ಕನ್ನಡ ಮಾತನಾಡದ ಬ್ಯಾಂಕ್ ಮ್ಯಾನೇಜರ್: ಸಿಡಿದೆದ್ದ ಕರವೇ(ಕನ್ನಡಿಗರ ಬಣ): ಬ್ಯಾಂಕ್ ಬಾಗಿಲಲ್ಲೇ ಕುಳಿತು‌ ಕನ್ನಡ ಮಾತನಾಡದ ಮ್ಯಾನೇಜರ್ ವಿರುದ್ಧ‌ ಕರವೇ ಪ್ರತಿಭಟನೆ: ಕನ್ನಡ ಕಲಿತು ಮಾತನಾಡುತ್ತೇನೆ ಎಂದ ಬ್ಯಾಂಕ್ ಮ್ಯಾನೇಜರ್

ನಗರದ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ಮ್ಯಾನೇಜರ್ ಕನ್ನಡದಲ್ಲಿ ವ್ಯವಹಾರಿಸದೆ, ದರ್ಪ ಮೆರೆದು ಬ್ಯಾಂಕಿನ ಗ್ರಾಹಕ ನೀಡಿದ ಚೆಕ್ ನ್ನು ಬಿಸಾಡಿ ಕನಿಷ್ಠ ಗೌರವದಿಂದ ನಡೆದುಕೊಳ್ಳದೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರವೇ ( ಕನ್ನಡಿಗರ ಬಣ) ಅಧ್ಯಕ್ಷ ಚಂದ್ರಶೇಖರ್ ಬ್ಯಾಂಕ್ ಮುಂಭಾಗದ ಬಾಗಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಚಂದ್ರಶೇಖರ್, ಖುದ್ದು ನಾನೇ ಎರಡು ಲಕ್ಷ ರೂಪಾಯಿಯ ಚೆಕ್ ಡ್ರಾ ಮಾಡಿಕೊಳ್ಳಲು ಬ್ಯಾಂಕಿಗೆ ಬಂದೆ. ಬ್ಯಾಂಕಿನ ಮ್ಯಾನೇಜರ್ ಅವರು ಈ ಬ್ರಾಂಚ್ ನಲ್ಲಿ ಹಣ ಇಲ್ಲ. ನೀವು ಮತ್ತೊಂದು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶಾಖೆಗೆ ಹೋಗಿ ಡ್ರಾ ಮಾಡಿಕೊಳ್ಳಿ ಎಂದು ಉಡಾಫೆಯಾಗಿ ಉತ್ತರಿಸಿದರು. ಬಳಿಕ ನಾನು ಕನ್ನಡದಲ್ಲಿ ಮಾತನಾಡಿ ಎಂದು ಆಗ್ರಹಿಸಿದಾಗ ಕೈನಲ್ಲಿದ್ದ ಚೆಕ್ ನ್ನು ಬಿಸಾಡಿದ್ದಾರೆ. ಕನ್ನಡಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ಕರವೇ ಪದಾಧಿಕಾರಿಗಳು ಬ್ಯಾಂಕ್ ನ ದುರಹಂಕಾರಿ ಸಿಬ್ಬಂದಿಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರದ ನಿಯಮಾನುಸಾರವೇ ಕನ್ನಡ ಭಾಷೆಯನ್ನು ಕಲಿತು ವ್ಯವಹಾರ ಮಾಡಬೇಕು. ಕನಿಷ್ಠ ಕನ್ನಡ ಕಲಿಯಲು ಆಸಕ್ತಿ ವಹಿಸಬೇಕು. ಕನ್ನಡ ಮಾತನಾಡಿ ಎಂದಿದ್ದಕ್ಕೆ ಇಷ್ಟೆಲ್ಲಾ ರಗಳೆ ಮಾಡಿರುವುದಕ್ಕೆ ಮ್ಯಾನೇಜರ್
ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.

ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬ್ಯಾಂಕ್ ಮ್ಯಾನೇಜರ್ ಪ್ರತಿಭಟನಾ ನಿರತರೊಂದಿಗೆ ಕ್ಷಮೆಯಾಚನೆ ಮಾಡಿ ಒಂದೆರಡು ತಿಂಗಳಲ್ಲಿ ಕನ್ನಡ ಭಾಷೆ ಕಲಿಯುತ್ತೇನೆ ಎಂದು ತಿಳಿಸಿದರು. ಇದರಿಂದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಈ ವೇಳೆ ಮುಖಂಡರಾದ ಚಂದ್ರಶೇಖರ್, ಅರವಿಂದ್, ಚೇತನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *