕ ವ್ಯಕ್ತಿಗತವಾಗಿರುವುದರಿಂದ, ಸಾಹಿತ್ಯ ಪರಿಷತ್ತಿಗೆ ಆ ರೀತಿಯ ಯಾವುದೇ ಸೈದ್ಧಾಂತಿಕ ನಿಲುವುಗಳು ಇಲ್ಲದೆ ಇರುವುದರಿಂದ, ಸಾಹಿತ್ಯ ಪರಿಷತ್ತಿನ ಮೂಲ ಆಶಯ ಕನ್ನಡ ಭಾಷೆ, ನೆಲ, ಜಲ, ಆಡಳಿತ, ಪ್ರದೇಶ, ಕನ್ನಡಿಗರ ರಕ್ಷಣೆ, ಅಭಿವೃದ್ಧಿಯೇ ಅದರ ಮೂಲ ಆಶಯವಾಗಿರುವುದರಿಂದ ಅದಕ್ಕೆ ಅಧ್ಯಕ್ಷರು ಯಾರಾದರೂ ಅವರ ನಿಲುವುಗಳು ಬೇರೆಯಾದರೂ ಸಾಹಿತ್ಯ ಪರಿಷತ್ ಆಶಯಕ್ಕೆ ತಕ್ಕಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಬಹುದು.
ಆದ್ದರಿಂದ ಬಳ್ಳಾರಿಯ 88ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವುದು ಉತ್ತಮ ಎಂಬುದು ನನ್ನ ವೈಯಕ್ತಿಕ ಭಾವನೆ. ಭಾನು ಮುಷ್ತಾಕ್ ಅವರ ವಿವೇಚನೆ ಮತ್ತು ಸ್ವಾತಂತ್ರ್ಯ ಅವರಿಗೆ ಬಿಟ್ಟದ್ದು. ಅದನ್ನು ಗೌರವಿಸುತ್ತಾ, ಒಂದು ವೇಳೆ ನಿರಾಕರಿಸಿದರೆ ವೈಯಕ್ತಿಕವಾಗಿ ಮತ್ತು ಸಾಹಿತ್ಯ ಪರಿಷತ್ತಿನ ಒಟ್ಟು ಹಿತಾಸಕ್ತಿಯಿಂದ ಅವರ ನಡೆ ಅಷ್ಟೇನೂ ಉತ್ತಮವಲ್ಲ ಎಂದೆನಿಸಬಹುದು.
ಏಕೆಂದರೆ ನಮ್ಮ ವೈಯಕ್ತಿಕ ಅಥವಾ ಸಾಮಾಜಿಕ, ಸೈದ್ಧಾಂತಿಕ ಬದ್ಧತೆಗಿಂತ ರಾಜ್ಯದ ಹಿತಾಸಕ್ತಿ ಯಾವಾಗಲೂ ಮುಖ್ಯವಾಗಬೇಕು. ನಿಜವಾದ ಸೈದ್ಧಾಂತಿಕತೆ ಎಂದರೆ ಅದು ಎಡಪಂಥ, ಬಲಪಂಥ, ಮಧ್ಯಪಂಥ ಎಂಬುದೇನು ಅಲ್ಲ, ನಿಜವಾದ ಸೈದ್ಧಾಂತಿಕತೆ ಎಂದರೆ ಮಾನವೀಯತೆ, ಸಮಾನತೆ, ನಾಗರಿಕತೆ, ಸೌಹಾರ್ದತೆ, ಭಾವೈಕ್ಯತೆ, ಸಹಜತೆ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಇವೇ ನಿಜವಾದ ಸೈದ್ದಾಂತಿಕ ನಿಲುವುಗಳು. ಎಡಬಲ ಮುಂತಾದವು ಕೇವಲ ಅತಿರೇಕದ ಹಠಮಾರಿ ಧೋರಣೆಗಳು ಮಾತ್ರ. ಪ್ರೀತಿ, ವಿಶ್ವಾಸ, ಹೊಂದಾಣಿಕೆ, ಕ್ಷಮೆ, ಕರುಣೆ ಇಲ್ಲದಿದ್ದ ಯಾವುದೇ ಸೈದ್ದಾಂತಿಕತೆಗೆ ಹೆಚ್ಚಿನ ಮಾನ್ಯತೆ ಇರಬಾರದು.
ಸನ್ಮಾನ್ಯ ಶ್ರೀ ಮಹೇಶ್ ಜೋಶಿ ಅವರು ಸಹ ಸಾಹಿತ್ಯ ಪರಿಷತ್ತಿನ ಸದಸ್ಯರ ಮತಗಳ ಆಧಾರದ ಮೇಲೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈಗ ಅದನ್ನು ಗೌರವಿಸಬೇಕಾಗುತ್ತದೆ. ಹಾಗೆಯೇ ಅವರ ಧೋರಣೆಗಳ ವಿರುದ್ಧ ಭಿನ್ನಾಭಿಪ್ರಾಯವಿದ್ದರೆ ಅದೇ ರೀತಿಯಲ್ಲಿ ಪ್ರಜಾಪ್ರಭುತ್ವೀಯ ವಿಧಾನದಲ್ಲಿ ಎದುರಿಸಬೇಕಾಗುತ್ತದೆ ಮತ್ತು ವಿರೋಧಿಸಬೇಕಾಗುತ್ತದೆ. ಆದರೆ ಆಹ್ವಾನದ ನಿರಾಕರಣೆ ಅತಿರೇಕವಾಗಬಹುದು.
ಒಬ್ಬ ವ್ಯಕ್ತಿಗಾಗಿ ಒಂದು ಸಂಸ್ಥೆಯನ್ನು, ಅದರ ನಿರ್ಣಯಗಳನ್ನು ತಿರಸ್ಕರಿಸುವುದು ಅಷ್ಟು ಒಳ್ಳೆಯ ನಡೆಯಲ್ಲ.
ಹಾಗೆಯೇ ಶ್ರೀ ಮಹೇಶ್ ಜೋಶಿ ಅವರು ಕೂಡ ಇನ್ನೊಂದಿಷ್ಟು ಸೌಹಾರ್ದಯುತ ವಾತಾವರಣವನ್ನು ಕನ್ನಡ ಸಾಹಿತ್ಯ ಪರಿಷತ್ತು ನಲ್ಲಿ ಮೂಡಿಸಲು ಪ್ರಯತ್ನಿಸಬೇಕು. ತಮ್ಮ ಧೋರಣೆಯ ಬಗ್ಗೆ ಇರುವ ಕೆಲವು ಭಿನ್ನ ಅಭಿಪ್ರಾಯಗಳನ್ನು ಸ್ವೀಕರಿಸಿ ಆತ್ಮವಲೋಕನ ಮಾಡಿಕೊಂಡು ಇಲ್ಲಿಯವರೆಗಿನ ತಪ್ಪುಗಳನ್ನು ತಿದ್ದಿಕೊಂಡು, ಸಾಧ್ಯವಾದರೆ ಆ ತಪ್ಪುಗಳಿಗೆ ಕ್ಷಮೆ ಕೋರಿ ಮತ್ತಷ್ಟು ಕನ್ನಡ, ಕರ್ನಾಟಕದ ಅಭಿವೃದ್ಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವನ್ನು ಎತ್ತಿ ಹಿಡಿಯಬೇಕು. ವಿವಾದಗಳಿಂದ ಮುಕ್ತವಾಗಿಸಬೇಕು.
ನಮ್ಮ ತಿಳಿವಳಿಕೆಗಳು ನಡವಳಿಕೆಗಳಾಗದೆ ಮುಂದಿನ ಜನಾಂಗಕ್ಕೆ ನಾವು ಮಾದರಿಯಾಗಲಾರೆವು.
ಧನ್ಯವಾದಗಳು
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ