ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.
ನಗರದ ನಿವೇದಿತಾ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಮತ್ತು ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಕಳೆಯುವ ಮಧುರ ಕ್ಷಣಗಳು ವಿದ್ಯೆಯೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಸುತ್ತವೆ ಎಂದರು.
ವಿದ್ಯಾರ್ಥಿಗಳು ಸಮಾಜದಿಂದ ಪಡೆದುಕೊಳ್ಳುವ ಋಣವನ್ನು, ಸಮಾಜಮುಖಿ ಸೇವಾಕಾರ್ಯಗಳ ಮೂಲಕ ಹಿಂತಿರುಗಿಸಬೇಕು. ಸಾಧಕರ ಜೀವನವೇ ವಿದ್ಯಾರ್ಥಿಗಳಿಗೆ ನೀತಿಪಾಠವಾಗುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶ್ರದ್ಧೆ, ನಿರ್ದಿಷ್ಟ ಗುರಿಯನ್ನು ಹೊಂದಿದ್ದರೆ ಯಶಸ್ಸುಗಳಿಸಲು ಸಾಧ್ಯ ಎಂದರು.
ನಿವೇದಿತಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಜಿ.ರಾಜಣ್ಣ ಮಾತನಾಡಿ, ಮನುಷ್ಯ ಗಳಿಸಿದ ಸಂಪತ್ತು ಶಾಶ್ವತವಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಗುರಿ, ಪರಿಶ್ರಮದೊಂದಿಗೆ ಗುರುವಿನ ಉತ್ತಮ ಮಾರ್ಗದರ್ಶನವು ಅಗತ್ಯವಾಗಿ ಬೇಕಾಗುತ್ತದೆ. ವಿದ್ಯಾವಂತರು ಯಾವ ಕಾಯಕವಾದರೂ ಸರಿ ಪ್ರಮಾಣಿಕತೆಯಿಂದ ನಿರ್ವಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಧನಲಕ್ಷ್ಮೀ, ಶಿಕ್ಷಕರುಗಳದ ಚೆಲುವರಾಜು, ನಾಗರಾಜ್, ಸೂರ್ಯನಾರಾಯಣ್, ಇಮ್ತಿಯಾಜ್ ಅಹ್ಮದ್, ಸುನಂದಮ್ಮ, ಲಕ್ಷ್ಮೀದೇವಮ್ಮ, ಪ್ರಮೀಳಾ, ಅಶ್ವತ್ಥನಾರಾಯಣ ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.