ನ್ಯಾಯಾಲಯಗಳಲ್ಲಿ ಮಾತೃಭಾಷೆಯಾದ ಕನ್ನಡ ಭಾಷೆಯಲ್ಲಿ ವಾದ ಮಂಡನೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ ನಗರದ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡಬಳ್ಳಾಪುರ ಒಂದು ಐತಿಹಾಸಿಕ ಹಿನ್ನೆಲೆ ಇರುವ ಸ್ಥಳವಾಗಿದ್ದು ವಕೀಲರ ಸಂಘದ ಈ ಕಾರ್ಯಕ್ರಮವು ಇತಿಹಾಸದ ಪುಟಗಳಲ್ಲಿ ಸೇರುತ್ತದೆ. ಕನ್ನಡಿಗರಾಗಿ ನಾವು ಕರ್ನಾಟಕದಲ್ಲಿ ಜನ್ಮ ಪಡೆದಿರುವುದು ನಮ್ಮ ಪುಣ್ಯ. ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಕೆ ಇದ್ದು, ಕನ್ನಡ ಭಾಷೆಯಲ್ಲಿ ತೀರ್ಪು ಬರೆಯುವ ಹಲವು ಜಡ್ಜ್ ಗಳಿಗೆ ಸನ್ಮಾನಿಸಿ ಗೌರವಿಸುವ ಅಭ್ಯಾಸ ತುಂಬಾ ಸಂತಸದ ವಿಷಯವಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗಿಂತ ದೊಡ್ಡಬಳ್ಳಾಪುರ ನ್ಯಾಯಾಲಯ ಸುಸಜ್ಜಿತವಾಗಿದೆ. ವಕೀಲರ ಸಂಘಕ್ಕೆ ಹೊಸ ಕಟ್ಟಡದ ಅಗತ್ಯವಿದ್ದು, ಶೀಘ್ರವೇ ಹೊಸ ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ನಂತರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಮಾತನಾಡಿ, ಈ ಕಾರ್ಯಕ್ರಮ ತುಂಬಾ ವಿಶೇಷವಾದದ್ದು, ಕಾರಣ, ವಕೀಲರ ದಿನಾಚರಣೆ ಜೊತೆಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಎಲ್ಲರ ಸಹಕಾರದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಕನ್ನಡ ಭಾಷೆ ಜೇನಿನಂತೆ ಸವಿದಷ್ಟು ಸಿಹಿ. ಹೊರ ರಾಜ್ಯಗಳಿಂದ ಬಂದು ಜೀವನ ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನಮ್ಮ ನಾಡಿನ ಸವಲತ್ತು ಬೇಕಿದೆ ಭಾಷೆ ಬೇಡವಾಗಿದೆ ಈ ನಡವಳಿಕೆ ಬದಲಾಗಬೇಕಿದೆ ಎಂದರು.
ಕೇವಲ ವಾಣಿಜ್ಯ ವಿಚಾರಕ್ಕಾಗಿ ಕನ್ನಡ ಭಾಷೆಯನ್ನು ತಾತ್ಸಾರ ಮಾಡುವ ನಮ್ಮ ನಾಡಿನ ವ್ಯಾಪಾರಸ್ಥರಿಗೆ ನಾಚಿಕೆಯಾಗಬೇಕು. ನಮ್ಮ ಮಾತೃಭಾಷೆಯನ್ನು ಬಿಟ್ಟು ಪರ ಭಾಷೆ ಬಳಸಲು ಮುಂದಾಗಿರುವ ವರ್ತನೆ ಕೂಡಲೇ ನಿಲ್ಲಬೇಕಿದೆ. ಮೊದಲು ಎಲ್ಲಾ ಕನ್ನಡಿಗರಲ್ಲಿ ನನ್ನ ನಾಡು ನನ್ನ ಭಾಷೆ ಎಂಬ ಭಾವನೆ ಮೂಡಬೇಕಿದೆ. ನಮ್ಮ ಅಸ್ತಿತ್ವ ನಮ್ಮ ಭಾಷೆ ನಮ್ಮ ಅಳಿವು ಉಳಿವು ನಮ್ಮ ನಾಡು ನುಡಿಯ ಅಭಿವೃದ್ಧಿಯಲ್ಲಿದೆ ಎಂಬುದು ನಮ್ಮ ಅರಿವಿಗೆ ಬರಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲ ಪ್ರಭಾಕರ್ ರಾಜು ಸಂಪಾದಿಸಿರುವ ಕವನ ಸಂಕಲನ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ಪಿ.ರಂಗನಾಥ್, ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ , ಪತ್ರಕರ್ತರಾದ ರವಿಕಿರಣ್, ನಟರು ವಾಗ್ಮಿಗಳು ಆದ ಮಹಾದೇವ್ , ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.