ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಖಾತಾ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದ ಶಾಸಕರ ಕಚೇರಿಯಲ್ಲಿ ಇ-ಖಾತಾ ಅಭಿಯಾನ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.4ರಂದು ನಗರಸಭೆ ಆವರಣದಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಈ ಅಭಿಯಾನ ಏ.22ರವರೆಗೆ ನಡೆಸಲಾಗುತ್ತದೆ ಎಂದರು.
ಕರ್ನಾಟಕ ಸರ್ಕಾರ ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಇ-ಖಾತಾ ಅಭಿಯಾನ ಆರಂಭಿಸಿದೆ. ಜನರು ಯಾವುದೇ ಊಹಾಪೋಹಗಳಿಗೆ ಕಿವಿಗೊಟ್ಟು ಮಧ್ಯವರ್ತಿಗಳಿಂದ ಕಿರುಕುಳ ಅನುಭವಿಸುವುದು ಬೇಡ. ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಪಡೆಯಬಹುದು ಎಂದು ಹೇಳಿದರು.
ಇ-ಖಾತಾ ಆಂದೋಲನದಲ್ಲಿ ಸ್ವತ್ತಿನ ಮಾಲೀಕರು ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಬೆಳಗ್ಗೆ 10-00 ರಿಂದ ಸಂಜೆ 5-00 ಗಂಟೆವರೆಗೆ ನಿಗದಿತ ದಾಖಲೆಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಬೇಕು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿ 30 ದಿನದಲ್ಲಿ ನಿಮ್ಮ ಮನೆಗೆ ಉಚಿತವಾಗಿ ಇ-ಖಾತಾ ನೀಡಲಾಗುವುದು. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಹಾಕಿದ 15 ದಿನದಲ್ಲಿ ಇ-ಖಾತಾ ನೀಡಲಾಗುವುದು ಎಂದರು.
ಎ-ರಿಜಿಸ್ಟರ್ ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು
1. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು /ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು /ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ.
2. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.
3. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
4. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ
5. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
6. ಮಾಲೀಕರ ಗುರುತಿನ ದಾಖಲೆ ಪ್ರತಿ.
ಬಿ- ರಿಜಿಸ್ಟರ್ ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು
1. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ: 10-09-2024 ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು /ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು.
2. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ,
3. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
4. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
5. ಮಾಲೀಕರ ಗುರುತಿನ ದಾಖಲೆ ಪ್ರತಿ.