
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಪರೀಕ್ಷೆಯಲ್ಲಿ 532 ಮಂದಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗಾಗಿ ಕನ್ನಡ ಪುಸ್ತಕ ಓದಿ – ಬಹುಮಾನ ಓದಿ ಸ್ಪರ್ಧಾತ್ಮಕ ಪರೀಕ್ಷೆ ಹಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಈ ಬಾರಿಯ ಪರೀಕ್ಷೆಗೆ ಬೆಂಗಳೂರಿನ ನವಕರ್ನಾಟಕ ಪುಸ್ತಕ ಪ್ರಕಾಶನದ ವಿಶ್ವಮಾನ್ಯರು ಮಾಲಿಕೆಯಲ್ಲಿ ಪ್ರಕಟಿಸಿರುವ ಮತ್ತು ಟಿ.ಎಸ್.ಗೋಪಾಲ್ ಅವರು ಬರೆದಿರುವ ಕುವೆಂಪು ಪುಸ್ತಕವನ್ನು ಓದಿ ಮತ್ತು ಕುವೆಂಪು ಪುಸ್ತಕವನ್ನು ಆಧರಿಸಿ ಸಿದ್ಧಪಡಿಸಲಾದ ಪ್ರಶ್ನೆಪತ್ರಿಕೆಗೆ ಪರೀಕ್ಷೆ ಬರೆದರು.
ದೊಡ್ಡಬಳ್ಳಾಪುರ ನಗರದ ಎಂ.ಎ.ಬಿ.ಎಲ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಎರಡು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪುಸ್ತಕ ಓದಿ – ಬಹುಮಾನ ಗೆಲ್ಲಿ ಪರೀಕ್ಷೆ ಕಾರ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಕೊಠಡಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ಸಾಹದಿಂದ ಪರೀಕ್ಷೆಯ ಬರೆದರು.
ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಸಂಘಟಕರು ಮಾತನಾಡಿ, ಕನ್ನಡಿಗರಲ್ಲಿ ಕನ್ನಡ ಪುಸ್ತಕ ಪ್ರೀತಿಯನ್ನು ಬೆಳೆಸಲು ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಎಂಬ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದೇವೆ. ಈ ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಅಂಕಗಳನ್ನು ಪಡೆದವರಿಗೆ ಪ್ರಶಸ್ತಿ ಮತ್ತು ಬಹುಮಾನವನ್ನು ಗಣ್ಯರಿಂದ ಪ್ರದಾನ ಮಾಡುತ್ತೇವೆ ಎಂದರು.
ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಕಾರ್ಯಕ್ರಮ ಪುಸ್ತಕ ಓದುವ ಅಭ್ಯಾಸವನ್ನು ಪ್ರೋತ್ಸಾಹಿಸಲು ಆಯೋಜಿಸಲಾದ ಒಂದು ಸ್ಪರ್ಧೆಯಾಗಿದೆ. ಕನ್ನಡ ಪುಸ್ತಕ ಗಳನ್ನು ಕೊಳ್ಳುವುದು ಮತ್ತು ಓದುವುದು ನಿಜವಾದ ಕನ್ನಡಾಭಿಮಾನವಾಗಿದೆ. ಜಗತ್ತಿನ ಜ್ಞಾನ ಅರಿಯಲು ಪುಸ್ತಕ ಗಳು ಸಹಕಾರಿ ಮತ್ತು ಪರಿಣಾಮಕಾರಿ ಆಗಿದೆ. ನಿರಂತರ ಓದಿನಿಂದ ಓದುಗರಿಗೆ ಜ್ಞಾನ ವಿಸ್ತರಿಸುತ್ತದೆ. ಕನ್ನಡ ಪುಸ್ತಕ ಓದಿನ ಮೂಲಕ ಪಡೆಯುವ ಜ್ಞಾನ ಕನ್ನಡ ಕಟ್ಡುವ ಕೆಲಸಕ್ಕೂ ಸಹಕಾರಿ ಆಗಲಿದೆ. ಕನ್ನಡ ಅಭಿಮಾನ ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಪುಸ್ತಕಗಳನ್ನು ಎಷ್ಟು ಜನ ಕೊಳ್ಳುತ್ತಾರೆ ಮತ್ತು ಓದುತ್ತಾರೆ ಎಂಬುದು ಕನ್ನಡ ಭಾಷೆಯ ಸ್ಥಿತಿ-ಗತಿಯನ್ನು ಅರಿಯಲು ಸಹ ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮ ಸಹಕಾರಿ ಆಗುತ್ತದೆ ಎಂದರು.
ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಪರೀಕ್ಷಾ ಕೇಂದ್ರದ ಉಸ್ತುವಾರಿಗಳಾಗಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ಕನ್ನಡ ಜಾಗೃತ ಸಮಿತಿ ಮುಂತಾದ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಎಂ.ಬಿ.ಗುರುದೇವ್, ಬಿ.ಪಿ.ಪ್ರಿಯಾಂಕ, ಡಾ.ಎ.ಓ.ಆವಲಮೂರ್ತಿ, ಡಿ.ಪಿ.ಆಂಜನೇಯ, ವೆಂಕಟರಾಜು, ಕೆ.ಮಹಾಲಿಂಗಯ್ಯ, ನಾಗರತ್ನಮ್ಮ, ಪಿ.ಗೋವಿಂದರಾಜು, ಪ್ರಮೀಳಾ ಮಹಾದೇವ್, ಡಿ.ಶ್ರೀಕಾಂತ್, ಜಿ.ಸುರೇಶ್, ಜಮುನಾ, ಎ.ಅಣ್ಣಯ್ಯ, ಕೋದಂಡರಾಮ್, ರವಿ, ಸೂರ್ಯನಾರಾಯಣ್, ಪರಮೇಶ್, ಜಿ.ಸಿ.ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.