ಕನ್ನಡಕ್ಕೆ ಧಕ್ಕೆಯಾದಾಗ ಕರವೇ ಮುಂಚೂಣಿಯಲ್ಲಿ ನಿಂತು ಹೋರಾಟ- ಎಂಎಲ್ಸಿ ಅನಿಲ್‌ಕುಮಾರ್

ಕೋಲಾರ: ಕನ್ನಡಕ್ಕೆ ಧಕ್ಕೆಯುಂಟು ಎದುರಾದಾಗ ಕರ್ನಾಟಕ ರಕ್ಷಣಾ ವೇದಿಕೆಯೂ ಮುಂಚೂಣಿಯಲ್ಲಿ ನಿಂತು ನಡೆದ ಹೋರಾಟಗಳು ಇತಿಹಾಸ ಪುಟಗಳಲ್ಲಿ ಉಳಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಹೇಳಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಕೋಲಾರ ಕನ್ನಡೋತ್ಸವ ಸಾಂಸ್ಕೃತಿಕ ಸಂಭ್ರಮ ಹಾಗೂ ನಗರಸಭೆ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಶೇ.೬೦ರಷ್ಟು ನಾಮಫಲಕ ಕಡ್ಡಾಯಗೊಳಿಸಲು ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯ ಫಲವಾಗಿ ಅದು ರಾಜ್ಯದಲ್ಲಿ ಜಾರಿಗೆ ಬಂದಿತು. ಸಿದ್ದರಾಮಯ್ಯ ಅವರು ಮೊದಲು ಶಾಸಕರಾದಾಗ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡದ ಬಗ್ಗೆ ಬದ್ಧತೆ ಹೊಂದಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಎಂಇಎಸ್ ಉಪಟಳ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಅದರ ವಿರುದ್ಧ ಮುಂಚೂಣಿಯಲ್ಲಿ ಹೋರಾಟ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆಯಾಗಿತ್ತು ಬೆಳಗಾಂನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ವಿಧಾನಸೌಧ ನಿರ್ಮಾಣ ಮಾಡುತ್ತಾರೆ, ಯಡಿಯೂರಪ್ಪ ಉದ್ಘಾಟಿಸುತ್ತಾರೆ, ಪಕ್ಷ ಏನೇ ಇದ್ದರೂ ಕನ್ನಡಕ್ಕಾಗಿ ಹಲವು ಮಂದಿ ವಿವಿಧ ರೀತಿಯ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು

ಭಾಷೆಯ ಬಗ್ಗೆ ಗಂಭೀರವಾಗಿ ಚರ್ಚೆಗಳು ಆಗುತ್ತಿವೆ. ೩೦೦೦ ವರ್ಷಗಳ ಇತಿಹಾಸ ಇದೆ, ಕರ್ನಾಟಕ ಏಕೀಕರಣವಾಗಿ ೫೦ ವರ್ಷಗಳು ಪೂರೈಸಿದ್ದು, ಭಾಷೆಯ ಅಸ್ತಿತ್ವಕ್ಕೆ ಹೋರಾಟ ನಡೆಸಬೇಕಾದ ಸ್ಥಾನದಲ್ಲಿ ಇದ್ದೇವೆ ಎಂದು ವಿಷಾದಿಸಿದ ಅವರು, ಕನ್ನಡ ಭಾಷೆಯು ಶ್ರೀಮಂತಗೊಂಡಿದ್ದರೂ ಸಹ ಗಡಿಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಎಂಇಎಸ್ ಹಾವಳಿಯನ್ನು ವೇದಿಕೆಯ ಹೋರಾಟಗಳಿಂದ ಹತ್ತಿಕ್ಕಲಾದ ಇತಿಹಾಸ ಇದೆ. ಇದರಿಂದಾಗಿ ಬೆಳಗಾಂ ಭಾಗದಲ್ಲಿ ಕನ್ನಡ ಉಳಿದಿದೆ ಎಂದು ಬಣ್ಣಿಸಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ನಾಡು, ನುಡಿ ನಮ್ಮೆಲ್ಲರ ಉಸಿರು, ಜಿಲ್ಲೆಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರದಲ್ಲಿ ರಕ್ಷಣಾ ವೇದಿಕೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕನ್ನಡ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಯಲ್ಲೇ ಬೇಕು ಎಂದು ಸಲಹೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ರಕ್ಷಣಾ ವೇದಿಕಯೂ ೭೫ ಲಕ್ಷಕ್ಕೂ ಹೆಚ್ಚು ಕಾರ್ಯಕರ್ಯರ ಸದಸ್ಯತ್ವ ಹೊಂದಿದೆ, ಜಿಲ್ಲೆಯಲ್ಲಿ ೨೫ ವರ್ಷಗಳಿಂದ ನೀರಾವರಿ ವಿಚಾರ, ಬಿಜಿಎಂಎಲ್‌ಗೆ ಬಿಬಿಎಂಪಿ ಕಸ ತುಂಬಿಸುವುದು, ಮಹಿಳಾ ಕಾಲೇಜನ್ನು ಬಿಜಾಪುರಕ್ಕೆ ಸೇರಿಸುವುದು ವಿರೋಧಿಸಿ ನಡೆದ ಹೋರಾಟಗಳಿಗೆ ಜಯ ಸಿಕ್ಕಿವೆ ಎಂದರು. ನಮಗೇನು ಜೈಲು, ಕೇಸು ಹೊಸದೆನಲ್ಲ. ನಾಡು, ನುಡಿ ವಿಚಾರದಲ್ಲಿ ರಾಜೀಯಾಗುವುದಿಲ್ಲ. ಹೋರಾಟಗಳು ನಡೆಯುತ್ತಲೇ ಇರುತ್ತವೆ. ಇದೀಗ ಕನ್ನಡಿಗರಿಗೆ ಉದ್ಯೋಗದ ಹಕ್ಕು ಕಲ್ಪಿಸಲು ಒತ್ತಾಯಿಸಿ ಹೋರಾಟ ನಡೆಯುತ್ತಿದ್ದು, ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಕೆಯುಡಿಎ ಅಧ್ಯಕ್ಷ ಮಹಮದ್ ಹನೀಫ್, ಕಸಾಪ ನಿಕಟ ಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಟಿಎಪಿಸಿಎಂಎಸ್ ಅಧ್ಯಕ್ಷ ವಿ.ರಾಮು, ಯುವ ಮುಖಂಡರಾದ ರಾಜು ಶ್ರೀನಿವಾಸಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಮರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಸಮಾಜ ಸೇವಕ ಪಲ್ಲವಿಮಣಿ, ಕರವೇ ತಾಲೂಕು ಅಧ್ಯಕ್ಷ ಶಶಿಕುಮಾರ್, ರೈತ ಘಟಕದ ಜಿಲ್ಲಾಧ್ಯಕ್ಷ ವಡಗೂರು ಶಂಕರ್‌ರೆಡ್ಡಿ, ಕಾರ್ಮಿಕ ಘಟಕದ ಮಂಜುನಾಥಗೌಡ, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *