‘ಐತಿಹಾಸಿಕ ಪಾತ್ರಗಳಿಂದ ಕರ್ನಾಟಕ ಇತಿಹಾಸದ ವೈಭವ ಮರುಸೃಷ್ಟಿ ಮಾಡಿದವರು ಡಾ.ರಾಜ್ ಕುಮಾರ್’

ಡಾ.ರಾಜಕುಮಾರ್ ಅವರ ಕನ್ನಡ ನಾಡು, ನುಡಿಯ ಪ್ರೀತಿ ಅನನ್ಯವಾದದ್ದು. ಐತಿಹಾಸಿಕ ಪಾತ್ರಗಳ ಮೂಲಕ ಕರ್ನಾಟಕ ಇತಿಹಾಸದ ವೈಭವವನ್ನು ಮರುಸೃಷ್ಟಿ ಮಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ನಡೆದ  ಕನ್ನಡ ಅಭಿಮಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ.ರಾಜ್ ಕುಮಾರ್ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು  ಎಚ್ಚರಿಸಿರುವುದನ್ನು ಕನ್ನಡಿಗರು ಎಂದು ಮರೆಯುವುದಿಲ್ಲ.
ಸರಳ, ಸಜ್ಜನ, ನಿಷ್ಠಾವಂತ, ಪ್ರಾಮಾಣಿಕ, ಅಪ್ರತಿಮ  ಕಲಾವಿದ ಎಂದು ಎಲ್ಲಾ ಜನರ ಪ್ರೀತಿಗೆ ಪಾತ್ರರಾದ ಡಾ.ರಾಜಕುಮಾರ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.

ಡಾ.ರಾಜ್ ಕುಮಾರ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೀಡಲಾಗುವ ಅತ್ಯುನ್ನತ ಗೌರವವಾದ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ನಟರಾಗಿದ್ದಾರೆ. ಡಾ.ರಾಜಕುಮಾರ್ ತನಗೆ ಪ್ರೀತಿ, ಯಶಸ್ಸು ಹಾಗು ಬದುಕು ಕೊಟ್ಟ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸ್ಮರಣೀಯ ಕಾಣಿಕೆ ನೀಡಿದ್ದಾರೆ. ಡಾ.ರಾಜ್ ಕುಮಾರ್  ಅವರ ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ಅವರ ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಜೀವನಶೈಲಿಯನ್ನು  ಎಲ್ಲರೂ ಗೌರವಪೂರ್ವಕವಾಗಿ ಸ್ಮರಿಸುತ್ತಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಡಾ.ರಾಜ್ ಕುಮಾರ್ ಎಲ್ಲ ವರ್ಗದ ಪ್ರೇಕ್ಷಕರ ಮನಮುಟ್ಟುವ ಪಾತ್ರಗಳನ್ನು ಅಭಿನಯಿಸಿದ್ದಾರೆ. ಮೇರು ನಟರಾದ ಸಂದರ್ಭದಲ್ಲೂ ರೈತ, ಕೂಲಿಕಾರ, ವಾದ್ಯಗಾರ,  ಲಾಯರ್, ಅಧ್ಯಾಪಕ ಮುಂತಾದ ನೂರಾರು ಪಾತ್ರಗಳನ್ನು ಅಭಿನಯಿಸುವಾಗ ಸಾಕಷ್ಟು ಸಿದ್ದತೆ ಮಾಡಿಕೊಳ್ಳುತ್ತಿದ್ದರು.   ನಟನೆ ಮತ್ತು ಗಾಯನ ಎರಡರಲ್ಲೂ ಪ್ರಬುದ್ಧ ಕಲಾವಿದರಾದ ಡಾ.ರಾಜ್ ಕುಮಾರ್ ಎಲ್ಲಾ ಕಲಾವಿದರಿಗೂ ಮಾದರಿ ಆಗಿದ್ದಾರೆ. ಕನ್ನಡಿಗರ ಮನಸ್ಸಿನಲ್ಲಿ  ಡಾ.ರಾಜ್ ಕುಮಾರ್ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರುಗಳಾದ ಗುರುರಾಜಪ್ಪ,  ಟಿ.ಜಿ.ಮಂಜುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್,  ನಿಕಟಪೂರ್ವ  ಕೋಶಾಧ್ಯಕ್ಷ ನಂ.ಮಹಾದೇವ್, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ‌‌ ಆಯುಕ್ತ ವೆಂಕಟರಾಜು, ಸೂರ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ಸಿ.ಮಂಜುನಾಥ್,  ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ  ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಪ್ರತಿನಿಧಿ ನಾಗರತ್ನಮ್ಮ, ಷಫೀರ್,  ಕನ್ನಡ ಜಾಗೃತ ವೇದಿಕೆ ಜಿಲ್ಲಾ ಅಧ್ಯಕ್ಷ ನಾಗರಾಜು,  ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ  ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *