ಒಂದು ವಾರದೊಳಗೆ ರೈತರ ಬೇಡಿಕೆ ಈಡೇರಿಸಿ- ಬೇಡಿಕೆ ಈಡೇರದಿದ್ದರೆ ಆಶ್ವಾಸನೆ ಕೊಟ್ಟವರ ಮಾನ ಮರ್ಯಾದೆ ಹರಾಜು ಹಾಕುತ್ತೇವೆ- ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಕೆಎಂಎಫ್ ‌ನಿರ್ದೇಶಕ ಬಿ.ಸಿ ಆನಂದ್ ಕುಮಾರ್

ರೈತರ ಉಪಕಸುಬಾದ ಹೈನುಗಾರಿಕೆ ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ಬಹಳ ಗಟ್ಟಿಯಾಗಿ ಬೇರೂರಿತ್ತು. ಆದರೆ ಇದೀಗ ಸರ್ಕಾರದ ಬೇಜವ್ದಾರಿ ಧೋರಣೆಯಿಂದ ರೈತರು ಹೈನುಗಾರಿಕೆ ಬಿಟ್ಟು ಬೇರೆ ಕೆಲಸ‌ ನೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಎಂಎಫ್ ‌ಹಾಗೂ ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ಹೇಳಿದರು.

ನಗರದ ಹಾಲಿನ ಡೈರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಎಲ್ಲಾ ಕ್ಷೇತ್ರಗಳಿಂದ ರೈತರಿಗೆ ಹೊಡೆತ ಬೀಳುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ರೈತರಲ್ಲಿ ಒಗ್ಗಟ್ಟು ಇಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ರೈತರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ನಮಗೆ ಸರ್ಕಾರದ ಯೋಜನಾ ಸವಲತ್ತುಗಳು ಬೇಕೆಂದರೆ ಮೊದಲು ನಾವು ಒಗ್ಗಟ್ಟಾಗಬೇಕು‌. ರೈತರಲ್ಲಿ ಒಗ್ಗಟ್ಟು ಇದ್ದರೆ ಯಾರು ಏನು ಮಾಡೋದಕ್ಕೆ ಆಗಲ್ಲ. ಸಾಲ ಸೋಲ ಮಾಡಿ ರೈತರು ಹಸುಗಳನ್ನು ಖರೀದಿಸಿ ದುಬಾರಿ ಬೆಲೆಗೆ ಇಂಡಿ, ಬೂಸ ಮತ್ತು ಪಶು ಆಹಾರಗಳನ್ನು ಖರೀದಿಸಿ ಪುಕ್ಕಟ್ಟೆ ಹಾಲು ನೀಡಿದಂತೆಯಾಗಿದೆ ಎಂದರು.

ಹಾಲಿನ ಖರೀದಿ ದರ ಹೆಚ್ಚಿಸಬೇಕು, ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಸರ್ಕಾರ ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 5 ರೂ. ರಿಂದ 10 ರೂ.ಗೆ ಹೆಚ್ಚಿಸಬೇಕು.‌ ರೈತ ಸ್ನೇಹಿ ಯೋಜನೆಗಳನ್ನು ಜಾರಿ‌ ಮಾಡಿದರೆ ರೈತ ಕುಟುಂಬದ ಜೀವನ‌ ಹಸನಾಗುತ್ತದೆ. ಸರ್ಕಾರದ ಬಳಿ ಕೈಚಾಚೋದು ತಪ್ಪುತ್ತದೆ. ಒಂದು ವಾರದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಶ್ವಾಸನೆ ಕೊಟ್ಟವರ ಮಾನ ಮರ್ಯಾದೆಯನ್ನು ಸಾರ್ವಜನಿಕವಾಗಿ ಹರಾಜು ಹಾಕುತ್ತೇವೆ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಗ್ಯಾರೆಂಟಿ ಯೋಜನೆಗಳು ಜನರ ಸ್ವಾವಲಂಬಿ ಬದುಕಿಗೆ ಪೆಟ್ಟು ನೀಡುತ್ತಿವೆ. ಇನ್ನೊಂದು ವಾರದೊಳಗೆ ಹೊಸ ದರ ಬಂದಿಲ್ಲ ಅಂದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ದರವನ್ನು ನಿಗದಿ‌ ಮಾಡಬೇಕು. ರೈತರು ಸರಬರಾಜು ಮಾಡುವ ಪ್ರತೀ ಲೀಟರ್ ಹಾಲಿಗೆ ಕನಿಷ್ಠ 50 ರೂ ನಿಗದಿಪಡಿಸಬೇಕು. ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಿ ಮತ್ತು ಹೆಚ್ಚಿನ ಸಹಾಯಧನ ನೀಡಬೇಕು, ಬಳಸುವ ಜೋಳವನ್ನು ರೈತರಿಂದಲೇ ಖರೀದಿಸಬೇಕು. ಸ್ಥಳೀಯ ಹಾಲು ಮಾರಾಟಕ್ಕೆ ವಿಧಿಸುವ ಲೇವಿಯನ್ನು ರದ್ದುಗೊಳಿಸಬೇಕು. ಸರ್ಕಾರ ನೀಡುವ ಪ್ರೋತ್ಸಹ ಧನ 5 ರೂಪಾಯಿಂದ 10 ರೂಪಾಯಿಗೆ ಹೆಚ್ಚಿಸಬೇಕು. ಹಾಲಿನ ಬೆಲೆ ನಿಗದಿಯಲ್ಲಿ ಒಕ್ಕೂಟಗಳು ಸ್ವತಂತ್ರವಾಗಿರಬೇಕು, ಗರಿಷ್ಠ ವೇತನ ಮಿತಿ ನಿಯಮ ಜಾರಿಗೆ ತರಬೇಕು. ಸಂಸ್ಥೆಯ ನೇಮಕಾತಿಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಮಾತ್ರ ಸಿಮಿತವಾಗಿರಬೇಕು. ಸ್ಥಳೀಯ ಪ್ರಾಥಮಿಕ ಸಹಕಾರಿ ಸಂಘಗಳ ನೌಕರರನ್ನು ಒಕ್ಕೂಟದ ನೌಕರರೆಂದು ಪರಿಗಣಿಸಬೇಕು ಎಂದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ದೇವರಾಜ್, ರೈತ ಮುಖಂಡ ವಾಸು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *