ಕನ್ನಡ ಭಾಷೆ ಮತ್ತು ಸಾಹಿತ್ಯದ ಅನನ್ಯತೆಯನ್ನು  ಉಳಿಸುವ, ಬೆಳೆಸುವ ಮಹಾದಾಸೆಯಿಂದ ಕಸಾಪ ಸ್ಥಾಪನೆ- ಪ್ರೊ.ಕೆ.ಆರ್.ರವಿಕಿರಣ್

ಕನ್ನಡ ಭಾಷೆ ಮತ್ತು ಸಾಹಿತ್ಯದ ಅನನ್ಯತೆಯನ್ನು  ಉಳಿಸುವ, ಬೆಳೆಸುವ ಮಹಾದಾಸೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ  ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಭಾಷಿಕರು ಆಡಳಿತಾತ್ಮಕವಾಗಿ ಬೇರೆ ಭಾಷೆ ಆಡಳಿತ ಅಧೀನದಲ್ಲಿದ್ದರೂ ಅವರನ್ನು ಭಾಷೆ ಮತ್ತು ಸಾಹಿತ್ಯ  ಬಾಂಧವ್ಯದಿಂದ ಒಗ್ಗೂಡಿಸಿ ಕನ್ನಡ ಕಟ್ಟುವ ಕೆಲಸಕ್ಕೆ ಸಹಕಾರಿಯಾಯಿತು. ಇಂತಹ ಕನ್ನಡ ಕಟ್ಟುವ ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ 1915ರಂದು ಕನಾಟಕ ಸಾಹಿತ್ಯ ಪರಿಷತ್ತು  ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಮಹತ್ವದ ಕವಿಗಳ  ಕೃತಿಗಳ ಹಕ್ಕು ಸ್ವಾಮ್ಯ ಹೊಂದಿದೆ. ಕನ್ನಡ ನಿಘಂಟು ರಚನೆ ಮತ್ತು ಪರಿಷ್ಕರಣೆಯಲ್ಲಿ ಮಹತ್ವದ ಸಾಧನೆ ಮಾಡಿದೆ.  ಉತ್ತಮ ಗ್ರಂಥಾಲಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ ಬೆಳವಣಿಗೆಗೆ, ಅಧ್ಯಯನ ಮತ್ತು‌ ಸಂಶೋಧನೆಗೆ ಸಹಕಾರಿಯಾಗಿದೆ. ಪುಸ್ತಕ ಪ್ರಕಟಣೆ, ವಿಚಾರಸಂಕಿರಣಗಳು, ಸಾಹಿತ್ಯ ಸಮ್ಮೇಳನ, ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಸಾಧಕರಿಗೆ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ  ಮನಗೆದ್ದಿದೆ. ದತ್ತಿಗಳ ದಾನಿಗಳು, ಆಜೀವ ಸದಸ್ಯರುಗಳನ್ನು ರಾಜ್ಯದ ಎಲ್ಲೆಡೆ ಹೊಂದಿರುವ ಮೂಲಕ  ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ  ಕನಸನ್ನು ನನಸು ಮಾಡುವ ಕೆಲಸವನ್ನು ಪರಿಷತ್ತು ಮುಂದೂವರಿಸಿಕೊಂಡು ಹೋಗಬೇಕಾಗಿದೆ. ಕನ್ನಡದ ವಿಚಾರಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಕನ್ನಡಿಗರ ಪ್ರತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಎಲ್ಲರಿಗೂ ತಲುಪಬೇಕಾಗಿದೆ.  ಶತಮಾನ ಪೂರೈಸಿ ಮುನ್ನಡೆಯುತ್ತಿರುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸೀಮಿತಗೊಳ್ಳದೆ, ಕನ್ನಡಿಗರ ಬದುಕು ಬವಣೆಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಕನ್ನಡಿಗರ ಮನೆ ಮನೆಗಳಲ್ಲಿ ಕನ್ನಡ ಪ್ರಜ್ಞೆ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಾಗಿದೆ ಎಂದರು.

ಕವಯಿತ್ರಿ ಆಶಾಗುಡ್ಡದಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ‌ಪರಿಷತ್ತು ನಮ್ಮ ನಾಡು, ನುಡಿ, ನೆಲ ಮತ್ತು ಜಲ ವಿಚಾರಗಳನ್ನು ಒಳಗೊಂಡಂತೆ ಕನ್ನಡಪರ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಕನ್ನಡ ನಾಡು ಮತ್ತು ನುಡಿಗೆ  ಸಾಹಿತಿಗಳಷ್ಟೆ ಕೊಡುಗೆಯನ್ನು ಕನ್ನಡಪರ ಹೋರಾಟಗಾರರು ನೀಡಿದ್ದಾರೆ ಎಂಬುದನ್ನು ಮರೆಯಬಾರದು. ಕನ್ನಡ ಸಾಹಿತ್ಯ ಪರಿಷತ್ತು ಸದಾ ಜನಸಾಮಾನ್ಯರ ಪರಿಷತ್ತು ಆಗಿ ಕಾರ್ಯ‌ ನಿರ್ವಹಿಸಬೇಕೆಂದರು.‌

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು,  ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಷಫೀರ್,  ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ  ವಿ.ಎಸ್.ಹೆಗಡೆ, ನಾಗದಳ ಸಂಘಟನೆಯ ನಟರಾಜ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್,  ಬಾಶೆಟ್ಟಿಹಳ್ಳಿ ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ನೇತ್ರಾವತಿ, ಪ್ರತಿನಿಧಿ ಮುನಿರತ್ನಮ್ಮ , ಡಾ.ರಾಜ್ ಕುಮಾರ್ ಅಭಿಮಾನಿ‌‌ ಸಂಘದ ಪರಮೇಶ್ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *