ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಾಗುವುದು: ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್

ಪ್ರತಿ ರಾಜ್ಯಗಳ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವೇಳೆ ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ, ಸಾಮಾಜಿಕ ನ್ಯಾಯದೊಂದಿಗೆ ಅಭ್ಯರ್ಥಿಗಳನ್ನು ಅಖೈರು ಮಾಡುವ ಬಿಜೆಪಿ. ಈ ಬಾರಿ ದೇಶಕ್ಕೆ ಕರ್ನಾಟಕ ಮಾಡೆಲ್ ರೀತಿಯಲ್ಲಿ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿದೆ ಎಂದು ಕ್ಷೇತ್ರದ ಅಭ್ಯರ್ಥಿ ಧೀರಜ್ ಮುನಿರಾಜು ತಿಳಿಸಿದರು.

ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಾರಿ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷದ ವರಿಷ್ಠರು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಪಕ್ಷದ ಸಂಸದೀಯ ಮಂಡಳಿಗೆ ಧನ್ಯವಾದ. ಕಾರ್ಯಕರ್ತರೆ ಸೃಷ್ಟಿ ಮಾಡಿದ ಅಭ್ಯರ್ಥಿಯಾಗಿ ನಾನು ಆಯ್ಕೆಯಾಗಿದ್ದೇನೆ.

ಶೀಘ್ರವಾಗಿ ಚುನಾವಣಾ ಕಚೇರಿಯನ್ನ ತೆರೆದು ಪ್ರಚಾರ ಆರಂಭ ಮಾಡಲಿದ್ದೇವೆ. ಈಗಾಗಲೇ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಮೂಲಕ ಪಕ್ಷಕ್ಕೆ ಶಕ್ತಿ ಬಂದಿದೆ. ಒಂದೊಂದು ಬೂತ್ ಗೆ 36 ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು. ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸಹಿತ
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದರು.

ಟಿಕೆಟ್ ವಂಚಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು:

ಕೇಂದ್ರ ಮತ್ತು ರಾಜ್ಯದ ನಾಯಕರು
ವ್ಯವಸ್ಥಿತವಾಗಿ ಟಿಕೆಟ್ ಘೋಷಣೆ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ 6ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ಸಹಜವಾಗಿ ಟಿಕೆಟ್ ವಂಚಿತರಿಗೆ ನೋವಾಗಿದೆ. ಈ ಬಗ್ಗೆ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರು ಸಮ್ಮುಖದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಾಗುವುದು ಎಂದರು.

ಹಾಲಿ ಶಾಸಕರ 10 ವರ್ಷದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಿ, ಕೆಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು, ಯೋಜನೆಗಳನ್ನು ಜನರಿಗೆ ತಿಳಿಸಿ ಮತಯಾಚನೆ ಮಾಡಲಾಗುವುದು.
ದೊಡ್ಡಬಳ್ಳಾಪುರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ಹಿರಿಯ ನಾಯಕ ಕೆಎಂ ಹನುಮಂತರಾಯಪ್ಪ ಮಾತನಾಡಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿರುವ ನಾಯಕರನ್ನು ಬೃಹತ್ ಸಮಾರಂಭದ ಮೂಲಕ ಅದ್ಧೂರಿಯಾಗಿ ಸ್ವಾಗತ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ಸಿ ನಾರಾಯಣಸ್ವಾಮಿ, ನಗರಾಧ್ಯಕ್ಷ ಶಿವಶಂಕರ್, ಪದಾಧಿಕಾರಿಗಳಾದ ಪುಷ್ಪಶಿವಶಂಕರ್, ಗೋಪಿನಾಥ್, ನಾರಾಯಣಶರ್ಮ, ಆನಂದ್ ಮೂರ್ತಿ, ರಾಮಕಿಟ್ಟಿ, ನಾಗೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *