ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಡಿಸೆಂಬರ್ 15 ರಿಂದ ನೋಂದಣಿ: ಜಿಲ್ಲೆಯಲ್ಲಿ 5 ಸಂಗ್ರಹಣಾ ಕೇಂದ್ರಗಳ ಸ್ಥಾಪನೆ -ಜಿಲ್ಲಾಧಿಕಾರಿ ಆರ್.ಲತಾ


ಕೇಂದ್ರ ಸರ್ಕಾರವು 2022-23 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 3,578 ರೂ. ದರದಲ್ಲಿ ರಾಗಿ ಖರೀದಿಸಲು ಆದೇಶಿಸಿದೆ.

ಜಿಲ್ಲೆಯಲ್ಲಿ ಡಿಸೆಂಬರ್ 15 ರಿಂದ ರಾಗಿ ಖರೀದಿಗೆ ಸಂಬಧಿಸಿದಂತೆ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ. ಜನವರಿ 1 ರಿಂದ ಜಿಲ್ಲೆಯ ಐದು ಸ್ಥಳಗಳಲ್ಲಿ ರಾಗಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕುರಿತ ಕಾರ್ಯಪಡೆಯ ಮೊದಲನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿ ರಾಜ್ಯದಾದ್ಯಂತ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಗುರಿ ನಿಗದಿಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿ ತಲಾ ಒಂದು ಹಾಗೂ ದೊಡ್ಡಬಳ್ಳಾಪುರದ ಸಾಸಲು ಹೋಬಳಿಯಲ್ಲಿ ಒಂದು ಹೆಚ್ಚುವರಿ ಸಂಗ್ರಹಣಾ ಕೇಂದ್ರ ಸೇರಿ ಒಟ್ಟು 5 ರಾಗಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗುವುದು. ಅಗತ್ಯ ಬಿದ್ದರೆ ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರತಿ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಲು ತಿಳಿಸಿದರು.

ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ ಬೆಂಗಳೂರು (ದಕ್ಷಿಣ) ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.

ಡಿಸೆಂಬರ್ 15 ರಿಂದ ರಾಗಿ ಖರೀದಿಗೆ ರೈತರ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. 2023 ರ ಜನೆವರಿ 1 ರಿಂದ ಮಾರ್ಚ್ 31 ರವರೆಗೆ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಖರೀದಿ ಕೇಂದ್ರಗಳ ಸ್ಥಾಪನೆ, ರೈತರ ನೋಂದಣಿಗೆ ಸಿದ್ಧತೆ ಮಾಡಿಕೊಳ್ಳಬೇಕು.

ಕರಪತ್ರಗಳ ವಿತರಣೆ, ರೈತಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿ ಸೇರಿದಂತೆ ರೈತರು ಸೇರುವ ಮೊದಲಾದ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ಕೃಷಿಕರಿಗೆ ಮಾಹಿತಿ ನೀಡಬೇಕು. ರಾಗಿ ಸಂಗ್ರಹಣೆಗೆ ಜಿಲ್ಲೆಯ ಉಗ್ರಾಣಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ ಬೆಂಗಳೂರು (ದಕ್ಷಿಣ) ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ರೈತರಿಂದ ಬರುವ ರಾಗಿಯನ್ನು ಕೆಎಫ್‌ಸಿಎಸ್‌ಸಿ ವತಿಯಿಂದ ಉಚಿತವಾಗಿ ನೀಡಲಾಗುವ ಗೋಣಿ ಚೀಲದಲ್ಲಿ ತುಂಬಿಕೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಗಿರಿಜಾದೇವಿ.ಜಿ ಹಾಗೂ ಮತ್ತಿತರರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *