ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನದ ಪ್ರಥಮ ಭಾಷಾ ವಿಷಯದ ಪರೀಕ್ಷೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಸೂತ್ರವಾಗಿ ನಡೆದಿದ್ದು, ತೂಬಗೆರೆ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ ಟಿವಿ ಕ್ಯಾಮರಾ ಕಿತ್ತು ಹಾಕಿರುವ ಅಹಿತಕರ ಪ್ರಕರಣ ಹೊರತುಪಡಿಸಿದರೆ ಯಾವುದೇ ಪರೀಕ್ಷಾ ಅಕ್ರಮಗಳ ಕುರಿತು ವರದಿಯಾಗಿಲ್ಲ.
ಇಂದು(ಶುಕ್ರವಾರ) ನಡೆದ ಪ್ರಥಮ ಭಾಷೆ ಪರೀಕ್ಷೆಗೆ 27 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ತಾಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3256 ಹೊಸ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 3229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಬಿಟ್ಟು , ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ನೋಂದಣಿ ಸಂಖ್ಯೆ ಹುಡುಕಿ, ಕೊಠಡಿಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.