ಮಾರುಕಟ್ಟೆಯಲ್ಲಿ ನಿರಂತರವಾಗಿ ಕಳ್ಳತನ ಮಾಡುತಿದ್ದ ಚಾಲಕಿ ಕಳ್ಳನನ್ನು ಮಾಲು ಸಮೇತ ವಶಕ್ಕೆ ಪಡೆದು ಧರ್ಮದೇಟು ನೀಡಿದ ಘಟನೆ ವಿರಾಜಪೇಟೆ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.
ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಮರ (ತೋರ) ಗ್ರಾಮದ ನಿವಾಸಿಯಾದ ಸುರೇಶ್ (51) ಕಳ್ಳತನ ವೆಸಗಿ ವರ್ತಕರಿಂದ ಧರ್ಮದೇಟು ತಿಂದ ವ್ಯಕ್ತಿ.
*ಘಟನೆಯ ಸಾರ*…..
ಹಲವು ತಿಂಗಳುಗಳಿಂದ ವಿರಾಜಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ದವಾಗಿದ್ದ ಮಳಿಗೆ ಮಾಲೀಕರ ತರಕಾರಿ ಚೀಲಗಳು ಮಂಗಮಾಯವಾಗುತಿತ್ತು. ಅವು ಕಳ್ಳತನವಾಗಿದ್ದವು. 15 ದಿನಗಳ ಹಿಂದೆ 50 ಕೆ.ಜಿ. ಬೀಟ್ರೂಟ್ ಚೀಲ, ತಿಂಗಳ ಹಿಂದೆ 20 ಕೆ.ಜಿ.ತೂಕದ ಬೀನ್ಸ್ ಚೀಲ, 10 ದಿನಗಳ ಹಿಂದೆ. 10 ಕೆ.ಜಿ. ತೂಕದ ಹಾಗಲಕಾಯಿ ಚೀಲ ಕಳ್ಳತನವಾಗಿತ್ತು.
ನಿರಂತರ ಕಳ್ಳತನದಿಂದ ಮಾರುಕಟ್ಟೆಯ ವರ್ತಕರು ಕಂಗಾಲಾಗಿದ್ದರು. ತರಕಾರಿ ಮಾರುಕಟ್ಟೆಯ ಒಂದು ಅಂಚಿನಲ್ಲಿ ಒಣ ಮೀನು ಮಾರುಕಟ್ಟೆ ಇದೆ. ಈ ಬಾರಿ ತರಕಾರಿ ಬದಲು ಒಣ ಮೀನಿಗೆ ಕೈ ಹಾಕಿ ಸಿಲುಕಿ ಹಾಕಿಕೊಂಡಿದ್ದಾನೆ.
ಚಾಲಕಿ ಕಳ್ಳ ಸಂತೆಗೆ ಬಂದು ಮೀನು ಕಳ್ಳತನ ಮಾಡಲು ಹೊಂಚು ಹಾಕಿದ್ದಾನೆ. ಯಾರು ಇಲ್ಲದಿರುವುದನ್ನು ಗಮನಿಸಿ ಪ್ಲಾಸ್ಟಿಕ್ ಚೀಲ ಒಂದರಲ್ಲಿ ಬೆಲೆಬಾಳುವ ತೆರೆಂಡಿ ಮೀನುಗಳನ್ನು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಮುಂಜಾನೆ ಮಸೀದಿಗೆ ತೆರಳುವ ವ್ಯಕ್ತಿಯೊರ್ವರು ಮಾರುಕಟ್ಟೆಯಿಂದ ಅನಾಮಧೇಯ ವ್ಯಕ್ತಿ ಸಂಶಯಾಸ್ಪದವಾಗಿ ತೆರಳುತಿರುವುದನ್ನು ನೋಡಿದ್ದಾರೆ. ಮಾಹಿತಿ ಸ್ನೇಹಿತರಿಗೆ ತಿಳಿಸಿದ್ದಾರೆ. ವ್ಯಕ್ತಿಯನ್ನು ಹಿಂಬಾಲಿಸಿ ಮೂರ್ನಾಡು ರಸ್ತೆಯ ತಿರುವಿನಲ್ಲಿ ವ್ಯಕ್ತಿಯನ್ನು ಮಾಲು ಸಮೇತವಾಗಿ ಹಿಡಿದಿದ್ದಾರೆ.
ವ್ಯಕ್ತಿಯನ್ನು ಮಾರುಕಟ್ಟೆ ಎಳೆ ತಂದು ವಿಚಾರಣೆ ಮಾಡಿದ್ದಾರೆ. ಏಟು ತಿಂದ ವ್ಯಕ್ತಿ ಸಮೀರ್ ಎಂಬುವವರ ಒಣ ಮೀನು ಮಳಿಗೆಯಿಂದ ತೆರಂಡಿ ಮೀನು ಕಳ್ಳತನ ಮಾಡಿರಯವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.
ತೆರಂಡಿ ಮೀನು ಕೆ.ಜಿ. ಒಂದಕ್ಕೆ 450 ರೂ. ಬೆಲೆಯಾಗಿದ್ದು. ಸುಮಾರು 10 ಕೆ.ಜಿ. ಮೀನು ಕಳ್ಳತನ ಮಾಡಿ ಮಾರಾಟಕ್ಕೆ ತೆರಳುತಿದ್ದ ಎನ್ನಲಾಗಿದೆ.
ಇಂತಹ ಘಟನೆಗಳು ಹಲವು ಬಾರಿ ನಡೆದಿದೆ. ಇದೇ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದಲ್ಲಿ ಗಂಟೆಗಳು ಕಳೆದ ನಂತರ ಮನೆಗೆ ಸೇರುತ್ತಾನೆ. ಆದುದರಿಂದ ನಾವೇ ಅಲ್ಪ ಮಟ್ಟದ ಶಿಕ್ಷೆ ನೀಡಿ ಕಳಿಸಿದ್ದೇವೆ. ಇತನೀಗೆ ಕುಡಿತದ ಚಟವಿದ್ದು ಕುಡಿಯಲು ಹಣವಿಲ್ಲದಾಗ ಮಳಿಗೆಗೆ ಕನ್ನ ಹಾಕಿ ಮಾಲು ಮಾರಾಟ ಮಾಡಿ ಅಂದಿನ ಜೀವನ ಸಾಗಿಸುತ್ತಾನೆ ಎಂದು ವರ್ತಕರೋಬ್ಬರು ಹೇಳಿದ್ದಾರೆ.