Categories: ಲೇಖನ

ಏನ್ ಶಾಕ್ ಆಯ್ತಾ..? ಇದು ಮಾರಣ್ಣನ ಕೋಟೆ ಕಣೋ….

” ಏಯ್, ಯಾಕ್ ಹಂಗ್ ನೋಡ್ತಾ ಇದೀಯಾ ‌? ಶಾಕ್ ಆಯ್ತಾ ? ಆಗಿರಲೇಬೇಕು. ಇದು ನನ್ನೂರು, ನನ್ ಏರಿಯಾ, ಇದು ಆರ್ಮುಗಂ ಕೋಟೆ ಕಣೋ. ಯಾವ ಪೋಲೀಸ್ ಯೂನಿಫಾರ್ಮ್ ಬಟ್ಟೆಯಲ್ಲಿ ನನ್ನ ಅವಮಾನ ಮಾಡಿದಿಯೋ ಅದೇ ಯೂನಿಫಾರ್ಮ್ ಬಿಚ್ಚಿ, ಬಟ್ಟೆ ಬರೆ ಇಲ್ಲದೇ ನಿನ್ನ ಓಡಿಸ್ತೀನಿ.

ಇನ್ನು ಮುಂದೆ ನಮ್ಮ ಹುಡುಗರು ನಿನಗೆ ತೊಂದರೆ ಕೊಡ್ತಾನೆ ಇರ್ತಾರೆ…..”

ಕೆಲವು ವರ್ಷಗಳ ಹಿಂದೆ ಬಂದ ಕನ್ನಡ ಸಿನಿಮಾದ ಜನಪ್ರಿಯ ಸಂಭಾಷಣೆ ಇದು. ಇದನ್ನು ಆಗಾಗ ನಾಟಕ, ಧಾರವಾಹಿ, ರಿಯಾಲಿಟಿ ಶೋ ಮತ್ತು ಹರಟೆಗಳಲ್ಲಿ ಮತ್ತೆ ಮತ್ತೆ ಉಪಯೋಗಿಸುತ್ತಾರೆ……

ಈ ಮಾತುಗಳು ಇಲ್ಲಿ ನೆನಪಾಗಲು ಕಾರಣ, ನಿನ್ನೆ ಮಾಜಿ ಸಚಿವರಾದ ಶ್ರೀ ಎಚ್ ಡಿ ರೇವಣ್ಣ ಅವರಿಗೆ ಕಿಡ್ನಾಪ್ ಮತ್ತು ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ನ್ಯಾಯಾಲಯ ಜಾಮೀನು ನೀಡಿದ ಸಂದರ್ಭದಲ್ಲಿ ಯಾಕೋ ವಿಹಲ್ಲವಗೊಂಡ ಮನಸ್ಸು ಇದನ್ನು ಮತ್ತೆ ಮತ್ತೆ ನೆನಪಿಸಿತು…..

ಭಾರತದ ಬಹುತೇಕ ಜೈಲುಗಳಲ್ಲಿ ಸಜಾ ಖೈದಿಗಳು ಮತ್ತು ವಿಚಾರಣಾ ಆರೋಪಿಗಳು ಬಂಧಿಗಳಾಗಿದ್ದಾರೆ. ಅವರಲ್ಲಿ ಶೇಕಡ 90% ಕ್ಕೂ ಹೆಚ್ಚು ಜನ ಅಪರಾಧಗಳಲ್ಲಿ ಭಾಗಿಯಾಗಿದ್ದರೂ ಸಹ ಹಣವಿಲ್ಲದೆ, ಒಳ್ಳೆಯ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೆ, ಜಾಮೀನು ಸಿಕ್ಕರೂ ಅದಕ್ಕೆ ಬೇಕಾದ ದಾಖಲೆಗಳನ್ನು ಪೂರೈಸಲಾಗದೆ, ಒಟ್ಟಿನಲ್ಲಿ ಅಲ್ಲಿಯೂ ತಮ್ಮ ದುರ್ಬಲ ಆರ್ಥಿಕ, ಸಾಮಾಜಿಕ ಕಾರಣಕ್ಕಾಗಿ ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ. ಹಾಗೆಯೇ ಕೆಲವು ನಿರಪರಾಧಿಗಳು ಸಹ ಇದ್ದಾರೆ……..

ಹೌದು, ನಿಜವಾದ ಅಪರಾಧಿಗಳ ಬಗ್ಗೆ ಸಹಾನುಭೂತಿ ಬೇಡ. ಅವರು ಮಾಡಿದ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಲಿ. ಆದರೆ ಬಲಿಷ್ಠ ರಾಜಕಾರಣಿಯೊಬ್ಬರು ಎಂತಹ ಗಂಭೀರ ಆರೋಪಗಳಿದ್ದರು ಪೊಲೀಸರ ದುರ್ಬಲ ತನಿಖೆಯಿಂದಲೋ, ವಕೀಲರ ಚಾಕಚಕ್ಯತೆಯಿಂದಲೋ, ಕಾನೂನಿನ ಒಳಸುಳಿಗಳ ದುರುಪಯೋಗಪಡಿಸಿಕೊಳ್ಳುವುದರಿಂದಲೋ ಒಟ್ಟಿನಲ್ಲಿ ಅಲ್ಲಿಯೂ ಜಯಶೀಲರಾಗುತ್ತಾರೆ ಎಂದರೆ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಉಂಟಾಗುತ್ತದೆ……

ನ್ಯಾಯಾಧೀಶರು ಸಹ ಸಾಕಷ್ಟು ಸಾಂದರ್ಭಿಕ ಸಾಕ್ಷಿಗಳನ್ನು ಗಮನಿಸಿ ಕೆಳಹಂತದ ನ್ಯಾಯಾಲಯಗಳಲ್ಲಿ, ಇಂತಹ ಸಾರ್ವಜನಿಕ ಗಮನಸೆಳೆದ ಪ್ರಕರಣಗಳಲ್ಲಿ ಕನಿಷ್ಠ ಜಾಮೀನನ್ನು ನಿರಾಕರಿಸಬಹುದಿತ್ತು. ಮೇಲಿನ ನ್ಯಾಯಾಲಯ ತೀರ್ಮಾನ ಕೈಗೊಳ್ಳಲು ಬಿಡಬಹುದಿತ್ತು……

ನಮಗೆಲ್ಲ ತಿಳಿದಿರುವಂತೆ, ಈ ರೀತಿಯ ಗಂಭೀರ ಪ್ರಕರಣಗಳಲ್ಲಿ ಅವರ ಮಗ ಇನ್ನು ನಾಪತ್ತೆಯಾಗಿರುವಾಗ, ದಿನಕ್ಕೊಬ್ಬರು ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ದೂರುಗಳನ್ನು ದಾಖಲಿಸುತ್ತಿರುವಾಗ, ಇನ್ನೂ ಅನೇಕರ, ಬಂಧನವಾಗಬೇಕಾಗಿರುವಾಗ, ತನಿಖೆಯು ಪ್ರಾಥಮಿಕ ಹಂತದಲ್ಲಿ ಇರುವಾಗ ಈ ರೀತಿಯ ಜಾಮೀನು ಉಂಟು ಮಾಡಬಹುದಾದ ಪರಿಣಾಮಗಳನ್ನು ಊಹಿಸಿ ತೀರ್ಪು ಪ್ರಕಟಿಸಬಹುದಿತ್ತು…..

ಹೌದು, ನ್ಯಾಯಾಧೀಶರು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅವರಿಗೂ ಕೆಲವು ಮಿತಿಗಳಿವೆ ಹಾಗೂ ವಿವೇಚನಾ ಅಧಿಕಾರವಿದೆ, ಪ್ರತಿ ಪ್ರಕರಣ ವಿಭಿನ್ನ ಎಂಬುದನ್ನು ಒಪ್ಪಿಕೊಳ್ಳುತ್ತಾ, ವ್ಯವಸ್ಥೆಯ ಒಟ್ಟು ಹಿತಾಸಕ್ತಿ ಮತ್ತು ಮಾನವೀಯ ಮೌಲ್ಯಗಳ ರಕ್ಷಿಸುವ ಹಾಗು ಸಮ ಸಮಾಜದ ಕನಸಿನ ಹಿನ್ನೆಲೆಯಲ್ಲಿ ಮಾತ್ರ ಈ ಅಭಿಪ್ರಾಯ ವ್ಯಕ್ತಪಡಿಸಬೇಕಾಗಿದೆ…..

ಸಹಜವಾಗಿಯೇ ಇಂತಹ ದೊಡ್ಡ ಅಪರಾಧ ಮಾಡಿದರು ಅತ್ಯುತ್ತಮ ವಕೀಲರ ನೆರವಿನಿಂದ ಕೆಲವೇ ದಿನಗಳಲ್ಲಿ ಜೈಲಿನಿಂದ ಹೊರಗೆ ಬಂದ ಕಾರಣ ಏನು ಮಾಡಿದರು ಜಯಿಸಬಹುದು ಎಂಬ ಆತ್ಮವಿಶ್ವಾಸ ಆರೋಪಿಗೆ ಮೂಡಿದರೆ, ಅವರ ವಿರುದ್ಧವಾಗಿ ದೂರು ದಾಖಲಿಸಿರುವವರು ಕುಸಿದು ಹೋಗುತ್ತಾರೆ. ನಮಗೆ ನ್ಯಾಯ ಸಿಗುವುದು ಅನುಮಾನ ಎಂದು ಯಾವ ಕಾರಣಕ್ಕೂ ಅವರ ವಿರುದ್ಧ ಮಾತನಾಡುವುದಿಲ್ಲ. ಇಡೀ ಮೊಕದ್ದಮೆ ಅತ್ಯಂತ ಜಾಳು ಜಾಳು ಆಗುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ಅವರ ಹಿಂಬಾಲಕರು ಬಿಡುಗಡೆಗೆ ಮುನ್ನವೇ ಜೈಲಿನ ಮುಂದೆ ಸಂಭ್ರಮಾಚರಣೆ ಮಾಡಿ, ಅವರ ಕ್ಷೇತ್ರದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದೆ. ಇದು ದೂರುದಾರರಲ್ಲಿ ಆತಂಕ ಸೃಷ್ಟಿಸುತ್ತದೆ. ಜೊತೆಗೆ ಅತ್ಯಾಚಾರಿ, ಕಿಡ್ನಾಪ್ ಆರೋಪಿಗೆ ಈ ರೀತಿಯ ಸ್ವಾಗತ ನೀಡುವ ಹಂತಕ್ಕೆ ನಮ್ಮ ಸಮಾಜ ಬಂದಾಗಿದೆ…….

ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಸಿನಿಮಾದ ಈ ಸಂಭಾಷಣೆ ನೆನಪಾಗುತ್ತದೆ. ಸಿನಿಮಾದಲ್ಲಾದರೆ ಅಂತಿಮವಾಗಿ ನಾಯಕ ನಟ, ಖಳನಾಯಕನನ್ನು ಚಚ್ಚಿ ಬಿಸಾಡುತ್ತಾನೆ. ಜನರು ಕೂಡ ಅದನ್ನು ನೋಡಿ ಚಪ್ಪಾಳೆ ಹೊಡೆಯುತ್ತಾರೆ. ಅದೊಂದು ಮನರಂಜನೆಯ ಮಟ್ಟಕ್ಕೆ ಮುಕ್ತಾಯವಾಗುತ್ತದೆ. ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲ……

ನಮ್ಮಂತವರು ಸಣ್ಣ ಪುಟ್ಟ ಪ್ರತಿಭಟನೆ, ಮೆರವಣಿಗೆ, ಧಿಕ್ಕಾರಗಳನ್ನು ಕೂಗುವುದು ಅಥವಾ ಈ ರೀತಿ ಬರೆದು ನಮ್ಮ ಭಾವನೆಗಳನ್ನು ಆಕ್ರೋಶವನ್ನು, ತುಮುಲಗಳನ್ನು, ಅಸಹಾಯಕತೆಯನ್ನು ಹೊರ ಹಾಕುವುದು ಮಾತ್ರ ಸಾಧ್ಯ. ಒಬ್ಬ ಸಾಮಾನ್ಯ ವ್ಯಕ್ತಿ ಈ ರೀತಿಯ ಘಟನೆಯಲ್ಲಿ ಭಾಗಿಯಾಗಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಪೋಲೀಸ್ ದಾಖಲೆಗಳಲ್ಲಿ ದೊಡ್ಡ ಅಪರಾಧ ಮಾಡಿಯೂ ಕೇವಲ ಐದು ದಿನದ ಅಂತರದಲ್ಲಿ ಜೈಲಿನಿಂದ ಜಾಮೀನು ಪಡೆದು ಹೊರಬರುವ ದುರ್ಬಲ ವ್ಯವಸ್ಥೆ ನಮ್ಮದಾದರೆ ಮಹಿಳೆಯರ ಮೇಲಿನ ಅಪರಾಧಗಳು ಮಾತ್ರವಲ್ಲ ಎಲ್ಲ ರೀತಿಯ ಅಪರಾಧಿಗಳಿಗೂ ಬಹುದೊಡ್ಡ ಬಾಗಿಲು ತೆರೆದಂತಾಗುತ್ತದೆ……

ಸಾರ್ವಜನಿಕರೇ ಎಚ್ಚರ,
ನಮ್ಮ ಸಮಾಜ ತೀರಾ ಅಧೋಗತಿಗೆ ಇಳಿಯುತ್ತಿದೆ. ನಾವುಗಳು ಯಾವುದೋ ರಾಜಕೀಯ ಪಕ್ಷಕ್ಕೋ, ಧರ್ಮಕ್ಕೋ, ಜಾತಿಗೋ ಸೀಮಿತವಾಗಿ ಯೋಚಿಸತೊಡಗಿದರೆ ಮುಂದಿನ ಸಮಾಜದ ದಿಕ್ಕು ನಮ್ಮ ಊಹೆಗೂ ನಿಲುಕುವುದಿಲ್ಲ. ಒಬ್ಬ ಪ್ರಖ್ಯಾತ, ಚಾಣಾಕ್ಷ ವಕೀಲ ಎಂತಹ ಕ್ರಿಮಿನಲ್ ಅಪರಾಧಿಯನ್ನು, ಆರೋಪಿಯನ್ನು ನಿರಪರಾಧಿಯಂತೆ ವಾದ ಮಾಡಿ ಗೆಲ್ಲಲು ಸಾಧ್ಯವಾಗಬಹುದಾದರೆ ಈ ದೇಶದಲ್ಲಿ ಅಪರಾಧಗಳಿಗೆ ಕೊನೆಯೇ ಇರುವುದಿಲ್ಲ. ಅತ್ಯಾಚಾರಗಳು, ಕೊಲೆಗಳು, ಭ್ರಷ್ಟಾಚಾರ ಸಹಜವಾಗುತ್ತಾ ಸಾಗುತ್ತದೆ…….

ಆತ್ಮ ಸಾಕ್ಷಿಯನ್ನು ಮರೆತ ವಾದಗಳೇ ಮುಖ್ಯವಾಗುವುದಾದರೆ, ಸಂತ್ರಸ್ತೆಯರು ಕೆಟ್ಟ ನಡವಳಿಕೆಯವರೆಂದು, ಅವರನ್ನು ಶೋಷಿಸಿದ ಪ್ರಜ್ವಲ್ ರೇವಣ್ಣ ಮಹಾನ್ ಸಮಾಜಸೇವಕರೆಂದು, ದೈವಾಂಶ ಸಂಭೂತರೆಂದು ವಾದದ ಮೂಲಕ ಅಥವಾ ಸಾಕ್ಷಿಗಳ ಮೂಲಕವೇ ದೃಢಪಡಿಸಬಹುದು. ಹಣ ಅಧಿಕಾರ ಜಾತಿಯ ಆಧಾರದ ಮೇಲೆ ನ್ಯಾಯ ನಿರ್ಣಯವಾಗುವುದಾದರೆ ನ್ಯಾಯಕ್ಕೆ ಬೆಲೆಯೆಲ್ಲಿ. ಕಾನೂನು ಸಹ ಉಳ್ಳವರ ಪರವಾಗಿ ತಿರುಗಿಸುವ ಸಾಧ್ಯತೆಯೂ ಹೆಚ್ಚಾದರೆ ನ್ಯಾಯಾಲಯಕ್ಕೂ ಬೆಲೆಯಿಲ್ಲ……

ಈ ಸುದ್ದಿಗಳನ್ನು ಕೇಳಲೇ ಹಿಂಸೆಯಾಗುತ್ತಿದೆ. ರಾಷ್ಟ್ರವೇ ಬೆಚ್ಚಿ ಬಿದ್ದಿರುವ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಪೂಜನೀಯ ಸ್ಥಾನ ಹೊಂದಿರುವ, ನಮ್ಮದೇ ಮನೆಯ ಹೆಣ್ಣು ಮಕ್ಕಳ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದ ದೌರ್ಜನ್ಯವಾಗಿರುವಾಗ, ಆ ದೌರ್ಜನ್ಯ ನಡೆಸಿದವರ ಪರವಾಗಿಯೇ ಸಾಕಷ್ಟು ಜನ ಬೆಂಬಲಕ್ಕೆ ನಿಂತಿರುವಾಗ, ಭವಿಷ್ಯದ ಸಮಾಜ ಕಣ್ಣ ಮುಂದೆ ಬಂದು ವಿಷಾದವೆನಿಸುತ್ತದೆ…..

ಇನ್ನು ಯೋಚಿಸುವ, ಪ್ರತಿಕ್ರಿಯಿಸುವ, ಕಾರ್ಯೋನ್ಮುಖರಾಗುವ ಸರದಿ ನಿಮ್ಮದು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಹುಟ್ಟಿಸುವವನೂ ಅವನೇ…. ಸಾಯಿಸುವವನೂ ಅವನೇ…

ದೇವರು ಎಷ್ಟೊಂದು ಒಳ್ಳೆಯವನಲ್ಲವೇ........ ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು…

17 minutes ago

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

10 hours ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

12 hours ago

ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ

ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭರತ್ ಹೆಗ್ಗಡೆ, ಲೋಕಾಯುಕ್ತ ಬಲೆಗೆ…

14 hours ago

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

22 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

1 day ago