ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಕೋಲಾರ: ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿ ಸ್ವೀಕಾರ ವಿಳಂಬ ನೀತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ‌ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಿಐಟಿಯು ನೇತೃತ್ವದಲ್ಲಿ ಶನಿವಾರ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ತಡೆಹಿಡಿಯಲಾದ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು ಮತ್ತು ಶೈಕ್ಷಣಿಕ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಟ್ ವರೆಗೆ ವಿಸ್ತರಿಬೇಕೆಂದು ಒತ್ತಾಯಿಸಿದರು

ಕರ್ನಾಟಕದ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಚುನಾವಣೆ ಹೊತ್ತಿನಲ್ಲಿ ಯಾವುದೇ ತಡೆಯಿಲ್ಲದೆ ಜಾರಿಗೊಳ್ಳುತ್ತಿವೆ. ಆದರೆ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕಾರಿಗಳು ಚುನಾವಣಾ‌ ನೀತಿ ಸಂಹಿತೆ ನೆಪ‌ ಹಾಗೂ ತಂತ್ರಾಂಶದ ನೆಪವೂಡ್ಡಿ ಫಲಾನುಭವಿ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ, ಹೆರಿಗೆ, ಮದುವೆ ಸಹಾಯಧನ ಅರ್ಜಿಗಳ ಸ್ವೀಕಾರವನ್ನು ತಡೆವೂಡ್ಡಿರುವುದು ಮತ್ತು ಬಡ‌ಕಾರ್ಮಿಕರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಭೀಮರಾಜ್ ಮಾತನಾಡಿ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಸೆಸ್ ಹಣ ಇದೆ. ಅಲ್ಲದೆ ಈ ಪ್ರಕರಣದಲ್ಲಿ ವಾದ‌ ಮಾಡಲು ನೇಮಿಸಿದ ವಕೀಲರಿಗೆ ಲಕ್ಷಾಂತರ ಶುಲ್ಕವನ್ನು ಮಂಡಳಿಯು ನೀಡುತ್ತಿದೆ. ಹಾಗೂ ನೂರಾರು ಕೋಟಿ ರುಪಾಯಿಗಳ ಅನಗತ್ಯ ಖರೀದಿಗಳನ್ನು ಮಾಡಲಾಗುತ್ತಿದೆ.ಆದರೆ ಬಡ ಕಾರ್ಮಿಕರ ಇಬ್ಬರು ‌ಮಕ್ಕಳಿಗೆ ಮಾತ್ರ ಹೈಕೋರ್ಟ್ ಆದೇಶದಂತೆ ರೂ 60 ಸಾವಿರ ‌ಮತ್ತು 55 ಸಾವಿರ‌ ರುಪಾಯಿಗಳನ್ನು ಪಾವತಿಸಲು ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಇದೇ‌ ಜೂನ್ 7 ರಂದು ಕಲ್ಯಾಣ ಮಂಡಳಿಯ ವಿರುದ್ಧ ಹೈಕೋರ್ಟನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಫೆಡರೇಶನ್ ನಿರ್ಧರಿಸಿದೆ ಎಂದರು

ಸರಕಾರವು ಕೂಡಲೇ ಆನ್‌ಲೈನ್ ನಲ್ಲಿ ಮಂಡಳಿಯ ಸೌಲಭ್ಯಗಳ ಅರ್ಜಿಗಳನ್ನು ಸ್ವೀಕರಿಸಲು ಕ್ರಮವಹಿಸಬೇಕು ಶೈಕ್ಷಣಿಕ ಸಹಾಯಧನ ಕೋರಿ ಅರ್ಜಿ ಸಲ್ಲಿಸುವಾಗ ಹಲವಾರು ತಾಂತ್ರಿಕ ಸಮಸ್ಯೆಗಳು ಬರುತ್ತಿದ್ದು, ಇವುಗಳನ್ನು ತಕ್ಷಣ ಬಗೆಹರಿಸಲು ಕ್ರಮ ವಹಿಸಬೇಕು ನೊಂದಣಿ. ನವೀಕರಣ, ಸೌಲಭ್ಯದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ಈ ಅರ್ಜಿಗಳನ್ನು ತಿರಸ್ಕರಿಸುವಾಗ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಮತ್ತು ಸ್ಪಷ್ಟವಾದ ಕಾರಣಗಳನ್ನು ನೀಡಬೇಕು ಹೊಸ ಅರ್ಜಿ ಹಾಗೂ ನವೀಕರಣ ಕುರಿತು ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್, ಸಹ ಕಾರ್ಯದರ್ಶಿ ವಿಜಯಕೃಷ್ಣ, ಮುಖಂಡರಾದ ಆರೋಗ್ಯನಾಥನ್, ಮಹಮ್ಮದ್ ಮುಸ್ತಫಾ, ರಾಮಚಂದ್ರಪ್ಪ ಇದ್ದರು

Leave a Reply

Your email address will not be published. Required fields are marked *