ಆನ್ ಲೈನ್ ವಂಚನೆಯ ಬಗ್ಗೆ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಕೆಲವರು ಆನ್ ಲೈನ್ ವಂಚಕರ ಮೋಸದ ನಯ ಮಾತಿಗೆ ಬಲಿಯಾಗಿ ಹಣ ಕಳೆದುಕೊಂಡು ಬೆಪ್ಪುತಕ್ಕಡಿಗಳಾಗುತ್ತಿದ್ದಾರೆ. ಕಿವಿಗೆ ದಾಸವಾಳ ಮುಡಿಸಿಕೊಳ್ಳಲು ತಯಾರಿರುವವರು ಇರುವ ತನಕ ಲಾಲ್ ಬಾಗನ್ನೇ ಮುಡಿಸುವವರು ಇದ್ದೇ ಇರುತ್ತಾರೆ. ಈ ಮಾತಿಗೆ ಅನ್ವಯವಾಗುವಂತೆ, ಖತರ್ನಾಕ್ ಚೋರರು ಚಾಲಕನೋರ್ವನಿಗೆ ಕಡಿಮೆ ಬೆಲೆಗೆ ಐಷಾರಾಮಿ ಬೊಲೆರೋ ವಾಹನ ಮಾರಾಟ ಮಾಡುವುದಾಗಿ ಆಮಿಷವೊಡ್ಡಿ ಹಣ ಪಡೆದು ಚಳ್ಳೆಹಣ್ಣು ತಿನ್ನಿಸಿರುವ ಈ ದೋಖಾ ಪ್ರಕರಣ ನಿದರ್ಶನವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯೋಧರ ಹೆಸರಿನಲ್ಲಿ ತೋಡುತ್ತಿರುವ ಆನ್ ಲೈನ್ ಖೆಡ್ಡಾ ದೋಖಾ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ವಿಪರ್ಯಾಸವೆನಿಸಿದೆ.
*ಯಾರದ್ದೋ ಬೊಲೆರೋ ತೋರಿಸಿದ್ದ ವಂಚಕ!*
ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ವಿ.ಆರ್. ಸುರೇಶ್ ಎಂಬುವವರಿಗೆ ಏಪ್ರಿಲ್ 30 ರಂದು ಮೊಬೈಲ್ ನಂಬರ್ ನಿಂದ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ನನ್ನ ಹೆಸರು ರಮೇಶ್, ಭಾರತೀಯ ಸೇನೆಯ ಪಾರ್ಸೆಲ್ ವಿಭಾಗ ಬೆಂಗಳೂರಿನಲ್ಲಿ ಡ್ಯೂಟಿ ಮಾಡಿಕೊಂಡಿದ್ದೇನೆ. ನನಗೆ ಜಮ್ಮು ಕಾಶ್ಮೀರಕ್ಕೆ ಟ್ರಾನ್ಸ್ ಫರ್ ಆಗಿದೆ. ನನ್ನತ್ತಿರ ಬೊಲೆರೋ ವಾಹನವಿದ್ದು, ಅದನ್ನು ಅಲ್ಲಿಗೆ ತೆಗೆದುಕೊಂಡು ಹೋಗುವುದು ರಿಸ್ಕ್ ಆಗುವುದರಿಂದ ಕಡಿಮೆ ಬೆಲೆಗೆ ಅಂದರೆ ರೂ.1,31,500ಕ್ಕೆ ನಿಮಗೆ ಮಾರಾಟ ಮಾಡುತ್ತೇನೆ. ಖಾತರಿಯಾಗಬೇಕೆಂದಿದ್ದಲ್ಲಿ ನನ್ನ ಫೇಸ್ ಬುಕ್ ಎಕೌಂಟ್ ನೋಡಿ ಎಂದು ನಯವಾಗಿ ಹಿಂದಿಯಲ್ಲಿ ಹೂ ಮುಡಿಸಿದ್ದಾನೆ.
ಮೊದ ಮೊದಲು ಈತನ ಮಾತನ್ನು ಸುರೇಶ್ ಅವರು ನಂಬದಿದ್ದಾಗ, ವಂಚಕ ಸೇನಾ ಸಮವಸ್ತ್ರದಲ್ಲಿಯೇ ವಿಡಿಯೋ ಕಾಲ್ ಮಾಡಿ, ನಾನು ಆರ್ಮಿಯಲ್ಲಿದ್ದು ದೇಶಸೇವೆ ಮಾಡುತ್ತಿದ್ದೇನೆ. ನಿಮಗೆ ಮೋಸ ಮಾಡುವುದಿಲ್ಲ. ನನ್ನ ಮಾತನ್ನು ನಂಬಿ….ನಂಬಿ….ಎಂದು ಹೇಳಿದ್ದಾನೆ. ಒಂದು ಲಕ್ಷ ರೂ. ಆನ್ ಲೈನ್ ಪೇಮೆಂಟ್ ಮಾಡಿದರೆ ನೀವು ಬೆಂಗಳೂರಿಗೆ ಬಂದು ಬೊಲೆರೋ ತೆಗೆದುಕೊಂಡು ಹೋಗಬಹುದು ಎಂದೂ ಅರುಹಿದ್ದಾನೆ ಇದರಿಂದ ಆತನ ಮಾತನ್ನು ನಂಬಿದ ಸುರೇಶ್ ಅವರು ಬೆಂಗಳೂರಿನಲ್ಲಿರುವ ಪರಿಚಿತರ ಮೂಲಕ ಮೊದಲಿಗೆ ರೂ. 1 ಲಕ್ಷ ವನ್ನು ಆನ್ ಲೈನ್ ಮೂಲಕ ಖದೀಮ ತಿಳಿಸಿದ ಖಾತೆಗೆ ಪಾವತಿಸಿದ್ದಾರೆ.
ಪುನಃ ಆತ ರೂ. 31500 ಹಣವನ್ನು ಹಾಕಲು ಹೇಳಿದಾಗ ಅಷ್ಟೂ ಹಣವನ್ನು ಪಾವತಿಸಿದ್ದಾರೆ. ತದನಂತರವೂ ಪುನಃ 1 ಲಕ್ಷ ಹಣ ಹಾಕಲು ತಿಳಿಸಿದಾಗ ಸುರೇಶ್ ಅವರಿಗೆ ಸಂಶಯ ಬಂದು ಈ ಕುರಿತು ಪ್ರಶ್ನಿಸುತ್ತಿದ್ದಂತೆಯೇ ಒಂದೆಡೆ ಚೋರನ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ, ಇನ್ನೊಂದಡೆ ಫೇಸ್ ಬುಕ್ ಖಾತೆ ಮಂಗಮಾಯವಾಗಿದೆ! ಎಂದು ಸುರೇಶ್ ಅವರು ಮಾಹಿತಿ ನೀಡಿದ್ದಾರೆ.
ತಾನು ಮೋಸಹೋಗಿರುವುದನ್ನು ಅರಿತ ಸುರೇಶ್ ಅವರು ಹಣ ಪಾವತಿಸಿದ ಪರಿಚಿತರ ಮೂಲಕ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇತ್ತ ಅಗ್ಗದ ಬೆಲೆಗೆ ಸಿಗಲಿರುವ ಐಷಾರಾಮಿ ಬೊಲೆರೋದಲ್ಲಿ ಜಾಲಿ ರೈಡ್ ಮಾಡಬಹುದೆಂಬ ಕನಸು ಕಾಣುತ್ತಿದ್ದ ಸುರೇಶ್ ಇದೀಗ ಹಣ ಕಳೆದುಕೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದರೆ, ಅತ್ತ ವಂಚಕ ಅನಾಯಸವಾಗಿ ದೊರೆತ ಹಣವನ್ನು ಕೈಯಾರೆ ಎಣಿಸಿಕೊಳ್ಳುತ್ತಿದ್ದಾನೆ !
*ಕೊಡಗಿನ ಬೊಲೆರೋ?*
ಚಾಲಕ ಸುರೇಶ್ ಅವರಿಗೆ ಆನ್ ಲೈನ್ ವಂಚಕ ವಾಟ್ಸ್ಅಪ್ ನಲ್ಲಿ ಮತ್ತು ಫೇಸ್ಬುಕ್ ನಲ್ಲಿ ತೋರಿಸಿ ಮಂಕುಬೂದಿ ಎರಚಿದ್ದ ಬೊಲೆರೋ ವಾಹನ ಕೊಡಗು ಜಿಲ್ಲೆಯ ಪ್ರಮುಖ ಸ್ಥಳವೊಂದರಲ್ಲಿದೆ ಎಂದು ಹೇಳಲಾಗಿದೆ. ಆದರೆ, ಅದರ ಮಾಲೀಕನಿಗೂ ಈ ವಂಚನೆ ಪ್ರಕರಣಕ್ಕೂ ಯಾವುದೇ ರೀತಿಯಲ್ಲಿಯೂ ಸಂಬಂಧವಿಲ್ಲ ಎನ್ನಲಾಗಿದೆ.
*ಜಾಗೃತರಾಗಲು ಚಾಲಕ ಸುರೇಶ್ ಮನವಿ*
ತಾನು ವಂಚನೆಗೊಳಗಾಗಿರುವ ಸುರೇಶ್ ಅವರು, ತನ್ನಂತೆ ಯಾರೂ ಕೂಡ ಆನ್ ಲೈನ್ ವಂಚಕರ ದಗಾಕೋರತನಕ್ಕೆ ಬಲಿಯಾಗದಂತೆ ಹಾಗೂ ದುಬಾರಿ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಆಸೆಗೆ ಬಿದ್ದು ಆನ್ ಲೈನ್ ನಲ್ಲಿ ವಂಚಕರಿಗೆ ಹಣ ಪಾವತಿಸದಂತೆ ಮತ್ತು ಇಂತಹ ವಿಚಾರಗಳಲ್ಲಿ ಎಚ್ಚರದಿಂದಿರಲು ಸೂಚಿಸಿದ್ದಾರೆ.