
ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಚಿಕ್ಕಮಧುರೆ ವತಿಯಿಂದ ತಾಲೂಕಿನ ಕನಸವಾಡಿಯ ಶ್ರೀ ಶನಿಮಹಾತ್ಮ ದೇವಾಲಯದ ಬಳಿ 101 ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು.
ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಉತ್ತಮ ಮಳೆ ಬೆಳೆ ಆಗಲೆಂದು, ಊರಿಗೆ ಯಾವುದೇ ವಿಘ್ನಗಳು ಎದರುಗಾಬಾರದು ಎಂದು 101 ಗಣಪತಿ ಮೂರ್ತಿಗಳನ್ನು ಒಂದೆಡೆ ಪ್ರತಿಷ್ಠಾಪಿಸಲಾಗಿದೆ.
ಮೊದಲನೇ ವರ್ಷದ ಗಣಪತಿ ಉತ್ಸವವನ್ನು ಸೆ.16ರಿಂದ ಅ.3ರವರೆಗೆ ಆಯೋಜಿಸಲಾಗಿದ್ದು, ಪ್ರತಿನಿತ್ಯ ವಾದ್ಯಗೋಷ್ಠಿ, ಮಕ್ಕಳ ನೃತ್ಯ, ಭಕ್ತಿ ಗೀತೆಗಳು ಸೇರಿದಂತೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇದರ ಜೊತೆಗೆ ಲಾಟರಿ ಯೋಜನೆ ಮತ್ತು ಬಹುಮಾನಗಳನ್ನು ಇರಿಸಲಾಗಿತ್ತು. ಅ.3ರಂದು ಎಲ್ಲಾ ಗ್ರಾಮಸ್ಥರು, ಭಕ್ತಾಧಿಗಳ ಸಮ್ಮುಖದಲ್ಲಿ ಲಾಟರಿ ಡ್ರಾ ನಡೆಸಿ, ಡ್ರಾ ಆದ ನಂತರ ಸ್ಥಳದಲ್ಲೇ ಬಹುಮಾನ ವಿತರಣೆ ಮಾಡಲಾಗುವುದು. ನಂತರ ಶ್ರೀ ವಿನಾಯಕನ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಡಿ.ಜೆ ನೃತ್ಯ, ತಮಟೆ, ತಾಳ, ವಾಧ್ಯ, ಮೇಳ, ಜಾನಪದ ಕಲಾ ತಂಡಗಳ ನೃತ್ಯ ನಡೆಸಿ ಅಮಾನಿಕೆರೆಯಲ್ಲಿ ವಿನಾಯಕ ವಿಸರ್ಜನೆ ಮಾಡಲಾಗುವುದು ಎಂದು ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಮುಖಂಡರು ತಿಳಿಸಿದ್ದಾರೆ.
ಈ ವೇಳೆ ರೈಲ್ವೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್ ಮಲ್ಲಯ್ಯ, ಕನಸವಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಟಿ.ವಿಜಯ ಕುಮಾರ್, ಗಣೇಶ ಸೇವಾ ಸಮಿತಿ ಅಧ್ಯಕ್ಷ ರೇಣುಕಾ ಪ್ರಸಾದ್, ವಿ.ಎಸ್.ಎಸ್.ಎನ್ ಮಾಜಿ ನಿರ್ದೇಶಕ ವಿಶ್ವನಾಥ್, ಕನಸವಾಡಿ ಗ್ರಾ ಪಂ ಮಾಜಿ ಸದಸ್ಯ ವಿರೂಪಾಕ್ಷಯ್ಯ, ಬಿಜೆಪಿ ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸತೀಶ್ ಕುಮಾರ್, ಮುಖಂಡರಾದ ನಾರಾಯಣ ನಾಯ್ಕ್, ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.