ಕನ್ನಡವೆಂದರೆ ಬರೀ ನುಡಿಯಲ್ಲ, ಅದು ನಮ್ಮ ಅಸ್ತಿತ್ವ ಮತ್ತು ಅಸ್ಮಿತೆ -ಉಪನ್ಯಾಸಕಿ ಮಂಗಳಗೌರಿ

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ಕನ್ನಡವೆಂದರೆ ಬರೀ ನುಡಿಯಲ್ಲ, ಅದು ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯಾಗಿದೆ ಎಂದು ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ‌ ಉಪನ್ಯಾಸಕಿ ಮಂಗಳಗೌರಿ  ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಟ್ಯ ಮಯೂರಿ ಕಲಾ ಕೇಂದ್ರದ ವತಿಯಿಂದ ನಡೆದ ಕಲೆ,ಸಾಹಿತ್ಯ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು  ನಮ್ಮ ಜನಪದರು ಮತ್ತು  ಅನೇಕ ರಾಜವಂಶಗಳವರು ಉಳಿಸಿ ಬೆಳೆಸಿದ್ದಾರೆ. ವೈವಿಧ್ಯಮಯದಲ್ಲೂ ಏಕತೆಗೆ ಹೆಸರಾಗಿರುವ   ಕರ್ನಾಟಕದ ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ನೃತ್ಯ ಮುಂತಾದ ಸಾಂಸ್ಕೃತಿಕ ಕಲಾ ಪ್ರಕಾರಗಳು  ಕರ್ನಾಟಕವನ್ನು  ಸಮನ್ವಯ ಮತ್ತು ಸಾಮರಸ್ಯದ  ನಾಡು ಎಂದು ಕರೆಯಲು ಸಹಕಾರಿ ಆಗಿವೆ. ಸಾಂಸ್ಕೃತಿಕ ಕಲಾ ಪ್ರಕಾರಗಳು  ಜನರಲ್ಲಿ  ತಮ್ಮ  ಸಾಮರ್ಥ್ಯ, ಆಸಕ್ತಿಗಳು ಮತ್ತು ಪ್ರತಿಭೆಗಳನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಡುತ್ತವೆ ಎಂದರು.

ಕಲೆ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಜನಾಂಗಕ್ಕೂ ತಲುಪಿಸುವುದು ನಮ್ಮ ಆದ್ಯ ಕರ್ತವ್ಯ ಆಗಬೇಕಾಗಿದೆ. ಶಾಲಾ ಕಾಲೇಜುಗಳು ಮತ್ತು ಸಾಂಸ್ಕೃತಿಕ ಕಲಿಕಾ ಕೇಂದ್ರಗಳು ಕಲೆ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ  ಶೈಕ್ಷಣಿಕ ಮತ್ತು ವ್ಯಕ್ತಿತ್ವ  ವಿಕಸನಕ್ಕೆ  ಅನುಕೂಲಕರವಾಗುತ್ತವೆ.    ದೈಹಿಕ ಆರೋಗ್ಯಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದರು.

ಇದೇ ಸಂದರ್ಭದಲ್ಲಿ ನಾಟ್ಯ ಮಯೂರಿ ಕಲಾ ಕೇಂದ್ರದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕಸಬಾ ಹೋಬಳಿ ಕೋಶಾಧ್ಯಕ್ಷ  ಜಿ.ಸುರೇಶ್, ಸಾಸಲು ಹೋಬಳಿ ಕಾರ್ಯದರ್ಶಿ ಕೇಶವಮೂರ್ತಿ,  ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ಭಾರತ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ  ಸಹಾಯಕ ಆಯುಕ್ತ ವೆಂಕಟರಾಜು,  ನಾಟ್ಯ ಮಯೂರಿ ಕಲಾ ಕೇಂದ್ರದ ಅಧ್ಯಕ್ಷ ಅರುಣಮೂರ್ತಿ,  ಕಾರ್ಯದರ್ಶಿ ಹಂಸವೇಣಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *