ಕಗ್ಗಂಟಾದ ದೊಡ್ಡಬಳ್ಳಾಪುರ ಕಾಂಗ್ರೆಸ್ ಟಿಕೆಟ್!: ಹಾಲಿ ಶಾಸಕ ವೆಂಕಟರಮಣಯ್ಯ‌ ಹಾಗೂ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ನಡುವೆ ಟಿಕೆಟ್ ಫೈಟ್

ರಾಜ್ಯದಲ್ಲಿ 2023ರ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೂರು ರಾಜಕೀಯ ಪಕ್ಷಗಳು ಒಂದಿಲ್ಲೊಂದು ಯಾತ್ರೆ, ಸಮಾವೇಶಗಳ ಮೂಲಕ ರಾಜ್ಯ ಪರ್ಯಾಟನೆ ಮಾಡುತ್ತಿವೆ. ಜೆಡಿಎಸ್ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ವಿಧಾನಸಭಾ ಮಹಾಯುದ್ಧಕ್ಕೆ ತನ್ನ 93 ಸೇನಾನಿಗಳ ಹೆಸರನ್ನು ಪ್ರಕಟಿಸಿ ಅಖೈರುಗೊಳಿಸಿ ಯುದ್ಧಕ್ಕೆ ಸನ್ನದ್ಧು ಮಾಡಿದೆ.

ಇತ್ತ ಈ ಬಾರಿ ಶತಯಾಗತವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ತನ್ನ ಅಭ್ಯರ್ಥಿಗಳನ್ನು ಶೀಘ್ರವಾಗಿ ಅಖೈರು ಮಾಡಲು ತೀರ್ಮಾನಿಸಿದೆ. ಇದರ ಭಾಗವಾಗಿ ಎಲ್ಲಾ ಜಿಲ್ಲೆಗಳಗೆ ಉಸ್ತುವಾರಿಗಳನ್ನು ನೇಮಕ ಮಾಡಿ 224 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸುತ್ತಿದೆ.

ಈ ಹಿನ್ನೆಲೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮ ಮಾಡುವ ಸಲುವಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಎಂಎಲ್ಸಿ ರವಿ, ಜಿಲ್ಲಾ ವೀಕ್ಷಕಿ ಪದ್ಮಾವತಿ, ಜಿಲ್ಲಾಧ್ಯಕ್ಷರ ನೇತೃತ್ವದ ಸಮಿತಿ ಸಭೆಯಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಕ್ಷೇತ್ರದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಲಾಯಿತು.

ಈ ವೇಳೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಮಾರ್ಪಟ್ಟಿದೆ. ಕೆಲ ಪದಾಧಿಕಾರಿಗಳು ಶಾಸಕ ವೆಂಕಟರಮಣಯ್ಯ ಪರ ಬ್ಯಾಟಿಂಗ್ ಮಾಡಿದರೆ ಇನ್ನೂ ಕೆಲವು ಪದಾಧಿಕಾರಿಗಳು, ಮುಖಂಡರುಗಳು ಮತ್ತೋರ್ವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಪರ ವಕಾಲತ್ತು ವಹಿಸಿದ್ದಾರೆ.

ನೇರಾನೇರ ಅಭಿಪ್ರಾಯ ಸಂಗ್ರಹದ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ ಎನ್ನಲಾಗಿದೆ.

ಅಂತಿಮವಾಗಿ ಯಾರ ಕೈ ಸೇರಲಿದೆ ‘ಬಿ’ಫಾರಂ?

ಕಾಂಗ್ರೆಸ್ ಟಿಕೆಟ್ ಗಾಗಿ ಶಾಸಕ ವೆಂಕಟರಮಣಯ್ಯ ಮತ್ತು ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಧ್ಯೆ ಬಿರುಸಿನ ಕಾದಾಟ ನಡೆಯುತ್ತಿದೆ. ತಾಲೂಕಿನಲ್ಲಿಯೂ ಪ್ರಮುಖ ಮುಖಂಡರುಗಳು ಕೂಡ ಶಾಸಕ ವೆಂಕಟರಮಣಯ್ಯ ವಿರುದ್ಧ ಅಸಮಾಧಾನವನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಮುಂದೆ ವ್ಯಕ್ತಪಡಿಸಿದ್ದರು. ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಇಂತಹದೆ ಘಟನೆ ಪುನರಾವರ್ತಿತವಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *