ರಾಜ್ಯದ ಖಾಸಗಿ ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಸಂಬಂಧ ವಿಧೇಯಕ ತಡೆ ಹಿಡಿದಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಖಂಡಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಮಿರ್ಚಿಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕನ್ನಡಿಗರ ಪರ ನ್ಯಾಯ ಸಮ್ಮತವಾದ ನಿರ್ಧಾರ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂಬಂಧ 15 ದಿನಗಳ ಒಳಗೆ ಸಚಿವ ಸಂಪುಟದ ಸಭೆ ನಡೆಸಿ, ಕನ್ನಡಿಗರ ಹಿತಕಾಯುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಕನ್ನಡಿಗರ ಪರವಾಗಿ ಗಡುವು ನೀಡಿದ್ದಾರೆ.
ಉತ್ತಮ ನಿರ್ಧಾರ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಕೆಲ ಕಾರ್ಪೋರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ಸರಕಾರವು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ. ಇದನ್ನು ಈ ಕೂಡಲೇ ಹಿಂಪಡೆದು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.