ಒಳ ಮೀಸಲಾತಿಯನ್ನು ಅನುಷ್ಠಾನ ಮಾಡಿಯೇ ತೀರುತ್ತೇವೆ – ಆಹಾರ ಸಚಿವ ಕೆ.ಎಚ್ ಮುನಿಯಪ್ಪ

ಉಶಾ ಮೆಹ್ತಾ ವರದಿಯನ್ನು ಜಾರಿಗೊಳಿಸಲು ಯಾರು ಮುಂದಾಗಲಿಲ್ಲ. 2014 ರಿಂದ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರವಿಲ್ಲದ ಕಾರಣ ಈ ಒಂದು ಮೀಸಲಾತಿಯ ಅನುಷ್ಠಾನ ವಾಗಲಿಲ್ಲ. ನೊಂದು ಬೆಂದ ಸಮುದಾಯ ಯಾವ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಯಾಗಿಲ್ಲ. ಸರ್ಕಾರಿ ನೌಕರಿ ಇರಬಹುದು, ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿಯೂ ಅಭಿವೃದ್ಧಿ ಕಾಣದ ಸಮುದಾಯವೆಂದರೆ ಅದು ಈ ಮಾದಿಗ ಸಮುದಾಯ. ನಮ್ಮ ಸರ್ಕಾರ ಈಗಾಗಲೇ ಹೈಕೋರ್ಟ್ ನ ನ್ಯಾಯಾಧೀಶ ನಾಗಮೋಹನ ದಾಸ್ ರವರ ನೇತೃತ್ವದಲ್ಲಿ ಏಕ ಸದಸ್ಯ ಪೀಠವನ್ನು ರಚಿಸಿ 3 ತಿಂಗಳಲ್ಲಿ ವರದಿಯನ್ನು ಪಡೆದು ಜಾರಿಗೊಳಿಸಲು ತೀರ್ಮಾನಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹ ಈ ಒಳ ಮೀಸಲಾತಿ ಜಾರಿಗೊಳಿಸಲು ಬದ್ದರಾಗಿದ್ದು , ಪಕ್ಷಾತೀತವಾಗಿ ಎಲ್ಲಾ ನಾಯಕರು ಬೆಂಬಲವನ್ನು ನೀಡಿದ್ದು, ಆದಷ್ಟು ಬೇಗ ಜಾರಿಗೊಳಿಸುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ನಮ್ಮ ರಾಜ್ಯದ ಪರಿಶಿಷ್ಟಜಾತಿಯಲ್ಲಿ ಸುಮಾರು 101 ಉಪ ಜಾತಿಗಳಿದ್ದು, ಆಂದ್ರಪ್ರದೇಶದಲ್ಲಿ ಎಸ್ಸಿ ಸಮುದಾಯದಲ್ಲಿ 57 ಉಪ ಜಾತಿಗಳಿವೆ. ಈ ಎಲ್ಲಾ ಉಪ ಜಾತಿಗಳಿಗೂ ಕಾನೂನಿನ ಪ್ರಕಾರವೇ ಮೀಸಲಾತಿಯನ್ನು ನೀಡಬೇಕಾಗುತ್ತದೆ ಎಂದರು.

ಯಾವ ಜಾತಿಯವರಿಗೂ ತೊಂದರೆಯಾಗದಂತೆ ಎಲ್ಲಾರಿಗೂ ಸಮ ಪಾಲು ಸಮಬಾಳು ಎಂಬ ವಾಕ್ಯದಂತೆ ನಾವು ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡುತ್ತದೆ ಎಂದರು.

ಒಳಮೀಸಲಾತಿ ಕುರಿತು ಮೊದಲ ಮೂರು ಸಚಿವ ಸಂಪುಟದ ಸಭೆಯಲ್ಲಿಯೂ ಮಹದೇವಪ್ಪ ಇದರ ಜಾರಿಯ ಕುರಿತು ದ್ವನಿಗೂಡಿಸಿದ್ದಾರೆ ಎಂದು ಹೇಳಿದರು.

ಹಂತ ಹಂತವಾಗಿ ಕಾನೂನಿನ ತೊಡಕು ಆಗದಂತೆ ವರದಿ ಪಡೆದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಸದನದಲ್ಲಿ ಚರ್ಚಿಸಿ ಇದನ್ನು ಅನುಷ್ಠಾನ ಮಾಡಬೇಕಾಗುತ್ತದೆ ಎಂದರು.

ಈ ರೀತಿಯಾಗಿ ಹಂತ ಹಂತವಾಗಿ ಮಾಡಬೇಕಾಗುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ತಾವು ತಾಳ್ಮೆಯಿಂದ ಇರಬೇಕು. ನಮ್ಮ ಸರ್ಕಾರ ಶತಾಯ ಗತಾಯ ಜಾರಿಗೊಳಿಸಲು ಬದ್ದವಾಗಿದೆ. ಯಾವುದೇ ಹೋರಾಟಗಳ ಅಗತ್ಯವಿಲ್ಲಾ ತಾವು ಶಾಂತವಾಗಿರಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಶ್ರೀ ಮಾದಾರ ಚನ್ನಯ್ಯಸ್ವಾಮೀಜಿ, ಆನಂದಮುನಿ‌ ಸ್ವಾಮೀಜಿ, ಸಚಿವರಾದ ಮಹದೇವಪ್ಪ, ಆರ್.ಬಿ.ತಿಮ್ಮಪುರ,ಸತೀಶ್ ಜಾರಕಿಹೋಳಿ,ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್,ಅರವಿಂದ್ ಬೆಲ್ಲದ್, ಸಂಸದ ಗೋವಿಂದ ಕಾರಜೋಳ,ಎ.ನಾರಾಯಣಸ್ವಾಮಿ ಹಾಗೂ ಶಾಸಕರು,ಸಮುದಾಯದ ಮುಖಂಡರು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *