ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶವನ್ನು ವಾಪಸ್ ಪಡೆದು ಹೈಕೋರ್ಟ್ ಆದೇಶದಂತೆ ಬಾಕಿ ಇರುವ ಶೈಕ್ಷಣಿಕ ಧನ ಸಹಾಯವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ ಅತ್ಯಂತ ಸಂಕಷ್ಠದಲ್ಲಿ ಜೀವನ ನಡೆಸುತ್ತಿರುವ ಕಟ್ಟಡ ಕಾರ್ಮಿಕರು ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಂಡಳಿಯಿಂದ ದೊರೆಯುವ ವಿದ್ಯಾರ್ಥಿ ವೇತನದಿಂದ ಪ್ರಯೋಜನವಾಗುತ್ತಿತ್ತು. ಕಳೆದ ವರ್ಷ ಪೂರ್ವನ್ವಯವಾಗುವಂತೆ ವಿದ್ಯಾರ್ಥಿವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತ ಮಾಡಿರುವುದು ಖಂಡನೀಯ. ಕೂಡಲೇ ಈ ಆದೇಶವನ್ನು ವಾಪಸು ಪಡೆದು, ಹಿಂದಿನಂತೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ನೈಜ ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ನವೀಕರಣ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡು ವಿತರಣೆ ಆಗಬೇಕು. ಸೌಲಭ್ಯಗಳಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಪಿಂಚಣಿದಾರರಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಹಣವನ್ನು ಬಿಡುಗಡೆ ಮಾಡಬೇಕು. ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು, ಇದುವರೆಗೆ ನಡೆದಿರುವ ಖರೀದಿಗಳಲ್ಲಿ ಅವ್ಯವಹಾರಗಳ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಭೀಮರಾಜ್ ಮಾತನಾಡಿ, ನೈಜ ಕಟ್ಟಡ ಕಾರ್ಮಿಕರು ಸಲ್ಲಿಸುವ ಸೌಲಭ್ಯದ ಅರ್ಜಿಗಳನ್ನು ತಿರಸ್ಕರಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಕಟ್ಟಡಗಳಿಂದ ಸೆಸ್ ಸಂಗ್ರಹ ಮಾಡಲು ವಿಶೇಷ ಯೋಜನೆ ರೂಪಿಸಬೇಕು. ಕಳೆದ ವರ್ಷ ಸಾಪ್ಟ್ ವೇರ್ ಸಮರ್ಪಕವಾಗಿ ಕೆಲಸ ಮಾಡದೇ ಹಲವು ಮಂದಿ ಪಿಂಚಣಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಅಂತವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ತಿರಸ್ಕೃತ ನೋಂದಣಿ, ನವೀಕರಣ, ಸೌಲಭ್ಯದ ಅರ್ಜಿಗಳ ಕುರಿತು ಮೇಲ್ಮನವಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶ ನೀಡಬೇಕು. ಈ ಮೇಲ್ಮನವಿ ಪ್ರಾಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಮನವಿಯ ಮೂಲಕ ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಂಘದ ಕಾರ್ಯಾಧ್ಯಕ್ಷ ಕೆ.ಮಂಜುನಾಥ್, ಜಿಲ್ಲಾ ಸಹ ಕಾರ್ಯದರ್ಶಿ ಎಂ.ವಿಜಯಕೃಷ್ಣ, ತಾಲೂಕು ಅಧ್ಯಕ್ಷ ಹೊಗರಿ ನಾಗರಾಜ್, ಮುಖಂಡರಾದ ಗುರುಸ್ವಾಮಿ, ಅಪ್ಪಯ್ಯಣ್ಣ, ಕೇಶವರಾವ್ ಅಶೋಕರಾವ್, ಚಂದ್ರಪ್ಪ, ವೆಂಕಟೇಶ್, ಪೆರುಮಾಳಪ್ಪ, ಗೋಪಾಲ್, ದಶರತ್, ದಿಂಬ ಮಂಜುನಾಥ್, ಮುನಿಯಪ್ಪ ಮತ್ತಿತತರು ವಹಿಸಿದ್ದರು.

Leave a Reply

Your email address will not be published. Required fields are marked *