ದಿನೇ ದಿನೇ ನೋಂದಾಯಿತ ಬೋಗಸ್ ಗುರುತಿನ ಚೀಟಿಗಳು ಹೆಚ್ಚಾದ್ದರಿಂದ ಬಹುಸಂಖ್ಯಾತ ಕಾರ್ಮಿಕರಿಗೆ ಹಣ ಸರಿದೂಗಿಸಲು ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಹಣದ ಕೊರತೆ ಇದೆ ಎಂದು ಕುಂಟುನೆಪ ಹೇಳಿ ಸರ್ಕಾರವು ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೀಡುವ ವಾರ್ಷಿಕ ಸಹಾಯಧನವನ್ನು ಕಡಿತಗೊಳಿಸಿದೆ. ಮಕ್ಕಳ ವಿದ್ಯಾರ್ಥಿವೇತನಕ್ಕೆ ಕತ್ತರಿ ಹಾಕಿರುವುದು ಖಂಡನೀಯ ಎಂದು ಶ್ರೀನೆಲದಾಂಜನೇಯ ಸ್ವಾಮಿ ಕಟ್ಟಡ ಹಾಗೂ ಕೂಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಅವರು ಸರ್ಕಾರದ ಕ್ರಮಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಹಂತದಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನದ ಮೊತ್ತವನ್ನು ಶೇ 80-85 ರಷ್ಟು ಕಡಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಈ ಕ್ರಮವು ಬಡತನದ ಅಂಚಿನಲ್ಲಿರುವ ಕಟ್ಟಡ ಕಾರ್ಮಿಕರ ಮಕ್ಕಳ ಕಡಿಮೆ ಶಾಲಾ ದಾಖಲಾತಿಗೆ ಕಾರಣವಾಗಬಹುದು ಮತ್ತು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
1-4ನೇ ತರಗತಿ ಮಕ್ಕಳು ವಾರ್ಷಿಕವಾಗಿ 5 ಸಾವಿರ ರೂ. ಪಡೆಯುತ್ತಿದ್ದರು, ಈಗ ಅದು 1100 ರೂ. ಗೆ ಕಡಿತಗೊಂಡಿದೆ. ಅದೇರೀತಿ 5-8ನೇ ತರಗತಿಯ ಮಕ್ಕಳಿಗೆ 8 ಸಾವಿರ ನೀಡುತ್ತಿರುವುದನ್ನ 1250ಕ್ಕೆ ಇಳಿಕೆ. 9-10ನೇ ತರಗತಿ ವಿದ್ಯಾರ್ಥಿಗಳಿಗೆ 12 ಸಾವಿರ ನೀಡುತ್ತಿರುವುದನ್ನ 3ಸಾವಿರಕ್ಕೆ ಇಳಿಕೆ. ಪ್ರಥಮ ಹಾಗೂ ದ್ವಿತೀಯಾ ಪಿಯುಸಿ ವಿದ್ಯಾರ್ಥಿಗಳಿಗೆ 15 ಸಾವಿರ ನೀಡುತ್ತಿರುವುದನ್ನ 4ಸಾವಿರ ರೂ. ನ್ನು ಪ್ರಸ್ತುತ ನೀಡಲಾಗುತ್ತಿದೆ. ಪದವಿ ವಿದ್ಯಾರ್ಥಿಗಳಿಗೆ 25ಸಾವಿರ ನೀಡುತ್ತಿರುವುದನ್ನ 6ಸಾವಿರಕ್ಕೆ ಇಳಿಸಲಾಗಿದೆ. ಬಿಇ, ಬಿಟೆಕ್ ಪದವಿಗೆ 50 ಸಾವಿರ ರೂ. ನ್ನು ನೀಡಲಾಗುತ್ತಿತ್ತು ಈಗ 10 ಸಾವಿರಕ್ಕೆ ಇಳಿಸಲಾಗಿದೆ. ಸ್ನಾತಕೋತ್ತರ ಪದವಿಧರರಿಗೆ 35ಸಾವಿರ ನೀಡಲಾಗುತ್ತಿರುವುದನ್ನ 10ಸಾವಿರಕ್ಕೆ ಇಳಿಸಲಾಗಿದೆ. ಪಾಲಿಟೆಕ್ನಿಕ್, ಡಿಪ್ಲೊಮಾ, ಐಟಿಐ ವಿದ್ಯಾರ್ಥಿಗಳಿಗೆ 20 ಸಾವಿರ ನೀಡುತ್ತಿರುವುದನ್ನ 4600ಕ್ಕೆ ಇಳಿಸಲಾಗಿದೆ. ಬಿಎಸ್ ಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದಲ್ಲಿ 30ಸಾವಿರ ಕಡಿತ. ಬಿಎಡ್ ವಿದ್ಯಾರ್ಥಿ ವೇತನದಲ್ಲಿ 29 ಸಾವಿರ ಕಡಿತ, ವೈದ್ಯಕೀಯ ವಿದ್ಯಾರ್ಥಿ ವೇತನದಲ್ಲಿ 49ಸಾವಿರ ಕಡಿತ, ಡಿಎಡ್ ವಿದ್ಯಾರ್ಥಿವೇತನದಲ್ಲಿ 19400ರೂ. ಕಡಿತ, ಪಿಹೆಚ್.ಡಿ ಹಾಗೂ ಎಂಫಿಲ್ ಪದವಿಧರರ ವಿದ್ಯಾರ್ಥಿ ವೇತನದಲ್ಲಿ 14000 ರೂ. ಕಡಿತ, ಎಲ್ ಎಲ್ ಬಿ ಹಾಗೂ ಎಲ್ ಎಲ್ ಎಂ ವಿದ್ಯಾರ್ಥಿ ವೇತನದಲ್ಲಿ 20ಸಾವಿರ ಕಡಿತಗೊಳಿಸಲಾಗಿದೆ ಎಂದು ಅಂಕಿಅಂಶ ಸಹಿತ ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸರಿದೂಗಿಸಲು ಬೇರೆ ಯೋಜನೆಗಳ ಅನುದಾನವನ್ನು ಈ ಗ್ಯಾರಂಟಿ ಸೌಲಭ್ಯಗಳಿಗೆ ನೀಡಲಾಗುತ್ತಿದೆ. ಅಲ್ಲದೇ ಕೆಲ ಯೋಜನೆಗಳಿಗೆ ಕತ್ತರಿ ಹಾಕಲಾಗಿದೆ. ಅದರಂತೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಹಾಕಿರುವುದು ಸರಿಯಲ್ಲ ಎಂದು ದೂರಿದರು.
ಕಟ್ಟಡ ಕಾರ್ಮಿಕ ಕಾರ್ಡ್ ಗಳನ್ನ ಹೆಚ್ಚಿನದಾಗಿ ಕಟ್ಟಡ ಕಾರ್ಮಿಕರು ಅಲ್ಲದೇ ಇರುವವರು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ. ಅವರು ಮಾಡಿರುವ ತಪ್ಪಿಗೆ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾವಾಗುತ್ತಿದೆ. ನಾವು ಕಟ್ಟುವ ಸೆಸ್ ಹಣವನ್ನ ನಮಗೆ ನೀಡಿ ಎಂದು ಕೇಳಿತ್ತಿದ್ದೇವೆ ಹೊರತು ಬೇರೆ ಯಾವ ಹಣವನ್ನ ಸರ್ಕಾರಿಂದ ಕೇಳುತ್ತಿಲ್ಲ ಎಂದರು.
ಸರ್ಕಾರಿ ನೌಕರರು, ರಾಜಕಾರಣಿಗಳ ತುಟ್ಟಿಭತ್ಯದಲ್ಲಿ ಏರುಪೇರು ಆಗಿಲ್ಲ, ನಿರಂತರವಾಗಿ ಏರಿಕೆ ಆಗುತ್ತಿದೆ. ಆದರೆ ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕೆ ಕತ್ತರಿ ಹಾಕಿರುವುದು ಎಷ್ಟರಮಟ್ಟಿಗೆ ಸರಿ. ಇದು ಘೋರ ಅನ್ಯಾಯ ಅಲ್ಲವೇ ಎಂದು ಪ್ರಶ್ನೆ ಮಾಡಿದರು. ಕೂಡಲೇ ಈ ಮೊದಲಿನಂತೆ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ವನ್ನು ನೀಡಲೇಬೇಕು. ಈಗಿನ ವಿದ್ಯಾರ್ಥಿವೇತನ ಕಡಿತದ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿ ನ.20ರಂದು ನಗರದ ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಜಾಥಾ ನಡೆಸಿ ತಹಶಿಲ್ದಾರ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಇದಕ್ಕೂ ಸರ್ಕಾರ ಮಣಿದಲ್ಲಿವಾದರೆ ಕಟ್ಟಡ ಕಾರ್ಮಿಕರು ಬಳಸುವ ಸಾಮಾಗ್ರಿಗಳನ್ನು ಪ್ರದರ್ಶಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಶ್ರೀ ನೆಲದಾಂಜನೇಯ ಸ್ವಾಮಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಅರವಿಂದ ಶಂಕರಗೌಡ, ಉಪಾಧ್ಯಕ್ಷ ಮಲ್ಲೇಶ್, ಸಂಘಟನಾ ಕಾರ್ಯದರ್ಶಿ ರುದ್ರಮೂರ್ತಿ, ಸಂಚಾಲಕ ಮಂಜುನಾಥ್, ಸಂಘದ ಸಲಹೆಗಾರ ಪ್ರೊ.ಚಂದ್ರಪ್ಪ ಹಾಜರಿದ್ದರು.