ಒಟ್ಟು ತೆರಿಗೆ ಹಣ ದೇಶದ, ರಾಜ್ಯಗಳ ಸಮಗ್ರಾಭಿವೃದ್ಧಿಗೆ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು

ನಮ್ಮ ತೆರಿಗೆ ನಮ್ಮ ಹಕ್ಕು,

ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದ ಇಂದಿನ ತುರ್ತು ಅಗತ್ಯವಾಗಿದೆ…..

ಕೇಂದ್ರದ ತೆರಿಗೆ ವರಮಾನ ಹಂಚಿಕೆಯ ಕೆಲವು ಅಂಕಿ ಅಂಶಗಳನ್ನು ಗಮನಿಸಿದಾಗ ಒಂದಷ್ಟು ತಾರತಮ್ಯ ಮತ್ತು ಗೊಂದಲಗಳು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಸಾಮಾನ್ಯರು ಮಾತನಾಡಬಹುದಾದ ವಿಷಯವಲ್ಲ. ಆರ್ಥಿಕ ಮತ್ತು ಒಕ್ಕೂಟ ವ್ಯವಸ್ಥೆಯ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಒಂದಷ್ಟು ಅಧ್ಯಯನದ ಅವಶ್ಯಕತೆ ಇರುತ್ತದೆ. ಯಾವುದೋ ಪಕ್ಷದ ಸಿದ್ಧಾಂತದ ಅಡಿಯಲ್ಲಿ ಪರ ವಿರೋಧ ವ್ಯಕ್ತಪಡಿಸುವುದು ಅಷ್ಟೊಂದು ಸರಿಯಾದ ಕ್ರಮವಾಗುವುದಿಲ್ಲ…..

ನಿಜಕ್ಕೂ ಈ ದೇಶದ ಮತ್ತು ಈ ರಾಜ್ಯದ ನಿಷ್ಪಕ್ಷಪಾತ ಆರ್ಥಿಕ ತಜ್ಞರು ಅತ್ಯಂತ ಸ್ಪಷ್ಟವಾಗಿ, ಸಮಗ್ರ ಚಿಂತನೆಯ ನಂತರ ಈ ಕ್ಷಣದ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಒಂದು ಅಭಿಪ್ರಾಯ ನೀಡಬೇಕಾಗುತ್ತದೆ. ಈ ತೆರಿಗೆ ತಾರತಮ್ಯ ಕಳೆದ ಹತ್ತು ವರ್ಷಗಳಿಂದ ಆಗಿದೆಯೇ ಅಥವಾ ಜಿಎಸ್​ಟಿ ಬಂದ ನಂತರ ಆಗಿದೆಯೇ ಅಥವಾ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆಯೇ ಅಥವಾ ಎರಡು ರಾಜಕೀಯ ಪಕ್ಷಗಳ ದ್ವೇಷ ಕಾರಣಕ್ಕೆ ಸೃಷ್ಟಿಯಾಗಿದೆಯೇ ಅಥವಾ ಆ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಹಂಚಿಕೆ ಆಗುತ್ತಿದ್ದುದು ಈಗ ಪರಿಸ್ಥಿತಿ ಬದಲಾಗಿರುವ ಕಾರಣ ಈ ರೀತಿಯ ತಾರತಮ್ಯ ನೇರವಾಗಿ ಗೋಚರಿಸುತ್ತಿದೆಯೇ ಹೀಗೆ ಅನೇಕ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಕಂಡುಕೊಳ್ಳಬೇಕಿದೆ. ಏಕೆಂದರೆ ಈ ತೆರಿಗೆ ಹಂಚಿಕೆಯ ಅಸಮಾನತೆ ಕೇವಲ ಆರ್ಥಿಕ ವಿಷಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಒಕ್ಕೂಟ ವ್ಯವಸ್ಥೆಯ ಒಟ್ಟು ಹಿತಾಸಕ್ತಿಗೆ ಇದು ಅಪಾಯ ತಂದೊಡ್ಡಬಹುದು. ಅದರಲ್ಲೂ ಆರ್ಯ – ದ್ರಾವಿಡ ಭಿನ್ನತೆಗೆ ಮತ್ತಷ್ಟು ಬೆಂಕಿ ಹಚ್ಚಿ ವಿಭಜನಾತ್ಮಕ ಶಕ್ತಿಗಳಿಗೆ ನೀರೆರೆಯಬಹುದು. ಪ್ರಾದೇಶಿಕ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಬಹುದು ಮತ್ತು ಇದು ಮುಂದೆ ಬೇರೆ ಬೇರೆ ರೀತಿಯ ರಾಜಕೀಯ, ಸಾಂಸ್ಕೃತಿಕ ಆಯಾಮಗಳಿಗೆ ಹಬ್ಬಿ ಅಲ್ಲೂ ಸಹ ದೊಡ್ಡ ಮಟ್ಟದ ಉತ್ತರ, ದಕ್ಷಿಣ ಕಂದಕ ನಿರ್ಮಾಣವಾಗಬಹುದು….

ಏಕೆಂದರೆ ಕೇಂದ್ರ ಸರ್ಕಾರ ಬಿಜೆಪಿಯವರ ಸ್ವಂತ ಆಸ್ತಿಯಲ್ಲ, ಕರ್ನಾಟಕ ಸರ್ಕಾರ ಕಾಂಗ್ರೆಸ್ ನವರ ಸ್ವಂತ ಅಲ್ಲ. ಇಡೀ ದೇಶವು ಸರ್ಕಾರ ಯಾವುದೇ ಇರಲಿ ಪ್ರತಿಯೊಬ್ಬ ನಾಗರೀಕರಿಗೂ ಸಂಬಂಧಪಟ್ಟಿದ್ದು. ಯಾರದೋ ಪಕ್ಷದ ಹಿತಾಸಕ್ತಿಗೆ ಅಥವಾ ಇನ್ಯಾರೋ ಪಕ್ಷದ ವೈಯಕ್ತಿಕ ದ್ವೇಷ ಅಸೂಯೆಗೆ ಸಾಮಾನ್ಯ ಜನ ಮತ್ತು ವ್ಯವಸ್ಥೆ ಬಲಿಯಾಗಬಾರದು…..

ಕೇಂದ್ರ ಸರ್ಕಾರವೂ ಸಾಮಾನ್ಯ ಜನಗಳದೇ, ರಾಜ್ಯ ಸರ್ಕಾರವು ಸಾಮಾನ್ಯ ಜನಗಳದೇ. ಆ ಎರಡೂ ವ್ಯವಸ್ಥೆಗಳು ಒಬ್ಬರಿಗೊಬ್ಬರು ಕಿತ್ತಾಡುವುದೇ ಅತ್ಯಂತ ನಾಚಿಕೆಗೇಡಿನ ವಿಷಯ ಮತ್ತು ಅಸಂವಿಧಾನಿಕ ನಡವಳಿಕೆ. ಏಕೆಂದರೆ ಈ ದೇಶದಲ್ಲಿ ಒಂದು ಸ್ಪಷ್ಟವಾದ ಸಂವಿಧಾನವಿದೆ. ಅದರ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಧಿಕಾರಿಗಳಿದ್ದಾರೆ, ನ್ಯಾಯಾಂಗ ವ್ಯವಸ್ಥೆ ಇದೆ, ಆರ್ಥಿಕ ತಜ್ಞರಿದ್ದಾರೆ ಮತ್ತು ಸರ್ಕಾರದ ಹಣ ಸಾಮಾನ್ಯ ಜನರ ತೆರಿಗೆಯಿಂದ ಸಂಗ್ರಹವಾದದ್ದು. ಅದರಲ್ಲಿ ಕೇಂದ್ರ, ರಾಜ್ಯ ಎನ್ನುವ ವ್ಯತ್ಯಾಸವೇಕೆ.
ಒಟ್ಟು ತೆರಿಗೆ ಹಣ ದೇಶದ, ರಾಜ್ಯಗಳ ಸಮಗ್ರಾಭಿವೃದ್ಧಿಗೆ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು. ಆ ವೈಜ್ಞಾನಿಕತೆ ಸಮಗ್ರ ದೃಷ್ಟಿಕೋನವನ್ನು ಹೊಂದಿರಬೇಕು……

ಕೇವಲ ಬಡತನ ಅಥವಾ ಜನಸಂಖ್ಯೆ ಅಥವಾ ಪ್ರದೇಶದ ಆಧಾರಿತವಾಗಿರಬಾರದು. ಅದು ಒಟ್ಟು ಸಾಂಸ್ಕೃತಿಕ ಸಮಗ್ರತೆ, ಶ್ರಮ ಸಂಸ್ಕೃತಿ, ದಕ್ಷತೆ ಮುಂತಾದ ಅಂಶಗಳನ್ನು ಸಹ ಹೊಂದಿರಬೇಕಾಗುತ್ತದೆ. ಹಿಂದೆ ಅನೇಕ ಕಾರಣಗಳಿಂದ ವೈಜ್ಞಾನಿಕ ಮಾಹಿತಿ, ಡಾಟಾ ಕೊರತೆಯಿಂದ ಹಂಚಿಕೆಯಲ್ಲಿ ಅಸಮಾನತೆ ಇದ್ದಿರಬಹುದು. ಆದರೆ ಈಗ ಅತ್ಯಂತ ಆಧುನಿಕ ತಂತ್ರಜ್ಞಾನದ ಮೂಲಕ ಎಲ್ಲ ರೀತಿಯ ವಿಶ್ಲೇಷಣೆಗೂ ಒಳಪಡಿಸಬಹುದು. ಆ ಮೂಲಕ ಇಡೀ ತೆರಿಗೆ ವರಮಾನ ಹಂಚಿಕೆಯನ್ನು ಅತ್ಯಂತ ಕ್ರಮಬದ್ಧವಾಗಿ, ನ್ಯಾಯಯುತವಾಗಿ ಮಾಡಬಹುದು…

ಈಗ ಹಣಕಾಸು ಆಯೋಗ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬುದು ನಿಜ. ಆದರೆ ಅದು ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕೋ ಏನೋ ತುಂಬಾ ವಿವಾದಾತ್ಮಕವಾಗುತ್ತಿರುವುದರಿಂದ ಈಗ ಒಂದು ಕ್ರಮಬದ್ಧ ಹಂಚಿಕೆಯ ಸೂತ್ರವನ್ನು ರೂಪಿಸಬೇಕಾಗಿದೆ. ಸಾಧ್ಯವಾದರೆ ಅಂತರಾಷ್ಟ್ರೀಯ ಆರ್ಥಿಕ ತಜ್ಞರ ಸಹಾಯವನ್ನೂ ಪಡೆಯಬಹುದು…..

ಏಕೆಂದರೆ ಹಣ ಕೇಂದ್ರೀಕೃತ ಈ ವ್ಯವಸ್ಥೆಯಲ್ಲಿ ಹಣದ ಅಸಮಾನ ಹಂಚಿಕೆ ನಮ್ಮೊಳಗಿನ ಭಿನ್ನಾಭಿಪ್ರಾಯ ಮತ್ತು ಪ್ರಾದೇಶಿಕ ಮನೋಭಾವವನ್ನು ಹೆಚ್ಚು ಮಾಡುತ್ತಿದೆ. ಅದಕ್ಕೆ ಹಿನ್ನೆಲೆಯಲ್ಲಿ ಏನೇ ಇರಬಹುದು ಆದರೆ ಮೇಲ್ನೋಟದ ತಾರತಮ್ಯ ಕಣ್ಣಿಗೆ ಎದ್ದು ಕಾಣುತ್ತಿದೆ…..

ಒಂದು ದೇಶ ಒಂದು ತೆರಿಗೆ ಎಂಬ ಜಿಎಸ್‌ಟಿ ಅನುಷ್ಠಾನವಾಗಿರುವ ಕಾರಣ ದೇಶದ ಒಟ್ಟು ಆದಾಯವನ್ನು ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ದೃಷ್ಟಿಕೋನದಿಂದ ಹಿಂದುಳಿದಿರುವಿಕೆಯ ಆಧಾರದ ಮೇಲೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಅತ್ಯಂತ ಹೆಚ್ಚು ಹಣವನ್ನು ನ್ಯಾಯ ಬದ್ಧವಾಗಿಯೇ ನೀಡುತ್ತಿದ್ದೇವೆ, ದಕ್ಷಿಣದ ರಾಜ್ಯಗಳು ಅಭಿವೃದ್ಧಿ ಹೊಂದಿರುವುದರಿಂದ ಅದಕ್ಕೆ ಕಡಿಮೆ ವರಮಾನವನ್ನು ನೀಡುತ್ತಿದ್ದೇವೆ ಎಂಬ ಕೇಂದ್ರದ ಒಂದು ಲೆಕ್ಕಾಚಾರ, ಹಾಗೆಯೇ ದಕ್ಷಿಣದ ಕೆಲವು ರಾಜ್ಯಗಳು ಅತ್ಯಧಿಕ ತೆರಿಗೆ ಕೊಡುತ್ತಿರುವುದರಿಂದ ನಮ್ಮ ಪಾಲಿನಲ್ಲಿ ಗಣನೀಯ ಇಳಿಕೆಯಾಗಿದೆ ಎಂಬ ರಾಜ್ಯಗಳ ದೊಡ್ಡ ಧ್ವನಿಯ ಕೂಗು, ಅದಕ್ಕೆ ಪೂರಕವಾಗಿ ಮತ್ತು ವಿರುದ್ಧವಾಗಿ ಇನ್ನೊಂದಷ್ಟು ರಾಜಕೀಯ, ಆರ್ಥಿಕ ಕಾರಣಗಳನ್ನು ಸರ್ಕಾರಗಳು ಮುಂದಿಡುತ್ತಿವೆ…..

ಮೊದಲೇ ಹೇಳಿದಂತೆ ಇದನ್ನು ಜನಸಾಮಾನ್ಯರಾದ ನಾವುಗಳು ಅಷ್ಟು ಸುಲಭವಾಗಿ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಏಕೆಂದರೆ ಕೊಡುವ, ಹಂಚುವ ಜಾಗದಲ್ಲಿ ಅವರಿದ್ದಾರೆ. ಆದ್ದರಿಂದ ಯಾವ ಕಾರಣಕ್ಕೂ ಇದನ್ನು ನಿರ್ಲಕ್ಷಿಸದೆ ನಮ್ಮ ತೆರಿಗೆ ನಮ್ಮ ಹಕ್ಕು ಆಂದೋಲನ ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿ ದೊಡ್ಡದಾಗುವ ಮುನ್ನ ಪ್ರಧಾನ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳು ಏನನ್ನಾದರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ಅನಿವಾರ್ಯತೆ ಉಂಟಾಗಿದೆ……

ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆ ಖಂಡಿತ ಅಪಾಯದ ಹಂಚಿಗೆ ತಲುಪಬಹುದು. ಒಂದು ಅತ್ಯುತ್ತಮ ಮತ್ತು ಸಮರ್ಪಕ ಸಂತಾನ ಸೂತ್ರ ಸಿದ್ಧವಾಗಲೇ ಬೇಕಿದೆ. ಇದನ್ನು ಬಹಳ ದಿನ ಮುಂದೂಡಲು ಆಗುವುದಿಲ್ಲ. ದ್ವೇಷ ಅಸೂಯೆಗಳು ರಾಜ್ಯ ಮತ್ತು ಕೇಂದ್ರದ ನಡುವೆ ಸೃಷ್ಟಿಯಾದರೆ ಅದನ್ನು ತಡೆಯುವುದು ಕಷ್ಟ. ಈಗಾಗಲೇ ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಮತ್ತೆ ಹೇಳಬೇಕೆಂದರೆ ಸರಿ ತಪ್ಪುಗಳು ಇನ್ನೂ ಸ್ಪಷ್ಟವಾಗಿಲ್ಲ. ಸುಮ್ಮನೆ ಕೇಂದ್ರದ ಮತ್ತು ರಾಜ್ಯದ ರಾಜಕಾರಣಿಗಳು ನಮ್ಮದೇ ಸರಿ ಎನ್ನುತ್ತಿದ್ದಾರೆ. ಆದರೆ ನಿಜವಾದ ಸರಿ ಎಲ್ಲೋ ಅಡಗಿದೆ. ಅದನ್ನು ನಿಷ್ಪಕ್ಷಪಾತ ಅಧಿಕಾರಿಗಳು ಮಾತ್ರ ಗುರುತಿಸಬಲ್ಲರು. ಈ ಬಗ್ಗೆ ಆದಷ್ಟು ಬೇಗ ಒಂದು ಹೊಸ ಅಧ್ಯಯನ ಸಮಿತಿ ರಚನೆಯಾಗಲಿ ಎಂದು ಆಗ್ರಹಿಸುತ್ತಾ, ಮನವಿ ಮಾಡಿಕೊಳ್ಳುತ್ತಾ, ಜನ ಅಭಿಪ್ರಾಯಗೊಳ್ಳಲಿ ಎಂದು ಆಶಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *