ಒಂದು ಅಪಘಾತ……..

ನಿನ್ನೆ ಒಂದು ಅಪಘಾತವಾದ ಸುದ್ದಿ ತಿಳಿಯಿತು. ಅದರಲ್ಲಿ 40 ವರ್ಷದ ಗಂಡ ಮತ್ತು ಆತನ 35 ವರ್ಷದ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರಿಗೆ ಐದು, ಏಳು ಮತ್ತು ಹತ್ತು ವರ್ಷದ ಮೂವರು ಮಕ್ಕಳಿದ್ದಾರೆ. ಬೇರೆ ಊರಿನಿಂದ ಬೆಂಗಳೂರಿಗೆ ಬಂದು ಬಟ್ಟೆ ಅಂಗಡಿ ಇಟ್ಟುಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬವದು.

ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ ನೋಡಿ, 5, 7 ಮತ್ತು 10 ವರ್ಷದ ಗಂಡು-ಹೆಣ್ಣು ಮಕ್ಕಳು ಮನೆಯಲ್ಲಿ ಶಾಲಾ ಪುಸ್ತಕ ಓದುತ್ತಲೋ, ಟಿವಿ ನೋಡುತ್ತಲೋ, ಆಟವಾಡುತ್ತಲೋ ತಮ್ಮ ಅಪ್ಪ ಅಮ್ಮ ರಾತ್ರಿ ಮನೆಗೆ ಬರುತ್ತಾರೆ ಎಂದು ನಿರೀಕ್ಷಿಸುತ್ತಾ ಅವರದೇ ಲೋಕದಲ್ಲಿ ಮುಳುಗಿರುತ್ತಾರೆ. ಕೆಲವರು ಮೊಬೈಲಿನಲ್ಲಿ ಆಟವಾಡುತ್ತಿರುತ್ತಾರೆ,
ಕೆಲವರು ಟ್ಯೂಷನ್ ಗೂ ಹೋಗಿರಬಹುದು. ಒಟ್ಟಿನಲ್ಲಿ ಅಪ್ಪ-ಅಮ್ಮನನ್ನು ಮೊಬೈಲಿನಲ್ಲಿ ಸಂಪರ್ಕಿಸುತ್ತಾ ಅವರ ನಿರೀಕ್ಷೆಯಲ್ಲಿ ಇರುತ್ತಾರೆ.

ಆಗ ಇದ್ದಕ್ಕಿದ್ದಂತೆ ಅವರಿಗೆ ಪೊಲೀಸರು ಮೂಲಕವೋ ಅಥವಾ ಅವರ ನೆಂಟರಿಷ್ಟರ ಮೂಲಕವೇ ಅಥವಾ ಯಾರಾದರೂ ನೇರವಾಗಿಯೋ ಅಥವಾ ಮೊಬೈಲ್ ಮುಖಾಂತರವೋ ಅವರ ಅಪ್ಪ ಅಮ್ಮ ಇಬ್ಬರೂ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತದೆ.

ಊಹಿಸಿಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ಅದು. ಐದು, ಏಳು, ಹತ್ತು ವರ್ಷದ ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳು ಉಂಟಾಗುತ್ತದೆ ಎನ್ನುವುದು ಅಕ್ಷರಗಳಿಗೆ ನಿಲುಕುವುದಿಲ್ಲ. ಜೊತೆಗೆ ಅವರಿಗೆ ಆ ಕ್ಷಣದಲ್ಲಿ ದುಃಖ, ಆತಂಕ ಹೊರತುಪಡಿಸಿ ಮುಂದಿನ ಭವಿಷ್ಯದ ಯೋಚನೆಗಳು ಹೊಳೆಯುವುದಿಲ್ಲ. ಅವರ ಸುತ್ತಮುತ್ತಲಿನವರ ಪ್ರತಿಕ್ರಿಯೆಗಳನ್ನು ಗಮನಿಸಿ ಏನೇನೋ ಭಾವನೆಗಳು ಸಂಘರ್ಷದಲ್ಲಿ ತೊಡಗಿರುತ್ತವೆ.

ನಾಳೆಯಿಂದ ನನಗೆ ಊಟ ಕೊಡಲು ಅಮ್ಮ ಇಲ್ಲ, ನಾಳೆಯಿಂದ ನನ್ನನ್ನು ಎಚ್ಚರಿಸಲು, ಮುದ್ದು ಮಾಡಲು ಅಪ್ಪ ಇಲ್ಲ, ನಾಳೆಯಿಂದ ನನಗೇನಾದರೂ ಖುಷಿಯಾದರೆ ಅಥವಾ ಸಂಕಟವಾದರೆ ಹೇಳಿಕೊಳ್ಳಲು ಅಪ್ಪ ಅಮ್ಮ ಇಬ್ಬರೂ ಇಲ್ಲ ಎನ್ನುವ ಭಾವನೆ ಆ ಕ್ಷಣದಲ್ಲಿ ಅವರಿಗೆ ಹೊಳೆದಿರುವುದಿಲ್ಲ. ಏಕೆಂದರೆ ಘಟನೆಗಳು ತೀವ್ರವಾಗಿ ಮತ್ತು ವೇಗವಾಗಿ ನಡೆಯುತ್ತಿರುತ್ತದೆ.

ಇದು ಒಂದು ಹಂತದ ನೋವಿನ ಕ್ಷಣಗಳಾದರೆ ಅಪ್ಪ ಅಮ್ಮನ ಮೃತ ದೇಹಗಳನ್ನು ನೋಡಿದಾಗ ಆ ನಿಸ್ತೇಜಿತವಾದ ದೇಹ ಪ್ರತಿಕ್ರಿಯೆ ಕೊಡದೇ ಇದ್ದಾಗ, ಆ ನಿಸ್ತೇಜಿತ ದೇಹಗಳನ್ನು ಹೂಳುವಾಗ ಅಥವಾ ಸುಡುವಾಗ ಅದಕ್ಕೆ ಹೊರಗಿನ ಪ್ರಪಂಚ ಪ್ರತಿಕ್ರಿಯಿಸುವ ರೀತಿಯನ್ನು ಕಂಡಾಗ ಆ ಮೂವರು ಅಕ್ಕ ತಂಗಿ ಅಣ್ಣನ ಮನಸ್ಸಿನಲ್ಲಿ ಉಂಟಾಗಬಹುದಾದ ಭಾವನೆಗಳು ಏನೋ ಎಂತೋ. ಇದು ಎರಡನೆಯ ಹಂತವಾದರೆ ಮೂರನೆಯ ಹಂತದಲ್ಲಿ ಈ ಎಲ್ಲಾ ಕಾರ್ಯಗಳು ಮುಗಿದ ನಂತರ ಅವರ ಹತ್ತಿರದ ಬಂಧುಗಳು, ಹಿತೈಷಿಗಳು ಇವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ.

ಸತ್ತವರ ತಂದೆ ತಾಯಿಗಳು ಅವರ ಇತರ ರಕ್ತ ಸಂಬಂಧಿಗಳ ಜೊತೆ ಯಾವ ರೀತಿಯ ಸಂಪರ್ಕಗಳನ್ನು ಹೊಂದಿದ್ದರು, ಅವರೊಂದಿಗೆ ಉತ್ತಮ ಒಡನಾಟವಿತ್ತೋ ಅಥವಾ ಸಂಘರ್ಷವಿತ್ತೋ, ಆ ದಂಪತಿ ನಿಜಕ್ಕೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೋ, ಸಾಧಾರಣ ಸ್ಥಿತಿಯಲ್ಲಿದ್ದರೋ, ಸಾಲಗಾರರಾಗಿದ್ದರೋ ಈಗಷ್ಟೇ ಗೊತ್ತಾಗುವ ವಿಷಯ. ಅವರ ಬ್ಯಾಂಕಿನ ಅಕೌಂಟಿನಲ್ಲಿ ಎಷ್ಟು ಹಣವಿತ್ತೋ, ಇವರು ಯಾರಿಗೆ ಕೊಡಬೇಕಿತ್ತೋ, ಇವರಿಗೆ ಇನ್ಯಾರು ಕೊಡಬೇಕಿತ್ತೋ ಅದೆಲ್ಲವೂ ಮತ್ತೊಂದು ಹಂತ‌.

ಮುಂದಿನ ಹಂತದಲ್ಲಿ ಈ ಮಕ್ಕಳ ಭವಿಷ್ಯ. ಮುಖ್ಯವಾಗಿ ಈಗಿರುವ ಹಂತದಿಂದ ಮುಂದುವರಿಯಬೇಕಾದ ಶಿಕ್ಷಣ ಬಹುದೊಡ್ಡ ಸವಾಲನ್ನು ಒಡ್ಡುತ್ತದೆ. ಏಕೆಂದರೆ 5, 7 ಮತ್ತು 10 ರ ಮಕ್ಕಳಿಗೆ ಈಗಿನ ಕಾಲದಲ್ಲಿ ಬಹುತೇಕ ಖಾಸಗಿ ಶಾಲೆಯಲ್ಲಿ ಓದಿಸುತ್ತಿರುವುದರಿಂದ ಆ ಶಾಲೆಯ ಫೀಸನ್ನು ತುಂಬಬೇಕಾಗುತ್ತದೆ. ಜೊತೆಗೆ ಮತ್ತೆ ಮುಂದಿನ ವರ್ಷವೂ ಇದನ್ನು ನಿರಂತರವಾಗಿ ಕಟ್ಟಬೇಕಾಗುತ್ತದೆ. ಸ್ವಂತ ಮಕ್ಕಳಿಗೆ ಕಟ್ಟುವುದೇ ತುಂಬಾ ಕಷ್ಟವಾಗಿರುವಾಗ ಇವರ ದುಡ್ಡು ಕಟ್ಟುವವರು ಯಾರು ? ಮನೆಯ ಬಾಡಿಗೆ ಕಟ್ಟುವರಾರು ಹಾಗೂ ನಾಳೆಯಿಂದ ಇವರಿಗೆ ಊಟವನ್ನು ನೀಡುವವರು ಯಾರು ?

ಏಕೆಂದರೆ ಮೂವರು ಪುಟ್ಟ ಮಕ್ಕಳು. ನಗರೀಕರಣದ ಪ್ರಭಾವದಿಂದ ಬಹುತೇಕ ಎಲ್ಲರ ಬದುಕು ವೇಗ ಮತ್ತು ಸ್ಪರ್ಧೆಯಿಂದಾಗಿ ಯಾರನ್ನು ಯಾರೂ ವಿಚಾರಿಸಿಕೊಳ್ಳುವ, ಕೇರ್ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಪ್ರಾರಂಭದಲ್ಲಿ ಒಂದಷ್ಟು ಸಹಾಯ ಮಾಡಬಹುದೇ ಹೊರತು ಬೇರೆಯವರ ಮಕ್ಕಳಿಗೆ ನಿರಂತರವಾಗಿ ಪೋಷಕರಾಗಲು ಸಾಧ್ಯವಿಲ್ಲ.

ಈ ಹಂತ ದಾಟಿದ ನಂತರ ಆ ಮಕ್ಕಳ ಸ್ವಭಾವ ಏನಿದೆಯೋ ಏನೋ. ಅಪ್ಪ ಅಮ್ಮ ಆಗಿದ್ದರೆ ಮಕ್ಕಳ ಎಲ್ಲಾ ಸ್ವಭಾವಗಳನ್ನು ಸಹಿಸಿಕೊಳ್ಳುತ್ತಾರೆ. ಕೆಟ್ಟ ಸ್ವಭಾವವೂ ಒಳ್ಳೆಯದಾಗೆ ಕಾಣುತ್ತದೆ. ಆದರೆ ಇತರರಿಗೆ ಅವರ ಒಳ್ಳೆಯ ಸ್ವಭಾವವೂ ಕೆಟ್ಟದಾಗಿ ಕಾಣುವ ಸಾಧ್ಯತೆಯೇ ಹೆಚ್ಚು. ಈ ಮಕ್ಕಳನ್ನು ಪೋಷಿಸುವವರ ಗುಣ, ನಡತೆ ಸ್ವಭಾವ ಹೇಗಿರುತ್ತದೋ ಏನೋ. ಅದು ಇನ್ನೊಂದು ಸವಾಲನ್ನು ಒಡ್ಡುತ್ತದೆ.

ಇವರು ಅನಾಥ ಮಕ್ಕಳೆಂದು ತಿಳಿದ ಮೇಲೆ ಈ ಸಮಾಜ ಇವರುಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ? ಇದು ಎಲ್ಲರಿಗೂ ತಿಳಿದ ವಿಚಾರವೇ. ಕೆಲವು ಪಾಶ್ಚಾತ್ಯ, ಮುಂದುವರಿದ ದೇಶಗಳಲ್ಲಿ ಅನಾಥ ಮಕ್ಕಳನ್ನು ಅತ್ಯಂತ ಗೌರವ, ಪ್ರೀತಿ, ಅಭಿಮಾನ, ಜವಾಬ್ದಾರಿಯಿಂದ ನಡೆಸಿಕೊಳ್ಳಲಾಗುತ್ತದೆಯಂತೆ. ಆದರೆ ಭಾರತದಲ್ಲಿ ಖಂಡಿತವಾಗಲೂ ಆ ಪರಿಸ್ಥಿತಿ ಇಲ್ಲ. ಅಸಹಾಯಕರು, ಅಮಾಯಕರು, ಗತಿ ಇಲ್ಲದ ಅನಾಥರು ಎಂದು ಅರ್ಥವಾದ ಮೇಲೆ ಬಹುತೇಕ ಅವರನ್ನು ದುರುಪಯೋಗಪಡಿಸಿಕೊಳ್ಳುವುದೇ ಹೆಚ್ಚು. ಅದನ್ನು ಭಾರತದ ಎಲ್ಲಾ ಭಾಷೆಯ ಚಲನಚಿತ್ರಗಳಲ್ಲಿ ನೀವು ಗಮನಿಸಿರಬಹುದು.

ಈಗ ಮುಂದಿನ ಹಂತದಲ್ಲಿ ಆ ಮಕ್ಕಳು ಒಟ್ಟಿಗೆ ಇರುತ್ತಾರೋ, ಬೇರೆ ಬೇರೆ ಮಾಡುತ್ತಾರೋ, ಯಾವ ಮಗು ಶಾಲೆಗೆ ಹೋಗುತ್ತದೋ, ಇನ್ಯಾವ ಮಗು ಕೆಲಸಕ್ಕೆ ಹೋಗುತ್ತದೋ ಬಲ್ಲವರಾರು. ಅವರಿಗೆ ತುಂಬಾ ಆತ್ಮೀಯ ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವ, ಅಜ್ಜ, ಅಜ್ಜಿ ಇದ್ದರೆ ಏನೋ ಒಂದಷ್ಟು ದುರಾದೃಷ್ಟದಲ್ಲೂ ಅದೃಷ್ಟವಿರುತ್ತದೆ. ಇಲ್ಲದಿದ್ದರೆ ಬೀದಿ ನಾಯಿಗಿಂತ ಕಡೆಯಾಗುವ ಸಾಧ್ಯತೆ ಹೆಚ್ಚು. ಈ ಒಂದು ಆಜಾಗರೂಕ ವಾಹನ ಚಾಲನೆಯಿಂದ ಅಥವಾ ನಿರ್ಲಕ್ಷ್ಯದಿಂದ ಬದುಕು ದಿಢೀರನೆ ಹೇಗೆ ಬದಲಾಗಬಹುದು ಊಹಿಸಿ.

ಸತ್ತವರಿಗೆ ಅದೇ ಕೊನೆ. ಆದರೆ ಅವರ ಅವಲಂಬಿತರಿಗೆ ಬದುಕು ಪ್ರಾರಂಭವಾಗುವುದೇ ಇಲ್ಲಿಂದ. ಇದು ಒಂದು ಕುಟುಂಬದ ಒಂದು ಕಥೆ ಮಾತ್ರ. ಹೀಗೆ ಸಾವಿಗೀಡಾಗುವ ಅನೇಕ ಕುಟುಂಬಗಳ ಕಥೆ ನಿರಂತರವಾಗಿ ಭಾರತೀಯ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಇದನ್ನು ಹೇಗೆ ಸ್ವೀಕರಿಸಬೇಕು ಎಂಬುದು ಅವರವರಿಗೆ ಅವರವರ ವಿವೇಚನೆಗೆ ಬಿಟ್ಟದ್ದು.

ಇತರರ ಕಷ್ಟಗಳಿಗೆ ಮರುಗುವುದು ಬೇರೆ, ನಾವೇ ಆ ಕಷ್ಟದಲ್ಲಿ ಸಿಕ್ಕಿಹಾಕಿಗೊಂಡಾಗ ಆಗುವ ಅನುಭವವೇ ಬೇರೆ, ವಿಮರ್ಶಾತ್ಮಕವಾಗಿ ಬರೆಯುವುದೇ ಬೇರೆ. ಸಮಾಜವೆಂದರೆ ಹೀಗೆಯೇ ಅಥವಾ ಇದಕ್ಕಿಂತ ಉತ್ತಮ ಮಟ್ಟದ ಜೀವನ ಸಾಗಿಸಲು ಸಾಧ್ಯವೇ. ಒಂದು ಅತ್ಯುತ್ತಮ ನಾಗರಿಕ ಸಮಾಜ ನಿರ್ಮಿಸಲು ನಾವು ಏನು ಮಾಡಬೇಕು, ನಮ್ಮ ಬದುಕು ಹೆಚ್ಚು ಸುಖಮಯವಾಗಲು ಹೇಗೆ ಬಾಳಬೇಕು, ಇದೆಲ್ಲವೂ ಬದುಕೊಡ್ಡುವ ಬಹುದೊಡ್ಡ ಸವಾಲೇ ಅಥವಾ ಬದುಕಿರುವುದೇ ಹೀಗೆ ಎಂದು ಭಾವಿಸಬೇಕೇ.

ಯೋಚಿಸಿದಂತೆಲ್ಲಾ ಮುಗಿಯದ ಈ ಪಯಣದ ಹಾದಿಯಲ್ಲಿ ಸುಮ್ಮನೆ ಈ ಮುಂಜಾನೆ ಬೆಳದಿಂಗಳಲ್ಲಿ ಆಕಾಶದತ್ತ ದಿಟ್ಟಿಸುತ್ತಾ, ಚಂದ್ರನನ್ನು ನೋಡುತ್ತಾ, ನಕ್ಷತ್ರಗಳನ್ನು ಎಣಿಸುತ್ತಿದ್ದೇನೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!